ಭಾನುವಾರ, ಜನವರಿ 17, 2021
28 °C

ಕಲಬುರ್ಗಿ: ವಾಹನ ಡಿಕ್ಕಿಯಾಗಿ ಯುವ ವೈದ್ಯೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ತಾಲ್ಲೂಕಿನ ಧರ್ಮಾಪುರ ಗ್ರಾಮದ ಬಳಿ ಮಂಗಳವಾರ ರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಯುವ ವೈದ್ಯೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇಲ್ಲಿನ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನಲ್ಲಿ ಎಂ.ಡಿ ಓದುತ್ತಿದ್ದ ಚಿತ್ತಾಪುರ ತಾಲ್ಲೂಕಿನ ಬಂಗೂರಿನ ಡಾ.ಪ್ರೀತಿ ಗೇಮು ಆಠೋಡ (28) ಮೃತಪಟ್ಟವರು. ಮಂಗಳವಾರ ರಾತ್ರಿ 8ರ ಸುಮಾರಿಗೆ ಅವರು ತಮ್ಮ ಬೈಕ್‌ನಲ್ಲಿ ಕಲಬುರ್ಗಿ ನಗರದಿಂದ ಮರತೂರಗೆ ಹೋಗುತ್ತಿದ್ದರು. ಈ ಸಂದರ್ಭ ಎದುರಿಗೆ ಬಂದ ನಾಲ್ಕು ಚಕ್ರದ ವಾಹನವೊಂದು ಡಿಕ್ಕಿ ಹೊಡೆಯಿತು. ಮುಖ ಹಾಗೂ ತೆಲೆಗೆ ತೀವ್ರ ಪೆಟ್ಟಾಗಿದ್ದು, ರಕ್ತಸ್ರಾವವಾಗಿ ಪ್ರೀತಿ ಅವರು ಸ್ಥಳದಲ್ಲಿಯೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಕಲಬುರ್ಗಿ ಸಂಚಾರ ಪೋಲಿಸ್ ಠಾಣೆ–2ರಲ್ಲಿ ಪ್ರಕರಣ ದಾಖಲಿಸಲಾಗಿದೆ.

₹ 1 ಲಕ್ಷ ದರೋಡೆ

ಕಲಬುರ್ಗಿ: ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಎಸ್‌ಬಿಐ ಹಣ ವರ್ಗಾವಣೆ ಸೇವಾ ಕೇಂದ್ರದಲ್ಲಿ ಮಂಗಳವಾರ ಸಂಜೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ, ₹ 1 ಲಕ್ಷ ಹಣ ದರೋಡೆ ಮಾಡಲಾಗಿದೆ.

ಗುರುಲಿಂಗಪ್ಪ ಬಿರಾದಾರ ಹಲ್ಲೆಗೊಳಗಾದವರು. ಅವರನ್ನು ‌ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಸ್‌ವಿಪಿ ವೃತ್ತದ ಬಳಿ ಇರುವ ಏಷಿಯನ್ ಪ್ಲಾಜಾದಲ್ಲಿ ಇರುವ ಎಸ್‌ಬಿಐ ಬ್ಯಾಂಕಿನ ಪ್ರಾಂಚೈಸಿ ಪಡೆದುಕೊಂಡ ಗುರುಲಿಂಗಪ್ಪ ಅವರು ವ್ಯವಹಾರ ನಡೆಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ವ್ಯಕ್ತಿಯೊಬ್ಬರು ಹಣ ಜಮಾವಣೆ ಮಾಡುವುದಿದೆ ಎಂದು ಮಾತು ಆರಂಭಿಸಿದರು. ಗುರುಲಿಂಗಪ್ಪ ಕಂಪ್ಯೂಟರ್‌ನಲ್ಲಿ ಕೆಲಸದಲ್ಲಿ ಮಗ್ನರಾಗಿದ್ದ ವೇಳೆ ಹಿಂದಿನಿಂದ ಬಂದು ಭಾರವಾಗಿ ತಲೆಗೆ ಹೊಡೆದ ವ್ಯಕ್ತಿ, ಡ್ರಾದಲ್ಲಿದ್ದ ಹಣ ಎತ್ತಿಕೊಂಡು ಪರಾರಿಯಾದ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಟೇಷನ್ ಬಜಾರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್‌ಸ್ಪೆಕ್ಟರ್ ಸಿದ್ದರಾಮೇಶ ಗಡದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಲವಾರ ಹಿಡಿದುಕೊಂಡು ಜನ್ಮದಿನಾಚರಣೆ

ಕಲಬುರ್ಗಿ: ನಗರದ ನಯಾ ಮೊಹಲ್ಲಾ ಬಡಾವಣೆಯಲ್ಲಿ ಮಂಗಳವಾರ ರಾತ್ರಿ ರೌಡಿಶೀಟರ್‌ ಒಬ್ಬ ತಲವಾರ ಹಿಡಿದುಕೊಂಡು ನಡು ರಸ್ತೆಯಲ್ಲಿಯೇ ತನ್ನ ಜನ್ಮ ದಿನ ಆಚರಿಸಿಕೊಂಡಿದ್ದಾನೆ. ಇದರಲ್ಲಿ ಪಾಲ್ಗೊಂಡಿದ್ದ ಆತನ ಹಿಂಬಾಲಕರು ಸಹ ತಲವಾರ ಹಿಡಿದುಕೊಂಡು ಸಂಭ್ರಮಿಸುತ್ತಿದ್ದರು. ವ್ಯಕ್ತಿಯೊಬ್ಬರು ನೀಡಿದ ಸುಳಿವಿನ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ರೌಡಿಶೀಟರ್‌ನನ್ನು ವಶಕ್ಕೆ ಪಡೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು