ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರಂಟಿಯಲ್ಲಿ ಮನಸೆಳವ ಮಕ್ಕಳ ಉದ್ಯಾನ

ಕಿರು ಉದ್ಯಾನಕ್ಕೆ ₹8 ಲಕ್ಷ ವೆಚ್ಚದಲ್ಲಿ ವಿವಿಧ ಮನರಂಜನಾ ಆಟಿಕೆಗಳ ಅಳವಡಿಕೆ
Last Updated 2 ಜುಲೈ 2018, 12:52 IST
ಅಕ್ಷರ ಗಾತ್ರ

ಕಲಬುರ್ಗಿ:  ಧಾರ್ಮಿಕ ತಾಣದಲ್ಲಿ ಚಿಣ್ಣರ ಕಲವರ, ಚಿನ್ನಾಟದಲ್ಲಿ ಮೈಮರೆಯುವ ಮಕ್ಕಳು, ಮನಕ್ಕೆ ತಂಪು ನೀಡುವ ಹುಲ್ಲುಹಾಸು, ಆಹ್ಲಾದಕರ ಎನಿಸುವ ವಾತಾವರಣ.

–ನಗರದ ಕೋರಂಟಿ ಹನುಮಾನ್‌ ದೇವಸ್ಥಾನದ ಅಂಗಳದಲ್ಲಿ ಕಂಡುಬರುವ ದೃಶ್ಯವಿದು. ದೇಗುಲದ ಆವರಣದಲ್ಲಿ ಅಂದಾಜು 8 ಲಕ್ಷ ವೆಚ್ಚದಲ್ಲಿ ಮಕ್ಕಳಿಗಾಗಿ 2 ಕಿರುಉದ್ಯಾನ ನಿರ್ಮಾಣ ಮಾಡಲಾಗಿದೆ. ಆ ಉದ್ಯಾನದಲ್ಲಿ ಮಕ್ಕಳ ಆಟಿಕೆಗಳ ಅಳವಡಿಸಿ ಆಕರ್ಷಕಗೊಳಿಸಲಾಗಿದೆ. ಶನಿವಾರ, ಹಬ್ಬದ ದಿನಗಳು ಬಂದರೆ ಈ ಉದ್ಯಾನದ ತುಂಬಾ ಮಕ್ಕಳ ಆಟ–ಚಿನ್ನಾಟ ಕಣ್ಮನ ಸೆಳೆಯುತ್ತದೆ.

ನಗರದ ಧಾರ್ಮಿಕ ತಾಣಗಳಲ್ಲಿ ಕೋರಂಟಿ ಹುನುಮಾನ್‌ ದೇಗುಲ ಪ್ರಸಿದ್ಧವಾಗಿದೆ. ಪ್ರತಿದಿನ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಶನಿವಾರ ಕಾಲಿಡಲು ಜಾಗವಿಲ್ಲದಷ್ಟು ಭಕ್ತರು ಸೇರಿರುತ್ತಾರೆ. ಹೀಗಾಗಿ ನಗರದ ಆಸ್ತಿಕರ ಇಷ್ಟದ ತಾಣವಾಗಿ ರೂಪುಗೊಂಡಿದೆ. ಇಂಥ ಧಾರ್ಮಿಕ ತಾಣದ ಅಂದ ಮತ್ತಷ್ಟು ಹೆಚ್ಚಿಸಿವೆ ಮಕ್ಕಳ ಉದ್ಯಾನಗಳು.

ಈ ಸ್ಥಳವು ಹಸಿರಿನಿಂದ ಕೂಡಿದೆ. ವಿಶಾಲವಾದ ಜಾಗದಲ್ಲಿ ಹರಡಿರುವ ಹಸಿರು ಮನಸಿಗೆ ಹಿತಕರ ಎನಿಸುತ್ತದೆ. ಪ್ರತಿದಿನ ನೀರುಣಿಸಿ ಹುಲ್ಲುಹಾಸನ್ನು ಸೂಕ್ತವಾಗಿ ನಿರ್ವಹಿಸಲಾಗುತ್ತಿದೆ. ಮರಗಳು, ದೀಪದ ಕಾರಂಜಿ, ಆವರಣದ ತುಂಬಾ ಕುಳಿತುಕೊಳ್ಳುವ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಈಗ ಅವುಗಳ ಪಟ್ಟಿಗೆ ಈ ಕಿರುಉದ್ಯಾನಗಳ ಸೇರಿಕೊಂಡಿವೆ.

ಮಕ್ಕಳ ಮನರಂಜನೆಯ ಉದ್ದೇಶವಿಟ್ಟುಕೊಂಡು ದೇವಸ್ಥಾನ ಆಡಳಿತ ಮಂಡಳಿ ಈ ಉದ್ಯಾನ ನಿರ್ಮಿಸಿದೆ. ಸರ್ಕಾರದಿಂದ ದೊರೆತ ಅನುದಾನ ಹಾಗೂ ಭಕ್ತರ ಆರ್ಥಿಕ ನೆರವಿನಿಂದ ಉದ್ಯಾನದ ಮನರಂಜನಾ ಸಾಮಗ್ರಿಗಳನ್ನು ಖರೀದಿಸಲಾಗಿದೆ. ಮುಂಬೈನ ಗುತ್ತಿಗೆದಾರರು ಇಲ್ಲಿಗೆ ತಂದು ಜೋಡಣೆ ಮಾಡಿದ್ದಾರೆ. ಶನಿವಾರ, ಹಬ್ಬದ ದಿನಗಳಲ್ಲಿ ಮಾತ್ರ ಆಟಕ್ಕೆ ಮುಕ್ತವಾಗಿರಿಸಿ ಅವುಗಳ ಬಾಳಿಕೆ ಕಾಯ್ದುಕೊಳ್ಳಲಾಗುತ್ತಿದೆ.

ಏನೇನಿವೆ: ಜಾರುಬಂಡೆ, ಮೆಟ್ಟಿಲುಗಳು, ಜೋಕಾಲಿ, ಕೃತಕ ವಾಹನ, ತಿರುಗಾಣಿ ಸೇರಿದಂತೆ 10ಕ್ಕೂ ಹೆಚ್ಚು ಮನರಂಜನಾ ಸಾಮಗ್ರಿಗಳಿವೆ. ಸಣ್ಣ ಆಕಾರದ ಬಂಡೆಗಳು, ವೃತ್ತಾಕಾರದ ಜೋಕಾಲಿ ಹಾಗೂ ಐದು ಬಗೆಯ ಸಾಮಗ್ರಿಗಳ ವಿಶೇಷ ಆಟಿಕೆ ಇಲ್ಲಿನ ವಿಶೇಷವಾಗಿದೆ. ಕಬ್ಬಿಣದ ತುಕ್ಕುಹಿಡಿಯುವ ಕಾರಣಕ್ಕೆ ರಬ್ಬರ್‌ನಿಂದ ಮಾಡಿದ ಜೋಕಾಲಿ ಅಳವಡಿಸಲಾಗಿದೆ. ಹಂತಹಂತವಾಗಿ ಈ ಉದ್ಯಾನ ಅಭಿವೃದ್ಧಿಪಡಿಸಲಾಗಿದೆ. 2 ತಿಂಗಳ ಹಿಂದೆ ಐದು ಸಾಮಗ್ರಿ ಒಳಗೊಂಡ ವಿಶೇಷ ಆಟಿಕೆಯನ್ನು ₹3 ಲಕ್ಷ ವೆಚ್ಚದಲ್ಲಿ ಖರೀದಿಸಿ ತಂದ ನಂತರ ಉದ್ಯಾನದ ಆಕರ್ಷಣೆ ಮತ್ತಷ್ಟು ಹೆಚ್ಚಿದೆ.

ಜನಸಾಗರ:  ಹಬ್ಬದ ದಿನಗಳು ಬಂದರೆ ದೇವಸ್ಥಾನದ ಅಂಗಳದಲ್ಲಿ ಜನಸಾಗರವೇ ಸೇರಿರುತ್ತದೆ. ಕಲಬುರ್ಗಿ ಮಾತ್ರವಲ್ಲ ಗ್ರಾಮೀಣ, ದೂರದ ಊರುಗಳಿಂದ ಭಕ್ತರು ಬರುತ್ತಾರೆ. ದೂರದಿಂದ ಬರುವ ಜನರು ಸಾಕಷ್ಟು ಸಮಯ ಕಳೆಯುತ್ತಾರೆ. ಹೀಗೆ ಬಂದವರ ಮಕ್ಕಳು ಬಹಳಹೊತ್ತು ಉದ್ಯಾನದಲ್ಲಿ ಆಟವಾಡಬಹುದು ಎಂಬುದು ಆಡಳಿತ ಮಂಡಳಿಯ ಉದ್ದೇಶ. ಸಮೀಪದ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಿಗೂ ಇದು ನೆಚ್ಚಿನ ತಾಣವಾಗಿದೆ.

‘ಕಲಬುರ್ಗಿಯ ಕೋರಂಟಿ ಹನುಮಾನ್‌ ದೇವಾಲಯಕ್ಕೆ ಪ್ರತಿ ವಾರ ಭೇಟಿ ನೀಡುತ್ತೇನೆ. ಇಲ್ಲಿನ ಪರಿಸರ ಮನಸ್ಸಿಗೆ ಮುದ ನೀಡುತ್ತಿದೆ. ಆದರೆ, ಜತೆಗೆ ಕರೆತರುತ್ತಿದ್ದ ಮಕ್ಕಳನ್ನು ಹಿಡಿದಿರುವುದು ಸಮಸ್ಯೆಯಾಗಿತ್ತು.

ಈಗ ಮಕ್ಕಳನ್ನು ಉದ್ಯಾನದಲ್ಲಿ ಬಿಟ್ಟು ನಾವು ದೇವರ ದರ್ಶನ ಪಡೆಯುತ್ತೇವೆ’ ಎಂದು ಕುಸನೂರು ನಿವಾಸಿ ಎಂ.ಎನ್‌. ಜಯಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT