ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಕ್ಷಣ ನೀತಿ ಅನುಷ್ಠಾನ: ಸಿಯುಕೆ ಮಾದರಿಯಾಗಲಿ’

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನೂತನ ಶಿಕ್ಷಣ ನೀತಿ ಕುರಿತು ಕಾರ್ಯಾಗಾರ
Last Updated 5 ಅಕ್ಟೋಬರ್ 2021, 12:24 IST
ಅಕ್ಷರ ಗಾತ್ರ

ಕಲಬುರ್ಗಿ: ನೇರವಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಅಧೀನದಲ್ಲೇ ಬರುವ ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ನೂತನ ಶಿಕ್ಷಣ ನೀತಿಯ ಅನುಷ್ಠಾನದಲ್ಲಿ ಇತರ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಬೇಕು ಎಂದು ನೂತನ ಶಿಕ್ಷಣ ನೀತಿ ಕರಡು ರಚನಾ ಸಮಿತಿ ಸದಸ್ಯರೂ ಆದ ಯುಜಿಸಿ ಸದಸ್ಯ ಪ್ರೊ.ಎಂ.ಕೆ. ಶ್ರೀಧರ್ ಆಶಿಸಿದರು.

ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ಸಭಾಂಗಣದಲ್ಲಿ ಮಂಗಳವಾರ ಕೇಂದ್ರೀಯ ವಿ.ವಿ. ಹಾಗೂ ಶಿಕ್ಷಣ ಮತ್ತು ಸಮಾಜ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ನೂತನ ಶಿಕ್ಷಣ ನೀತಿಯ ಅನುಷ್ಠಾನ ಕುರಿತ ಎರಡು ದಿನಗಳ ಕಾರ್ಯಾಗಾರದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

‘ನೂತನ ಶಿಕ್ಷಣ ನೀತಿಯಲ್ಲಿ ಏನೇನಿರಲಿದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು, ಇದೀಗ ಅದನ್ನು ಹೇಗೆ ಅನುಷ್ಠಾನ ಮಾಡಬೇಕು ಎಂಬ ಬಗ್ಗೆ ಯೋಜನೆ ರೂಪಸಬೇಕಿದೆ. ಆ ನಿಟ್ಟಿನಲ್ಲಿ ಸಿಯುಕೆಯಲ್ಲಿ ಅಗತ್ಯವಾದ ಬೋಧಕ ಸಿಬ್ಬಂದಿ ಇದ್ದು, ನಿರ್ದಿಷ್ಟ ಮಾದರಿಗಳನ್ನು ಹಾಗೂ ಬಹುಶಿಸ್ತೀಯ ಪಠ್ಯಕ್ರಮವನ್ನು ರೂಪಿಸಬೇಕು. ಇವುಗಳನ್ನು ಇತರೆ ಸಂಸ್ಥೆಗಳು ಅನುಸರಿಸುವಂತಾಗಬೇಕು. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಅಧೀನದಲ್ಲಿ ವಿ.ವಿ. ಬರುವುದರಿಂದ ತಕ್ಷಣಕ್ಕೆ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಳ್ಳಲು ಅವಕಾಶವಿದೆ’ ಎಂದರು.

‘ನೂತನ ಶಿಕ್ಷಣ ನೀತಿಯು ಒಂದು ನೀಲಿನಕ್ಷೆಯನ್ನು ಸಿದ್ಧಪಡಿಸಿದೆ. ಅದಕ್ಕೆ ಅಗತ್ಯವಾದ ಪೂರಕ ಅಂಶಗಳನ್ನು ಸೇರಿಸುವ ಜವಾಬ್ದಾರಿ ರಾಜ್ಯದಲ್ಲಿ ಸಿಯುಕೆಗೆ ಇದೆ’ ಎಂದು ಹೇಳಿದರು.

ನೂತನ ಶಿಕ್ಷಣ ನೀತಿಯ ಬಗ್ಗೆ ಕವಿತೆ ವಾಚನ ಮಾಡಿದ ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಪ್ರೊ. ಶಿವಪ್ರಸಾದ್, ‘ಈ ನೀತಿಯ ಬಗ್ಗೆ ಯಾವುದೇ ಭಯ ಬೇಡ. ಇದು ಪ್ರಗತಿಗೆ ದಾರಿಯಾಗಿದೆ. ಶಿಕ್ಷಕರೆಲ್ಲರೂ ಸೇರಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡೋಣ. ಅದ್ಭುತವಾಗಿ ತರಗತಿಗಳನ್ನು ತೆಗೆದುಕೊಳ್ಳುವುದರಿಂದ ವಿದ್ಯಾರ್ಥಿಗಳು ಪ್ರೀತಿಯಿಂದ ಕಲಿಯುವಂತಹ ವಾತಾವರಣ ನಿರ್ಮಾಣವಾಗಲಿ’ ಎಂದರು.

ಕುಲಪತಿ ಪ್ರೊ. ಬಿ. ಸತ್ಯನಾರಾಯಣ ಮಾತನಾಡಿ, ‘ಹೊಸ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲು ಸಿಯುಕೆ ಸಿದ್ಧತೆ ಮಾಡಿಕೊಂಡಿದ್ದು, ಯುಜಿಸಿಯು ಅಗತ್ಯ ನೆರವು ನೀಡಲಿದೆ. ಎಲ್ಲ ವಿಶ್ವವಿದ್ಯಾಲಯಗಳಲ್ಲಿನ ಖಾಲಿ ಇರುವ ಬೋಧಕ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುವಂತೆ ಯುಜಿಸಿ ಸೂಚನೆ ನೀಡಿದೆ. ನಮ್ಮಲ್ಲಿ ಬಹುತೇಕ ಹುದ್ದೆಗಳು ಭರ್ತಿಯಾಗಿವೆ. ಅಷ್ಟೇ ಅಲ್ಲದೇ, ಅತ್ಯಂತ ಯುವ ಬೋಧಕರು ವಿ.ವಿ.ಗೆ ಸೇರ್ಪಡೆಯಾಗಿದ್ದಾರೆ. ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಬೋಧಕರ ಸರಾಸರಿ ವಯಸ್ಸು 50 ಇದ್ದರೆ, ಸಿಯುಕೆಯಲ್ಲಿನ ಬೋಧಕ ಸಿಬ್ಬಂದಿಯ ವಯಸ್ಸು 35ರಿಂದ 40 ಇದೆ. ಹೀಗಾಗಿ, ಮುಂದಿನ ಆರು ತಿಂಗಳಲ್ಲಿ ನೂತನ ಶಿಕ್ಷಣ ನೀತಿಯ ಅನುಸಾರ ಪಠ್ಯಕ್ರಮವನ್ನು ರಚಿಸಿ ಅದನ್ನು ಬೋಧಿಸಲಾಗುವುದು’ ಎಂದು ಹೇಳಿದರು.

ಪ್ರೊ.ಎಂ.ವಿ. ಅಳಗವಾಡಿ, ಬೆಂಗಳೂರಿನ ಶಿಕ್ಷಣ ಮತ್ತು ಸಮಾಜ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಗೌರೀಶ, ಸಿಯುಕೆ ಕುಲಸಚಿವ ಪ್ರೊ. ಬಸವರಾಜ ಡೋಣೂರ, ಪ್ರೊ.ಚನ್ನವೀರ ಆರ್‌.ಎಂ. ಇದ್ದರು.

ಕಾರ್ಯಾಗಾರದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT