ವಾಡಿ(ಕಲಬುರಗಿ ಜಿಲ್ಲೆ): ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರ ಗ್ರಾಮದ ಕುಡಿಯುವ ನೀರು ಪೂರೈಕೆ ಮಾಡುವ ಓವರ್ ಹೆಡ್ ಟ್ಯಾಂಕ್‌ನಲ್ಲಿ ಸತ್ತ ಹಾವುಗಳು ಪತ್ತೆಯಾಗಿವೆ ಎಂದು ವದಂತಿ ಹಬ್ಬಿದ್ದು, ಅದು ಹಾವಲ್ಲ, ಗೊಬ್ಬರ ಗಿಡದ ಕಾಯಿಗಳು ಎಂದು ಪಿಡಿಒ ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರ ನಳಗಳ ಮೂಲಕ ನೀರು ತುಂಬಿಸುತ್ತಿದ್ದಾಗ ಹಾವಿನ ಪೊರೆಗಳು ಕಂಡು ಬಂದಿದ್ದು, ಕೆಲ ಯುವಕರು ಟ್ಯಾಂಕ್ ಇಣುಕಿ ನೋಡಿದಾಗ ಸತ್ತ ಎರಡು ಹಾವುಗಳು ನೀರಿನಲ್ಲಿ ತೇಲಾಡುತ್ತಿದ್ದವು ಎಂಬ ವದಂತಿ ಹಬ್ಬಿತ್ತು.
ಘಟನೆ ಗಮನಕ್ಕೆ ಬರುತ್ತಿದ್ದಂತೆ ಪಿಡಿಒ ಗೋಪಾಲ ಕಟ್ಟಿಮನಿ ಮತ್ತು ಸಿಬ್ಬಂದಿ ಟ್ಯಾಂಕ್ ಹತ್ತಿರ ಬಂದು ಪರಿಶೀಲನೆ ನಡೆಸಿದ್ದಾರೆ.
'ನೀರಿನ ಟ್ಯಾಂಕ್‌ನಲ್ಲಿ ಯಾವ ಸತ್ತ ಹಾವು ಬಿದ್ದಿಲ್ಲ. ಗೊಬ್ಬರ ಗಿಡದ ಕಾಯಿಗಳು ಬಿದ್ದಿವೆ. ಟ್ಯಾಂಕ್‌ನ ಮೇಲಿಂದ ನೋಡಿದಾಗ ಆ ಗಿಡಗಳ ಕಾಯಿಗಳು ಹಾವಿನ ಮರಿಗಳಂತೆ ಕಂಡಿವೆ. ಕೆಳಗೆ ಇಳಿದು ನೋಡಿದಾಗ ಅವು ಗೊಬ್ಬರ ಗಿಡದ ಕಾಯಿಗಳು ಆಗಿವೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು. ನೀರು ಕುಡಿಯಲು ಯೋಗ್ಯವಾಗಿದೆ' ಎಂದು ಗೋಪಾಲ ಕಟ್ಟಿಮನಿ ತಿಳಿಸಿದರು.
ದಲಿತರ ಬಡಾವಣೆ, ಹನುಮಾನ ನಗರ, ನಿಜಾಮ್ ಬಂಡಿ ಏರಿಯಾ ಹಾಗೂ ಬಸ್ ಸ್ಟಾಂಡ್ ಏರಿಯಾಗಳಿಗೆ ಈ ನೀರು ಪೂರೈಕೆಯಾಗುತ್ತಿದ್ದು, ಸಾರ್ವಜನಿಕರು ಕುಡಿಯಲು ಇದೇ ನೀರು ಬಳಸುತ್ತಿದ್ದಾರೆ.