ಸೋಮವಾರ, ನವೆಂಬರ್ 18, 2019
27 °C
ಕಲಬುರ್ಗಿ, ಆಳಂದ, ಚಿಂಚೋಳಿ ತಾಲ್ಲೂಕಿನಿಂದ ಕ್ಷೇತ್ರ ಸೇರ್ಪಡೆ

ಕಮಲಾಪುರ ತಾ.ಪಂ ರಚನಾಕಾರ್ಯ ಚುರುಕು

Published:
Updated:
Prajavani

ಕಮಲಾಪುರ: ಕಮಲಾಪುರ ತಾಲ್ಲೂಕು ಪಂಚಾಯಿತಿ ರಚನೆ ಕಾರ್ಯಗಳು ಅಕ್ಟೋಬರ್‌ 14ರಿಂದಲೇ ತುರುಸುಗೊಂಡಿವೆ. ನೂತನ ತಾಲ್ಲೂಕುಗಳಲ್ಲಿ ಪಂಚಾಯಿ ತಿಗಳನ್ನು ಜಾರಿಗೊಳಿಸುವಂತೆ ರಾಜ್ಯಪತ್ರ ಹೊರಡಿಸಲಾಗಿದೆ. ಇದರಲ್ಲಿ ಕಲಬುರ್ಗಿ, ಆಳಂದ, ಚಿಂಚೋಳಿ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಿಂದ ಕೆಲವು ಕ್ಷೇತ್ರಗಳನ್ನು ಕೈ ಬಿಟ್ಟು ಅವುಗಳನ್ನು ಕಮಲಾಪುರ ತಾಲ್ಲೂಕು ಪಂಚಾಯಿತಿಗೆ ಸೇರ್ಪಡೆಗೊಳಿಸಲಾಗಿದೆ.

ಈ ಹಿಂದಿನ ಕಲಬುರ್ಗಿ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ 49 ಗ್ರಾಮ, ಆಳಂದದ 15 ಗ್ರಾಮ ಹಾಗೂ ಚಿಂಚೋಳಿಯ ಮೂರು ಗ್ರಾಮಗಳನ್ನು ಕಮಲಾಪುರ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಗೆ ಸೇರಿಸಲಾಗಿದೆ. ಈ ಗ್ರಾಮಗಳನ್ನು ಒಳಗೊಂಡ ಕ್ಷೇತ್ರ ಹಾಗೂ ಪ್ರತಿನಿಧಿಗಳು ಸೇರ್ಪಡಿಸಿ ಕಮಲಾಪುರ ತಾಲ್ಲೂಕು ಪಂಚಾಯಿತಿ ರಚನೆ ಮಾಡುವಂತೆ ತಿಳಿಸಲಾಗಿದೆ.

ಪಂಚಾಯತ್‌ ರಾಜ್‌ ಅಧಿನಿಯಮ 1993 ಪ್ರಕರಣ 119 ಮತ್ತು 120ರಲ್ಲಿ ನಿರ್ದಿಷ್ಟಪಡಿಸಿರುವಂತೆ ಹಾಗೂ ಪ್ರಕರಣ 302
(ಎ)ತಿಳಿಸಿದಂತೆ ಈಗಾಗಲೇ ಇರುವ ಸದಸ್ಯರ ಹುದ್ದೆಯ ಅವಧಿಯಲ್ಲಿ ಅಂತಹ ತಾಲ್ಲೂಕು ಪರಿಮಿತಿಗಳನ್ನು ಬದಲಾವಣೆ ಮಾಡಿ ಹೊಸ ತಾಲ್ಲೂಕು ಪಂಚಾಯಿತಿ ರಚಿಸಲಾಗುವುದು.

ರಚನೆಯಾದ ಈ ಹೊಸ ತಾಲ್ಲೂಕು ಪಂಚಾಯಿತಿಗೆ ಸೇರ್ಪಡೆಯಾದ ಪ್ರದೇಶದ ಪೂರ್ಣ ಅಥವಾ ಬಹುಭಾಗ ಇರುವ ಚುನಾವಣಾ ಕ್ಷೇತ್ರಗಳನ್ನು ಪ್ರತಿನಿಧಿಸುವ ತಾಲ್ಲೂಕು ಪಂಚಾಯಿತಿ ಸದಸ್ಯರನ್ನು ಹೊಂದಿರತಕ್ಕದ್ದು. ಪಂಚಾಯತ್‌ ರಾಜ್‌ ಅಧಿನಿಯಮ 1993ರ ಪ್ರಕರಣ 133 ಅಡಿಯಲ್ಲಿ ಹೊಸದಾಗಿ ರಚನೆಯಾಗಿರುವ ಈ ತಾಲ್ಲೂಕು ಪಂಚಾಯಿತಿಗೆ ಹಾಗೂ ಅಸ್ತಿತ್ವದಲ್ಲಿರುವ ತಾಲ್ಲೂಕು ಪಂಚಾಯಿತಿಗೆ ಸದಸ್ಯರನ್ನು ಅಧಿಸೂಚಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ತಿಳಿಸಲಾಗಿದೆ.

ಅಸ್ತಿತ್ವದಲ್ಲಿರುವ ತಾಲ್ಲೂಕು ಪಂಚಾಯಿತಿಯಲ್ಲಿನ ನಿಧಿ ಹಾಗೂ ಉಳಿದೆಲ್ಲ ಸ್ವತ್ತುಗಳನ್ನು ವರ್ಗಾಯಿಸತಕ್ಕದ್ದು. ಶೇ 50ರಷ್ಟು ನಿಧಿಯನ್ನು
ಪ್ರದೇಶದ ಆಧಾರದ ಮೇಲೆ ಹಾಗೂ ಶೇ 50ರಷ್ಟು ನಿಧಿಯನ್ನು ಜನಸಂಖ್ಯೆ ಆಧಾರದ ಮೇಲೆ ವಿಭಜಿಸಿ ಸಂಬಂಧಿಸಿದ ತಾಲ್ಲೂಕು ಪಂಚಾಯಿತಿಗಳಿಗೆ ವರ್ಗಾಯಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿ ಆದೇಶ ಹೊರಡಿಸಲಾಗಿದೆ.

ಪ್ರತಿಕ್ರಿಯಿಸಿ (+)