ತರಬೇತಿ ಮುಗಿದ ಆರೇ ತಿಂಗಳಿಗೆ ಯದ್ಧ!

7
ಕಾರ್ಗಿಲ್‌ ಯುದ್ಧದ ರೋಚಕ ಕ್ಷಣ, ಸಹ ಸೈನಿಕರ ಅಗಲಿಕೆಯ ನೋವು ಬಿಚ್ಚಿಟ್ಟ ಕ್ಯಾಪ್ಟನ್‌ ನವೀನ್ ನಾಗಪ್ಪ

ತರಬೇತಿ ಮುಗಿದ ಆರೇ ತಿಂಗಳಿಗೆ ಯದ್ಧ!

Published:
Updated:
Deccan Herald

ಶಿವಮೊಗ್ಗ: ಸೇನೆಗೆ ಸೇರಬೇಕು ಎನ್ನುವುದು ಅದಮ್ಯ ಬಯಕೆ. ಹಾಗಾಗಿಯೇ ಎಂಜಿನಿಯರಿಂಗ್ ಆಗುವ ಅವಕಾಶವಿದ್ದರೂ ಸೈನ್ಯಕ್ಕೆ ಸೇರಿದೆ. ತರಬೇತಿ ಮುಗಿದ ಆರೇ ತಿಂಗಳಿಗೆ ಕಾರ್ಗಿಲ್‌ ಯುದ್ಧಕ್ಕೆ ಸಿದ್ಧನಾದೆ. ಅದೊಂದು ರೋಚಕ ಪಯಣ... 
–ಇದು ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದ ಕ್ಯಾಪ್ಟನ್‌ ನವೀನ್ ನಾಗಪ್ಪ ಅವರ ಮನದಾಳದಿಂದ ಹೊರ ಬಂದ ಮಾತುಗಳ ಹಂದರ.

ನಗರದ ಕುವೆಂಪು ರಂಗಮಂದಿರದಲ್ಲಿ ಇಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಮಲ್ನಾಡ್ ಓಪನ್ ಗ್ರೂಪ್ ಆಯೋಜಿಸಿದ್ದ ‘ನವೀನ ನುಡಿಗಳು’ ಸಂವಾದದಲ್ಲಿ ಅವರು ಯುದ್ಧದ ಕ್ಷಣ ಮೆಲುಕು ಹಾಕಿದರು.

ಅಂದು ಯುದ್ದದಲ್ಲಿ ಪಾಕ್ ಸೈನಿಕರ ಸದೆಬಡಿದು ವಿಜಯ ಪತಾಕೆ ಹಾರಿಸಿದ್ದು ರೋಚಕ ಹಾಗೂ ಹೆಮ್ಮೆಯ ಗಳಿಗೆ, ಸೈನಿಕ ತರಬೇತಿ ಮುಗಿದ ತಕ್ಷಣವೇ ಯದ್ಧದಲ್ಲಿ ಭಾಗವಹಿಸುವ ಅವಕಾಶ ದೊರಕಿದ್ದು ಬದುಕಿನ ಸಾರ್ಥಕದ ಸಮಯ ಎಂದು ಬಣ್ಣಿಸಿದರು.

ಪ್ರತಿ ವರ್ಷ ಹಿಮಪಾತವಾಗುವ ಸಮಯದಲ್ಲಿ ಎರಡೂ ರಾಷ್ಟ್ರಗಳ ಸೈನಿಕರು ಹಿಮ ಪ್ರದೇಶದಿಂದ ಮರಳುವುದು ಹಿಂದಿನಿಂದ ಪಾಲಿಸಿಕೊಂಡು ಬಂದ ಪದ್ಧತಿ. 1999ರಲ್ಲಿ ಪಾಕಿಸ್ತಾನ ಈ ಒಪ್ಪಂದ ಉಲ್ಲಂಘಿಸಿ ಕಾರ್ಗಲ್‌ ಬೆಟ್ಟ ಶ್ರೇಣಿಯಲ್ಲಿ ಬೀಡುಬಿಟ್ಟಿತ್ತು. ನಮ್ಮ ಪ್ರದೇಶ ಹಿಡಿತಕ್ಕೆ ತೆಗೆದುಕೊಂಡಿತ್ತು. ಸೂಕ್ತ ಸಮಯದಲ್ಲೇ ಈ ಕೃತ್ಯ ಗಮನಿಸಿದ ಭಾರತೀಯ ಸೇನೆ ಭಾರತದ ಭೂ ಪ್ರದೇಶ ಮರಳಿ ವಶಕ್ಕೆ ಪಡೆಯಲು ಯುದ್ಧ ಘೋಷಿಸಿತ್ತು ಎಂದರು.

‘ಆಗ ಜಮ್ಮು ಮತ್ತು ಕಾಶ್ಮೀರದ 13ನೇ ಬೆಟಾಲಿಯನ್ ತಂಡದಲ್ಲಿದ್ದೆ. ಯುದ್ದದ ಅವಧಿಯಲ್ಲಿ ಹಲವು ರೋಚಕ ಘಟನೆಗಳು ನಡೆದವು. ಪಾಕಿಸ್ತಾನಿ ಸೈನಿಕರ ಬಗ್ಗುಬಡೆದು ಭಾರತೀಯ ಸೇನೆ ಮುನ್ನುಗ್ಗಿತ್ತು. ಬೆಟ್ಟದ ಮೇಲಿನಿಂದ ಪಾಕಿಸ್ತಾನದ ಸೈನಿಕರು ಎಸೆದ ಗ್ರಾನೆಡ್ ಸ್ಫೋಟಗೊಂಡು ಎರಡು ಕಾಲುಗಳಿಗೆ ಬಲವಾದ ಪೆಟ್ಟು ಬಿತ್ತು. 21 ತಿಂಗಳು ಚಿಕಿತ್ಸೆ ಪಡೆದೆ. ಏನೇ ಸಂಕಷ್ಟಗಳು ಎದುರಾದರೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಹೋರಾಟ ಮುಂದುವರಿಸಿದೆವು. ಕಾರ್ಗಲ್‌ ಶಿಖರದ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸುವಲ್ಲಿ ಯಶಸ್ವಿಯಾದೆವು’ ಎಂದು ಘಟನೆ ಮೆಲುಕು ಹಾಕಿದರು.

ತಮಗೆ ಸಹಾಯಕರಾಗಿದ್ದ ಶಾಮ್‌ಸಿಂಗ್ ವೀರ ಮರಣ ಹೊಂದಿದರು. ಕ್ಯಾಪ್ಟನ್‌ ವಿಕ್ರಮ್ ಬಾತ್ರಾ ಮರಣ ಮರೆಯಲಾಗುತ್ತಿಲ್ಲ ಎಂದಾಗ ಅವರ ಕಣ್ಣಾಲಿಗಳು ತೇವಗೊಂಡವು. ದುರ್ಗಿ ಮಾತಾಕಿ ಜೈ ಎಂದು ಯುದ್ಧಕ್ಕೆ ಹೊರಟಾಗ ಕುಟುಂಬ ನೆನಪಿಸಿಕೊಳ್ಳುವುದೇ ಇಲ್ಲ. ಹೋರಾಟದ ಗುರಿಯಷ್ಟೇ ಸೃತಿಪಟಲದ ಮೇಲೆ ಹರಿದಾಡುತ್ತದೆ. ಯುದ್ಧದಲ್ಲಿ ಎಷ್ಟೋ ಸೈನಿಕರು ಹುತಾತ್ಮರಾದರು. ಅವರ ನೆನಪು ಸದಾ ಕಾಡುತ್ತದೆ ಎಂದರು.

ರಾಜೇಶ್ ಅವಲಕ್ಕಿ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಂಸ್ಥೆ ಪ್ರಧಾನ ಆಯುಕ್ತ ಎಚ್.ಡಿ. ರಮೇಶ್ ಶಾಸ್ತ್ರಿ, ಪ್ರಮುಖರಾದ ಗುರುರಾಜ್ ಎಸ್. ಗಿರಿಮಾಜಿ, ಉಮೇಶ್ ಶಾಸ್ತ್ರಿ, ಶಕುಂತಲಾ ಚಂದ್ರಶೇಖರ್ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !