ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ಬಡ್ತಿ ಮೊತ್ತ ವಾಪಸ್ ಖಂಡಿಸಿ ಪ್ರತಿಭಟನೆ

ವಿಶ್ವವಿದ್ಯಾಲಯದಿಂದಲೇ ತಪ್ಪು: ‍ಗುಲಬರ್ಗಾ ವಿ.ವಿ. ಪ್ರಾಧ್ಯಾಪಕರ ಆರೋಪ
Published 1 ಮಾರ್ಚ್ 2024, 5:02 IST
Last Updated 1 ಮಾರ್ಚ್ 2024, 5:02 IST
ಅಕ್ಷರ ಗಾತ್ರ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ 34 ಮಂದಿಗೆ ಸಹ ಪ್ರಾಧ್ಯಾಪಕರ ಹುದ್ದೆಯಿಂದ ಪ್ರಾಧ್ಯಾಪಕ ಹುದ್ದೆಗೆ ಪದೋನ್ನತಿ ನೀಡುವ ಸಂದರ್ಭದಲ್ಲಿ ನೀಡಲಾದ ವೇತನ ಬಡ್ತಿ ಬಗ್ಗೆ ಮಹಾಲೆಕ್ಕಪರಿಶೋಧಕರ ವರದಿ ಆಕ್ಷೇಪಣೆ ಮಾಡಿದೆ ಎಂಬ ಕಾರಣಕ್ಕೆ ವಾಪಸ್ ಪಡೆಯುತ್ತಿರುವ ಕ್ರಮವನ್ನು ಖಂಡಿಸಿ ಪ್ರಾಧ್ಯಾಪಕರು ಗುರುವಾರ ವಿಶ್ವವಿದ್ಯಾಲಯದ ಕಾರ್ಯಸೌಧದ ಎದುರು ಪ್ರತಿಭಟಿಸಿದರು.

ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿಯೂ ವೇತನ ನೋಷನಲ್ ಇನ್‌ಕ್ರಿಮೆಂಟ್ ನೀಡಲಾಗಿದ್ದು, ಅಲ್ಲಿ ಈಗಾಗಲೇ ಪ್ರಾಧ್ಯಾಪಕರಿಗೆ ನೀಡಿದ ವೇತನದಿಂದ ವಾಪಸ್ ಪಡೆಯುತ್ತಿಲ್ಲ. ಈ ಬಗ್ಗೆ ಮಹಾಲೆಕ್ಕಪರಿಶೋಧಕರು ಹಾಗೂ ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದನ್ನು ಬಿಟ್ಟು ಪ್ರಾಧ್ಯಾಪಕರ ಸಂಬಳದಿಂದ ಕಳೆದ ಎರಡು ತಿಂಗಳಿಂದ ₹ 33 ಸಾವಿರದಿಂದ ₹ 40 ಸಾವಿರದವರೆಗೆ ಕಡಿತ ಮಾಡುತ್ತಿರುವ ಕ್ರಮ ಸರಿಯಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗುಲಬರ್ಗಾ ವಿಶ್ವವಿದ್ಯಾಲಯ ಸ್ನಾತಕೋತ್ತರ ಶಿಕ್ಷಕರ ಸಂಘದ ಕಾರ್ಯದರ್ಶಿ ಪ್ರೊ.ರಮೇಶ ಲಂಡನಕರ್, ‘ಮಹಾಲೆಕ್ಕಪರಿಶೋಧಕರ ಆಕ್ಷೇಪಣೆಗೆ ಅನುಪಾಲನಾ ವರದಿ ಸಲ್ಲಿಸಿದರೆ ಮುಗಿದು ಹೋಗುತ್ತಿತ್ತು. ವಿಶ್ವವಿದ್ಯಾಲಯವು ಸ್ವಾಯತ್ತ ಸಂಸ್ಥೆಯಾಗಿದ್ದು, ವೇತನ ಬಡ್ತಿಯನ್ನು ಮುಂದುವರಿಸಿಕೊಂಡು ಹೋಗುವ ಎಲ್ಲ ಅವಕಾಶವೂ ಇತ್ತು. ಆದರೆ, ಪ್ರಾಧ್ಯಾಪಕರಿಗೆ ಕಿರುಕುಳ ನೀಡಬೇಕು ಎಂಬ ಏಕೈಕ ಉದ್ದೇಶದಿಂದ ನಮ್ಮ ವೇತನದಿಂದ ಇನ್‌ಕ್ರಿಮೆಂಟ್ ಹಣವನ್ನು ಕಡಿತ ಮಾಡುತ್ತಿದೆ. ಗುಲಬರ್ಗಾ ವಿ.ವಿ. ಅಷ್ಟೇ ಅಲ್ಲದೇ ಇತರೆ ವಿ.ವಿ.ಗಳಲ್ಲಿಯೂ ಪದೋನ್ನತಿ ಸಂದರ್ಭದಲ್ಲಿ ನೋಷನಲ್‌ ಇನ್‌ಕ್ರಿಮೆಂಟ್ ನೀಡಲಾಗಿದೆ. ಅಲ್ಲಿ ಎಲ್ಲಿಯೂ ಪ್ರಾಧ್ಯಾಪಕರ ವೇತನದಿಂದ ವೇತನ ಬಡ್ತಿ ಲೆಕ್ಕದಲ್ಲಿ ನೀಡಿದ ಹಣವನ್ನು ವಾಪಸ್ ಪಡೆಯುತ್ತಿಲ್ಲ. ಇಲ್ಲಿ ಉದ್ದೇಶಪೂರ್ವಕವಾಗಿ ಪಡೆಯಲಾಗುತ್ತಿದೆ’ ಎಂದು ದೂರಿದರು. 

ಸಂಘದ ಅಧ್ಯಕ್ಷ ಪ್ರೊ.ಜಿ.ಶ್ರೀರಾಮುಲು ಮಾತನಾಡಿ, ‘ಹಣಕಾಸು ಇಲಾಖೆಯು ಯುಜಿಸಿ ನಿಯಮದಂತೆ ಒಂದು ನೋಷನಲ್ ವೇತನ ಬಡ್ತಿ ನೀಡಲು ಅವಕಾಶ ಇರುವುದಿಲ್ಲವೆಂದು ತಿಳಿಸಿದ್ದಾರೆ. ಇದಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯ ಸ್ನಾತಕೋತ್ತರ ಶಿಕ್ಷಕರ ಸಂಘವು ಯುಜಿಸಿಗೆ ಪತ್ರ ಬರೆದಿತ್ತು. ಇದಕ್ಕೆ ಸ್ಪಂದಿಸಿದ ಯುಜಿಸಿಯು 2022ರಲ್ಲಿ ಸಹ ಪ್ರಾಧ್ಯಾಪಕರುಗಳು ಪದೋನ್ನತಿ ಹೊಂದಿ ಪ್ರಾಧ್ಯಾಪಕ ಹುದ್ದೆಯ ವೇತನ ಶ್ರೇಣಿ ₹ 37,400ರಿಂದ ₹ 67 ಸಾವಿರದಲ್ಲಿ ಮುಂದುವರಿದಾಗ ಮೂಲವೇತನದಲ್ಲಿ ಬದಲಾವಣೆ ಇರದ ಕಾರಣ ಅವರು ಒಂದು ವೇತನ ಬಡ್ತಿ ಪಡೆಯಲು ಅರ್ಹರಾಗಿದ್ದಾರೆ ಎಂದು ಸ್ಪಷ್ಟೀಕರಣ ನೀಡಿದೆ. ಯುಜಿಸಿ ಮಾರ್ಗಸೂಚಿಯಂತೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಇಲಾಖೆಯ ಪದವಿ ಕಾಲೇಜುಗಳ ಪ್ರಾಧ್ಯಾಪಕರಿಗೆ ಒಂದು ಹೆಚ್ಚುವರಿ ವೇತನ ಬಡ್ತಿ ನೀಡಲಾಗಿದೆ’ ಎಂದರು. 

ಪ್ರಾಧ್ಯಾಪಕ ಪ್ರೊ.ಎಚ್‌.ಟಿ. ಪೋತೆ ಮಾತನಾಡಿ, ‘ಒಂದು ಬಾರಿ ಪಾವತಿಸಿದ ಮೊತ್ತವನ್ನು ಯಾವುದೇ ಕಾರಣಕ್ಕೂ ನಮ್ಮ ಅನುಮತಿ ಇಲ್ಲದೇ ವಾಪಸ್ ಪಡೆಯುವುದಕ್ಕೆ ನಿಯಮದಲ್ಲಿ ಅವಕಾಶವಿಲ್ಲ. ಆದರೂ, ವಾಪಸ್ ಪಡೆಯುವ ವಿ.ವಿ. ಕ್ರಮ ಸರಿಯಲ್ಲ’ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಪ್ರಾಧ್ಯಾಪಕರಾದ ಪ್ರೊ. ಜೆ.ಸಿ. ಉಮಾವತಿ, ಪ್ರೊ. ಪ್ರತಿಮಾ ಮಠದ, ಪ್ರೊ. ಕೆ. ಸಿದ್ದಪ್ಪ, ಪ್ರೊ. ಪಿ.ಎಂ. ಹನಗೋಡಿಮಠ, ಪ್ರೊ. ಆನಂದ ಸೌಂದಾನೆ, ಪ್ರೊ. ಜಿ.ಎಂ. ವಿದ್ಯಾಸಾಗರ್, ಪ್ರೊ. ಕೆ. ಲಿಂಗಪ್ಪ, ಪ್ರೊ. ಬಿ.ಆರ್. ಕೆರೂರ್, ಪ್ರೊ. ಬಿ. ಸಣ್ಣಕ್ಕಿ ಭಾಗವಹಿಸಿದ್ದರು.

ಗುಲಬರ್ಗಾ ವಿ.ವಿ.ಯು ಪ್ರಾಧ್ಯಾಪಕರಿಗೆ ನೀಡಿದ ಒಂದು ವೇತನ ಬಡ್ತಿ ನ್ಯಾಯಸಮ್ಮತವಾಗಿದ್ದು ಕೂಡಲೇ ವೇತನದಿಂದ ಕಡಿತ ಮಾಡುವುದನ್ನು ನಿಲ್ಲಿಸಬೇಕು.
-ಪ್ರೊ.ಜಿ. ಶ್ರೀರಾಮುಲು ಗುವಿವಿ ಸ್ನಾತಕೋತ್ತರ ಶಿಕ್ಷಕರ ಸಂಘದ ಅಧ್ಯಕ್ಷ
ಮಾರ್ಚ್ ತಿಂಗಳು ಬರುತ್ತಿರುವುದರಿಂದ ಆದಾಯ ತೆರಿಗೆ ವಿಪರೀತವಾಗಿ ಕಟಾವಾಗುತ್ತಿದ್ದು ಗಾಯದ ಮೇಲೆ ಬರೆ ಎಳೆದಂತೆ ಈಗ ಹೆಚ್ಚುವರಿ ವೇತನ ಬಡ್ತಿಯನ್ನು ವಾ‍ಪಸ್ ಪಡೆದರೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ.
-ಪ್ರೊ. ರಮೇಶ ಲಂಡನಕರ್ ಗುವಿವಿ ಸ್ನಾತಕೋತ್ತರ ಶಿಕ್ಷಕರ ಸಂಘದ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT