ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾತಾವರಣದಲ್ಲಿ ಏಕಾಏಕಿ ಬದಲಾವಣೆ, ಇನ್ನೂ ಎರಡು ದಿನ ಬೀಸಲಿದೆ ಸುಳಿಗಾಳಿ

ಕಲಬುರ್ಗಿ: ಇಡೀ ದಿನ ಮೋಡ ಕವಿದ ವಾತಾವರಣ, ಅಲ್ಲಲ್ಲಿ ಮಳೆ
Last Updated 20 ಫೆಬ್ರುವರಿ 2021, 7:57 IST
ಅಕ್ಷರ ಗಾತ್ರ

ಕಲಬುರ್ಗಿ: ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಉಂಟಾಗಿದ್ದು, ಶೀತಗಾಳಿ ಬೀಸುತ್ತಿದೆ. ಚರ್ಮ ಚುರುಗುಟ್ಟುವಂಥ ಬಿಸಿಲು ಬೀಳುತ್ತಿದ್ದ ಊರಿನಲ್ಲಿ ಏಕಾಏಕಿ ಈ ಬದಲಾವಣೆ ಅಚ್ಚರಿ ಮೂಡಿಸಿದೆ. ಶುಕ್ರವಾರದ ಗರಿಷ್ಠ ತಾಪಮಾನ 30 ಡಿಗ್ರಿ ಹಾಗೂ ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ.

ಅರಬ್ಬಿ ಸಮುದ್ರದಲ್ಲಿ ಸುಳಿಗಾಳಿ ವೇಗವಾಗಿ ಬೀಸುತ್ತಿದೆ. ಇದರ ಪರಿಣಾಮ ರಾಜ್ಯದ ಅಲ್ಲಲ್ಲಿ ಮಳೆ ಕೂಡ ಬೀಳುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೂಡ ಒಣಹವೆ ಇದ್ದಾಗಿಯೂ ಏಕಾಏಕಿ ವಾತಾವರಣ ಬದಲಾಗಿದೆ. ಗರಿಷ್ಠ ಹಾಗೂ ಕನಿಷ್ಠ ಉಷ್ಣಾಂಶದಲ್ಲಿ ಗಮನಾರ್ಹ ಉಳಿಕೆ ಕಂಡಿದೆ. ಇದರಿಂದ ಕಲಬುರ್ಗಿಯೂ ಸೇರಿದಂತೆ ಈ ಭಾಗದ ಏಳೂ ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಉಂಟಾಗಿದೆ ಎಂದು ಇಲ್ಲಿನ ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಹವಾಮಾನ ವಿಭಾಗದ ತಾಂತ್ರಿಕ ಅಧಿಕಾರಿ ಡಾ.ಶಾಂತಪ್ಪ ಧುತ್ತರಗಾಂವಿ ಮಾಹಿತಿ ನೀಡಿದ್ದಾರೆ.

ದಿನವಿಡೀ ಸುಳಿಗಾಳಿ ಬೀಸುತ್ತಿರುವ ಕಾರಣ ವಾತಾವರಣದಲ್ಲಿ ತಂಪು ಆವರಿಸಿದೆ. ಅದರಲ್ಲೂ ಗುರುವಾರ ಹಾಗೂ ಶುಕ್ರವಾರ ಇಡೀ ದಿನ ಸೂರ್ಯನ ದರ್ಶನವೇ ಅಪರೂಪ ಎಂಬಂತಾಗಿದೆ. ಇನ್ನೂ ಎರಡು ದಿನ ಇದೇ ರೀತಿಯ ತಂಪಿನ ವಾತಾವರಣ ಇರಲಿದೆ ಎಂದೂ ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ವಿಭಾಗದ ವಿಜ್ಞಾನಿಗಳು ತಿಳಿಸಿದ್ದಾರೆ.

ತಾಪಮಾನ ಕುಸಿತ: ಬುಧವಾರ ಗರಿಷ್ಠ 34 ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್‌ ಇದ್ದ ತಾಪಮಾನ ಒಂದೇ ದಿನದಲ್ಲಿ ಅಂದರೆ ಗುರುವಾರ; ಗರಿಷ್ಠ 33 ಹಾಗೂ ಕನಿಷ್ಠ 20 ಡಿಗ್ರಿಗೆ ಇಳಿದಿತ್ತು. ಶುಕ್ರವಾರ ಶೀತಗಾಳಿ ಮತ್ತಷ್ಟು ವೇಗ ಪಡೆದಿದ್ದರಿಂದ ಗರಿಷ್ಠ ತಾಪಮಾನ 30 ಡಿಗ್ರಿ ಹಾಗೂ ಕನಿಷ್ಠ 18 ಡಿಗ್ರಿಗೆ ಕುಸಿದಿದೆ.

ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಬೈಕ್‌, ಕಾರ್‌, ಆಟೊಗಳಲ್ಲಿ ಸಂಚಾರ ಮಾಡುವವರು ಕೂಡ ಶ್ವೆಟರ್‌, ಜರ್ಕಿನ್‌ಗಳನ್ನು ಬಳಸುವುದು ಅಲ್ಲಲ್ಲಿ ಕಂಡುಬಂತು.

ತಾಪಮಾನ ಇಳಿಕೆ ಪರಿಣಾಮಗಳೇನು?

ಕಲಬುರ್ಗಿ: ಜಿಲ್ಲೆಯಲ್ಲಿ ಈಗ ಕಡಲೆ ರಾಶಿ ಜೋರಾಗಿ ನಡೆದಿದೆ. ಜತೆಗೆ, ಬಿಳಿಜೋಳ ಕೂಡ ಸಂಪೂರ್ಣ ತೆನೆ ತುಂಬಿ ನಿಂತಿವೆ. ಈ ಸಂದರ್ಭದಲ್ಲಿ ಫಸಲು ಚೆನ್ನಾಗಿ ಬರಲು ಹಾಗೂ ರಾಶಿಗೆ ಬಿಸಿಲಿನ ವಾತಾವರಣ ಬೇಕು. ಆದರೆ, ಹವಾಮಾನ ವೈಪರೀತ್ಯದ ಕಾರಣ ಏಕಾಏಕಿ ಶೀತಗಾಳಿ ಬೀಸತೊಡಗಿದ್ದು, ಬೆಳೆಗಳಿಗೆ ಕೂಡ ತೊಂದರೆ ಮಾಡುವ ಸಾಧ್ಯತೆ ಇದೆ ಎನ್ನುತ್ತಾರೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು.

ರಾಶಿ ಮಾಡಿಕೊಂಡವರು ಬಚಾವಾದಂತೆ; ಆದರೆ, ಈಗತಾನೆ ಜೋಳ ಕೊಯ್ಲಿಗೆ ಬಂದಿದ್ದರಿಂದ ಚಳಿಯಿಂದಾಗಿ ಕಾಳು ಉದುರುವ ಸಾಧ್ಯತೆ ಇರುತ್ತದೆ. ಜೋಳ ತುಸು ಕಪ್ಪು ಬಣ್ಣಕ್ಕೆ ತಿರುಗಬುಹುದು. ಹಾಗಾಗಿ, ವಾತಾವರಣ ಮತ್ತೆ ಸರಿಯಾಗುವವರೆಗೆ ಕೊಯ್ಲು ನಿಲ್ಲಿಸಬೇಕು ಎನ್ನುತ್ತಾರೆ ಅವರು.

ಹೃದ್ರೋಗ, ಆಸ್ತಮಾ, ಶ್ವಾಸಕೋಶಮ, ಥರೈಡ್‌ ಸಮಸ್ಯೆ ಇದ್ದವರು ಬೆಚ್ಚಗಿನ ಬಟ್ಟೆ ಧರಿಸಬೇಕು. ಕೈ– ಕಾಲುಗಳನ್ನು ಕಾಯಿಸಿಕೊಳ್ಳಬೇಕು. ಕಿವಿಯಲ್ಲಿ ಸುಳಿಗಾಳಿ ಹೋಗದಂತೆ ಎಚ್ಚರಿಕೆ ವಹಿಸಬೇಕು. ಈಗ ಕೊರೊನಾ ವೈರಾಣು ಮತ್ತೆ ಕ್ರಿಯಾಶೀಲ ಆಗುತ್ತಿರುವುದರಿಂದ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ ಎಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಈಗ ಕಡಲೆ ರಾಶಿ ಶೇ 90ರಷ್ಟು ಮುಗಿದುಹೋಗಿದೆ. ಅಲ್ಲಲ್ಲಿ ಕೆಲವು ರೈತರು ಇನ್ನೂ ರಾಶಿ ಮಾಡುತ್ತಿದ್ದಾರೆ. ಹವಾಮಾನ ವೈಪರೀತ್ಯದಿಂದ ಇಳುವರಿ ಮೇಲೆ ಅಷ್ಟೇನು ಪರಿಣಾಮ ಬೀರುವುದಿಲ್ಲ. ಆತಂಕ ಬೇಡ

ರಿತೇಂದ್ರನಾಥ ಸೂಗೂರ,ಜಂಟಿ ಕೃಷಿ ನಿರ್ದೇಶಕ, ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT