ಗುರುವಾರ , ಮೇ 19, 2022
21 °C
ಜೇವರ್ಗಿ; ಪುರಸಭೆಯಿಂದ ಮುನ್ನೆಚ್ಚರಿಕೆ ಕ್ರಮ, ಸದ್ಯಕ್ಕಿಲ್ಲ ಕುಡಿಯುವ ನೀರಿನ ಸಮಸ್ಯೆ

ಭೀಮಾ ನದಿಯಲ್ಲಿ ನೀರು ಶೇಖರಣೆ

ವೆಂಕಟೇಶ ಆರ್.ಹರವಾಳ Updated:

ಅಕ್ಷರ ಗಾತ್ರ : | |

Prajavani

ಜೇವರ್ಗಿ: ಬಿಸಿಲಿನ ಜತೆ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಆದರೆ ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಉಂಟಾಗದತೆ ಪುರಸಭೆ ಅಧಿಕಾರಿಗಳು ಮುನ್ನೇಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.

ಸುಮಾರು 25 ಸಾವಿರ ಜನಸಂಖ್ಯೆಯುಳ್ಳ  ಪಟ್ಟಣದಲ್ಲಿ 6 ಕಿರು ನೀರು ಸರಬುರಾಜು ಯೋಜನೆಗಳು, 2 ತೆರೆದ ಬಾವಿ ಹಾಗೂ 45 ಕೊಳವೆ ಬಾವಿಗಳಿವೆ. ಹೀಗಾಗಿ ಇವರೆಗೂ ನೀರಿನ ಸಮಸ್ಯೆ ಉಂಟಾಗಿಲ್ಲ. ಭೀಮಾ ನದಿಗೆ ಸಾಕಷ್ಟು ಒಳಹರಿವು ಇದೆ. ಇದರಿಂದ ಪ್ರಸಕ್ತ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಗಳಿಲ್ಲ ಎಂದು ಜೇವರ್ಗಿ ಪುರಸಭೆ ಮುಖ್ಯಾಧಿಕಾರಿ ಶರಣಯ್ಯ ಹಿರೇಮಠ ತಿಳಿಸಿದ್ದಾರೆ.

ಕಟ್ಟಿಸಂಗಾವಿ ಭೀಮಾ ಸೇತುವೆ ಕೆಳಗಡೆ ಸುಮಾರು 2 ಕಿ.ಮೀ ಅಂತರದಲ್ಲಿ ವೆಂಟೆಡ್ ಬ್ಯಾರೇಜ್ (ನೀರು ಶೇಖರಣೆಗೆ ತಡೆಗೋಡೆ) ನಿರ್ಮಾಣ ಮಾಡಿದ್ದರಿಂದ ಕಟ್ಟಿಸಂಗಾವಿಯಿಂದ ಮೇಲಗಡೆ ಇರುವ ಕೋಳಕೂರ ಗ್ರಾಮದವರೆಗೆ ಭೀಮಾ ನದಿಯ ಹಿನ್ನೀರು ಶೇಖರಣೆಯಾಗಿದೆ.

ಕಟ್ಟಿಸಂಗಾವಿಯ ಭೀಮಾ ನದಿಯ ಹತ್ತಿರವಿರುವ ಜಾಕ್‌ವೆಲ್‌ನಿಂದ ನೀರು ಶೇಖರಣೆ ಘಟಕಕ್ಕೆ ಸರಬುರಾಜು ಮಾಡಲಾಗುತ್ತಿದೆ. ಅಲ್ಲಿಂದ ಪಟ್ಟಣದ ವಿವಿಧ ಓವರ್ ಹೆಡ್ ಟ್ಯಾಂಕ್‌ಗಳಿಗೆ ಹರಿಸಲಾಗುತ್ತದೆ.

ಬಿಸಿಲು ಹೆಚ್ಚಾಗುತ್ತಿದ್ದಂತೆ ನೀರು ಕಡಿಮೆಯಾಗುತ್ತಿದೆ. ಹೀಗಾಗಿ ಜಾಕ್ ವೆಲ್ ಹತ್ತಿರ ಆಳವಾದ ತಗ್ಗು ನಿರ್ಮಿಸಿ ನೀರನ್ನು ಹಿಡಿದಟ್ಟುಕೊಳ್ಳಲಾಗಿದೆ. ಬೇಸಿಗೆ ಕಾಲದಲ್ಲಿ ಪಟ್ಟಣದ ಜನತೆಗೆ ಪ್ರತಿ ಮೂರು ದಿನಗಳಿಗೊಮ್ಮೆ ನಲ್ಲಿಗಳಿಗೆ ನೀರು ಸರಬುರಾಜು ಮಾಡಲಾಗುತ್ತಿದೆ. ಪುರಸಭೆ ವತಿಯಿಂದ ಈಚೆಗೆ ಪಟ್ಟಣದ 23 ವಾರ್ಡಗಳಲ್ಲಿ ತಲಾ ಒಂದರಂತೆ ಕೊಳವೆಬಾವಿಗಳನ್ನು ಕೊರೆಸಲಾಗಿದೆ.

ಜೆಸ್ಕಾಂ ಅಧಿಕಾರಿಗಳು ಪಟ್ಟಣಕ್ಕೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಿದರೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ ಎಂದು ಪುರಸಭೆ ಸಿಬ್ಬಂದಿಯೊಬ್ಬರು ಪ್ರಜಾವಾಣಿಗೆ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.