ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಭಾವ’ ಇಲ್ಲದೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಇಲ್ಲ!

ಕೆಡಿಪಿ: ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ
Last Updated 18 ಜನವರಿ 2017, 5:50 IST
ಅಕ್ಷರ ಗಾತ್ರ

ಕಲಬುರ್ಗಿ: ‘ಪ್ರಭಾವ ಇಲ್ಲದಿದ್ದರೆ ಜಿಲ್ಲಾಸ್ಪತ್ರೆಯಲ್ಲಿ ಯಾವ ಚಿಕಿತ್ಸೆಯೂ ಸಿಗುವುದಿಲ್ಲ. ದಿನಕ್ಕೆ ಹತ್ತು ಬಾರಿ ನಾನೇ ಕರೆ ಮಾಡಿ ರೋಗಿಗಳಿಗೆ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಬೇಕಾಗಿದೆ!’

–ಹೀಗೆಂದು ಹೇಳಿದವರು ಪ್ರವಾಸೋದ್ಯಮ ಹಾಗೂ ಐಟಿ–ಬಿಟಿ ಸಚಿವ ಪ್ರಿಯಾಂಕ್ ಖರ್ಗೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿದ ಮುಂದುವರಿದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ(ಕೆಡಿಪಿ)ಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.

‘ತಾಲ್ಲೂಕು ಆಸ್ಪತ್ರೆ ವೈದ್ಯರು ಮೈಗೆ ಎಣ್ಣೆ ಹಚ್ಚಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚಿಕಿತ್ಸೆಗೆ ಬರುವ ರೋಗಿಗಳಿಗೆ ಅನಗತ್ಯ ಭಯ ಹುಟ್ಟಿಸಿ ಜಿಲ್ಲಾಸ್ಪತ್ರೆಗೆ ಕಳುಹಿಸುತ್ತಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ತಮಗೆ ಸರಿಯಾಗಿ ಸ್ಪಂದಿಸುವುದಿಲ್ಲ, ಚಿಕಿತ್ಸೆಯನ್ನೂ ನೀಡುವುದಿಲ್ಲ. ಅವರ ವರ್ತನೆ ಸರಿಯಾಗಿಲ್ಲ ಎಂದು ರೋಗಿಗಳು ನನಗೆ ದೂರು ನೀಡುತ್ತಿದ್ದಾರೆ. ಹೀಗಾದರೆ ಬಡ ರೋಗಿಗಳು ಎಲ್ಲಿಗೆ ಹೋಗಬೇಕು’ ಎಂದು ಪ್ರಶ್ನಿಸಿದರು.

‘ಮಗು ಜನಿಸಿ ಆರು ತಿಂಗಳಾದರೂ ಮಡಿಲು ಕಿಟ್ ದೊರೆಯುತ್ತಿಲ್ಲ. ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳನ್ನು ಅಲ್ಲಿನ ವೈದ್ಯರೇ ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತಿದ್ದಾರೆ. ಇನ್ನು ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್ ಅವರಿಗೆ ಹೇಳಿದರು.

ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ ‘ಜಿಲ್ಲಾಸ್ಪತ್ರೆಯ ವೈದ್ಯರು ಯಾವುದೇ ಕಾರಣಕ್ಕೂ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕಳುಹಿ­ಸ­ಬಾರದು ಮತ್ತು ತಾವು ಖಾಸಗಿಯಾಗಿ ಆಸ್ಪತ್ರೆ ನಡೆಸಬಾರದು. 108 ಚಾಲಕರು ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯು­ತ್ತಿದ್ದಾರೆ ಎಂಬ ದೂರುಗಳಿವೆ. ಈ ಬಗ್ಗೆ ಪರಿಶೀಲನೆ ನಡೆಸಬೇಕು. ತಪ್ಪಿತಸ್ಥ ಚಾಲಕರನ್ನು ಕೆಲಸದಿಂದ ತೆಗೆದುಹಾಕಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಿವರಾಜ ಸಜ್ಜನಶೆಟ್ಟಿಗೆ ಸೂಚಿಸಿದರು.

ಡೆಂಗಿ –ಚಿಕೂನ್‌ಗುನ್ಯ

‘ಖಾಸಗಿ ಆಸ್ಪತ್ರೆಗಳು ಅತ್ಯಂತ ದುಬಾರಿ ಶುಲ್ಕ ವಿಧಿಸುತ್ತಿವೆ. ಎಷ್ಟೋ ಬಾರಿ ಖಾಸಗಿ ಆಸ್ಪತ್ರೆಗಳ ಉದ್ಘಾಟನೆಗೆ ಹೋಗಲು ಹಿಂಜ­ರಿಕೆ­ಯಾಗುತ್ತದೆ. ಜಿಲ್ಲಾಸ್ಪತ್ರೆಯ ವೈದ್ಯರು ತಮ್ಮಲ್ಲಿಗೆ ಬರುವ ರೋಗಿಗಳನ್ನು ಪ್ರೀತಿ­ಯಿಂದ ಕಾಣಬೇಕು. ಅವರಿಗೆ ಸರಿ­ಯಾದ ರೀತಿಯಲ್ಲಿ ಚಿಕಿತ್ಸೆ ನೀಡಬೇಕು’ ಎಂದರು.

‘ಕುಷ್ಠ, ಕ್ಷಯರೋಗ ನಿಯಂತ್ರಣ, ಅಂಧತ್ವ ನಿವಾರಣೆ, ಡೆಂಗಿ, ಚಿಕೂನ್‌ಗುನ್ಯ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಮಡಿಲು ಕಿಟ್ ಮತ್ತು ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ವಿತರಿಸುವ ಸಂಬಂಧ ಚರ್ಚೆ ನಡೆಸಲು ತಾಲ್ಲೂಕು ಆರೋಗ್ಯಾಧಿಕಾರಿಗಳು, ಪಂಚಾ­ಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರ ಸಭೆ ಕರೆಯ­ಬೇಕು’ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

ಶಾಸಕ ಡಾ.ಉಮೇಶ ಜಾಧವ್ ಮಾತನಾಡಿ, ‘ಬಹುತೇಕ ವೈದ್ಯರು ಕೇಂದ್ರ ಸ್ಥಾನದಲ್ಲಿ ಇರುವುದಿಲ್ಲ. ವೇಳೆಗೆ ಸರಿಯಾಗಿ ಆಸ್ಪತ್ರೆಗೆ ಬರುವುದಿಲ್ಲ. ಆಸ್ಪತ್ರೆಗಳಲ್ಲಿ ಸರಿಯಾದ ಉಪಕರಣಗಳಿಲ್ಲ. ಮೂತ್ರ, ಮಧುಮೇಹ, ಹಿಮೋಗ್ಲೋಬಿನ್‌ ಪರೀಕ್ಷೆ ಮಾಡಲೂ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ನೆಪ ಹೇಳುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಉಜ್ವಲ್‌ಕುಮಾರ್ ಘೋಷ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿರಸಗಿ ಇದ್ದರು.

*

ಜಿಲ್ಲಾಸ್ಪತ್ರೆಯ ಹೊಸ ಕಟ್ಟಡಕ್ಕೆ ಒಂದು ವಾರದಲ್ಲಿ ಎಲ್ಲಾ ವಾರ್ಡ್‌ಗಳನ್ನು ಸ್ಥಳಾಂತರಿಸಲಾಗುವುದು. ಒಂದು ತಿಂಗಳಲ್ಲಿ ಶಸ್ತ್ರಚಿಕಿತ್ಸೆ ಘಟಕಗಳಿಗೆ ಚಾಲನೆ ನೀಡಲಾಗುವುದು
– ಡಾ.ಶರಣಪ್ರಕಾಶ ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT