ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರತ್ಯೇಕ ಕಳವು ಪ್ರಕರಣ: ಆರು ಮಂದಿ ಬಂಧನ

Published 28 ಜೂನ್ 2024, 6:47 IST
Last Updated 28 ಜೂನ್ 2024, 6:47 IST
ಅಕ್ಷರ ಗಾತ್ರ

ಕಲಬುರಗಿ: ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮೊಬೈಲ್ ಹಾಗೂ ಚಿನ್ನಾಭರಣ ಕಳವು ಮಾಡಿದ ಸಂಬಂಧ ಆರು ಮಂದಿ ಆರೋಪಿಗಳನ್ನು ಬಂಧಿಸಿದ ಪೊಲೀಸರು, ಅವರಿಂದ ಸ್ವತ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಸ್ಟೇಷನ್‌ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವತಿಯಿಂದ ಮೊಬೈಲ್‌ ಕಸಿದು ಪರಾರಿಯಾಗಿದ್ದ ಫಿರೋಜ್ ಮಹಮದ್ ಶೇಖ್ (22) ಹಾಗೂ ಶೇಖ್ ಅಮನ್ (19) ಎಂಬುವವರನ್ನು ಬಂಧಿಸಲಾಗಿದೆ. ಅವರಿಂದ ₹ 17 ಸಾವಿರ ಮೌಲ್ಯದ ಮೊಬೈಲ್ ಜಪ್ತಿ ಮಾಡಲಾಗಿದೆ.

ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ಮೊಬೈಲ್ ಕಸಿದುಕೊಂಡು ಮೂವರು ಪರಾರಿಯಾಗಿದ್ದರು. ಈ ಮೂವರ ಪೈಕಿ ಶೇಖ್‌ ಜುನೈದ್ ಹಾಗೂ ಮಹಮದ್ ಪರ್ವೇಜ್‌ ಅವರನ್ನು ಬಂಧಿಸಿ, ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್ ಹತ್ತುವಾಗ ಮಹಿಳೆಯ ವ್ಯಾನಿಟಿ ಬ್ಯಾಗ್‌ನಿಂದ 40 ಗ್ರಾಂ ಚಿನ್ನಾಭರಣ ಕದ್ದ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಶಕೀಲಾಬಾಯಿ (57) ಹಾಗೂ ಲಕ್ಷ್ಮಿ ಭೀಮಾ ಸಕಟ (30) ಎಂಬುವವರನ್ನು ಬಂಧಿಸಿ, ₹ 2.48 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

ಸರಕು ವಾಹನ ಕಳವು: ನಗರದ ಹೋಟೆಲ್‌ವೊಂದರ ಸಮೀಪದಲ್ಲಿ ಸರಕು ವಾಹನ ನಿಲ್ಲಿಸಿ, ಉಪಾಹಾರ ಮಾಡಿ ವಾಪಸ್ ಬರುವಷ್ಟರಲ್ಲಿ ವಾಹನ ಕದ್ದೊಯ್ದ ಘಟನೆ ನಡೆದಿದೆ.

ಆಳಂದ ತಾಲ್ಲೂಕಿನ ಕಮಲಾನಗರದ ಸಂತೋಷ ವಿಠಲ ಅವರಿಗೆ ಸೇರಿದ ₹ 4.51 ಲಕ್ಷ ಮೌಲ್ಯದ ಟಾಟಾ ಏಸ್ ಸರಕು ವಾಹನ ಕಳುವಾಗಿದೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT