ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಳಂಗಂಡ 5 ಬಾರಿ ಚಾಂಪಿಯನ್

ನಾಪೋಕ್ಲಿನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡೀತೇ ಚೇಂದಂಡ ತಂಡ
Last Updated 15 ಮಾರ್ಚ್ 2023, 4:46 IST
ಅಕ್ಷರ ಗಾತ್ರ

ನಾಪೋಕ್ಲು: ಕೊಡವ ಕೌಟುಂಬಿಕ ಹಾಕಿ ಉತ್ಸವದ 23ನೇ ವರ್ಷದಲ್ಲಿ ಅಪ್ಪಚೆಟ್ಟೋಳಂಡ ಕಪ್ ಯಾರ ಪಾಲಾಗಲಿದೆ ಎಂಬ ಕುತೂಹಲ ಹಾಕಿ ಪ್ರಿಯರಲ್ಲಿ ಮೂಡಿದೆ.

ಇದುವರೆಗೆ ನಡೆದ ಟೂರ್ನಿಗಳಲ್ಲಿ ಪಳಂಗಂಡ ಅತಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದುಕೊಂಡ ತಂಡವಾಗಿದೆ. ಇಲ್ಲಿಯವರೆಗೆ ಪಳಂಗಂಡ ತಂಡ 5 ಬಾರಿ ಚಾಂಪಿಯನ್ ಆಗಿದ್ದು, 2 ಬಾರಿ ರನ್ನರ್ ಅಪ್‌ ಪ್ರಶಸ್ತಿ ಪಡೆದುಕೊಂಡಿದೆ. ಹಾಕಿ ಉತ್ಸವದಲ್ಲಿ ಪಾಲ್ಗೊಳ್ಳಲು ನೋಂದಾಯಿಸಿದ 336 ತಂಡಗಳಲ್ಲಿ ಪಳಂಗಂಡ ಈ ಬಾರಿಯೂ ಚಾಂಪಿಯನ್ ಆಗುವುದೇ ಎಂಬುದು ನಿರೀಕ್ಷೆ, ಕುತೂಹಲ ಮೂಡಿಸಿದೆ. ಹಾಗೆಯೇ, ನಾಪೋಕ್ಲುವಿನಲ್ಲಿ 2 ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡ ಚೇಂದಂಡ ತಂಡ ಹ್ಯಾಟ್ರಿಕ್ ಸಾಧನೆ ಮಾಡುವುದೇ ಎಂಬ ಕುತೂಹಲವೂ ಕ್ರೀಡಾಪ್ರೇಮಿಗಳಲ್ಲಿದೆ.

ಪಳಂಗಂಡ 2006ರಲ್ಲಿ ಕಳ್ಳಿಚಂಡ ಕಪ್, 2010ರಲ್ಲಿ ಮನೆಯಪಂಡ ಕಪ್, 2011ರಲ್ಲಿ ಮಚ್ಚ ಮಾಡ ಕಪ್, 2012ರಲ್ಲಿ ಐಚೆಟ್ಟಿರ ಕಪ್, 2015ರಲ್ಲಿ ಕುಪ್ಪಂಡ ಕಪ್ ಗೆದ್ದುಕೊಂಡಿದೆ. 2010, 2011, 2012ರಲ್ಲಿ ಸತತ 3 ಬಾರಿ ಪ್ರಶಸ್ತಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದೆ. ಆದರೆ, ಬಿದ್ದಾಟಂಡ ಕಪ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಪರದಂಡ ತಂಡದ ವಿರುದ್ಧ ಸೋಲು ಅನುಭವಿಸಿತ್ತು.

2018ರಲ್ಲಿ ನಾಪೋಕ್ಲುವಿನಲ್ಲಿ ಕುಲ್ಲೇಟಿರ ಕೌಟುಂಬಿಕ ಹಾಕಿ ಉತ್ಸವ ನಡೆಯಿತು. ಕುಲ್ಲೇಟಿರ ಕುಟುಂಬವು 3 ಬಾರಿ ಚಾಂಪಿಯನ್ ಆಗಿದೆ. 1998ರಲ್ಲಿ ಕೋಡಿರ ಕಪ್, 1999ರಲ್ಲಿ ಬಲ್ಲಚಂಡ ಕಪ್, 2002ರಲ್ಲಿ ಚಕ್ಕೆರ ಕಪ್ ಗೆದ್ದುಕೊಂಡಿತ್ತು. ನಂತರ, ಹಲವು ಬಾರಿ ಸೆಮಿಫೈನಲ್ ಪ್ರವೇಶಿಸಿತ್ತು.

ಕಲಿಯಂಡ ತಂಡ 2 ಬಾರಿ ಚಾಂಪಿಯನ್ ಆಗಿದ್ದು, ಎರಡು ಬಾರಿ ರನ್ನರ್‌ ಅಪ್‌ ಪ್ರಶಸ್ತಿ ಗೆದ್ದುಕೊಂಡಿದೆ. 2017ರಲ್ಲಿ ನಡೆದ ಬಿದ್ದಾಟಂಡ ಹಾಕಿ ಉತ್ಸವದಲ್ಲಿ ಬಿದ್ದಾಟಂಡ ಕಪ್ ಅನ್ನು ಚೇಂದಂಡ ತಂಡ ಮುಡಿಗೇರಿಸಿಕೊಂಡಿದ್ದರೆ, 2018ರ ಕುಲ್ಲೇಟಿರ ಕಪ್ ಅನ್ನೂ ಜಯಿಸಿತು. 21ನೇ ವರ್ಷದ ಹಾಕಿ ಉತ್ಸವದಲ್ಲಿ ಚೇಂದಂಡ ತಂಡ ಪರದಂಡ ತಂಡದ ವಿರುದ್ಧ ಗೆಲುವು ಸಾಧಿಸಿದ್ದರೆ, 22ನೇ ಹಾಕಿ ಉತ್ಸವದಲ್ಲಿ ಅಂಜಪರವಂಡ ತಂಡದ ವಿರುದ್ಧದ ಗೆಲುವು ಸಾಧಿಸಿತ್ತು. ನಾಪೋಕ್ಲು ಕ್ರೀಡಾಂಗಣದಲ್ಲಿ 4 ವರ್ಷಗಳ ಬಳಿಕ ಅದೇ ಹುಮ್ಮಸ್ಸಿನಲ್ಲಿ ಚೇಂದಂಡ ತಂಡ ಆಡಲಿದೆಯೇ ಎಂಬುದಕ್ಕೆ ಬಹು ನಿರೀಕ್ಷಿತ ಹಾಕಿ ಉತ್ಸವ ಉತ್ತರ ನೀಡಲಿದೆ.

ಕಲಿಯಂಡ ತಂಡ ಕೊಡವ ಹಾಕಿ ಉತ್ಸವದ ಮೊದಲ ಚಾಂಪಿಯನ್‌ ಗೌರವಕ್ಕೆ ಪಾತ್ರರಾಗಿದ್ದಾರೆ. 1997ರಲ್ಲಿ ಕರಡದಲ್ಲಿ ನಡೆದ ಪ್ರಥಮ ವರ್ಷದ ಹಾಕಿ ಉತ್ಸವದ ಟ್ರೋಫಿಯನ್ನು ಕಲಿಯಂಡ ತಂಡ ಗೆದ್ದುಕೊಂಡಿತು. ನಂತರ, ಮತ್ತೊಂದು ಪ್ರಶಸ್ತಿ ಪಡೆಯಲು 2014ರವರೆಗೆ ಈ ತಂಡ ಕಾಯಬೇಕಾಯಿತು. 2011ರಲ್ಲಿ ಫೈನಲ್ ಪ್ರವೇಶಿಸಿದರೂ ಗೆಲ್ಲಲು ಸಾಧ್ಯವಾಗಲಿಲ್ಲ. 2012ರಲ್ಲಿ ರನ್ನರ್ಸ್ ಅಪ್‌ಗೆ ತೃಪ್ತಿ ಪಟ್ಟುಕೊಂಡಿತು.

2016ರಲ್ಲಿ ನಡೆದ ಶಾಂತೆಯಂಡ ಕಪ್‌ನಲ್ಲಿ ಕಲಿಯಂಡ ತಂಡ ಚಾಂಪಿಯನ್ ಆಗಿತ್ತು. ಬಿದ್ದಾಟಂಡ ಕಪ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಲು ಸಾಧ್ಯವಾಗದೆ ನಿರಾಸೆ ಅನುಭವಿಸಿತ್ತು. ಅಂಜಪರವಂಡ ತಂಡವೂ ಎರಡು ಬಾರಿ ಚಾಂಪಿಯನ್ ಆಗಿತ್ತು. 2008ರಲ್ಲಿ ಅಳಮೇಗಂಡ ಕಪ್ ಹಾಗೂ 2013ರಲ್ಲಿ ಮಾದಂಡ ಕಪ್ ಮುಡಿಗೇರಿಸಿಕೊಂಡಿದ್ದ ತಂಡ ಕುಲ್ಲೇಟಿರ ಕಪ್‌ನಲ್ಲಿ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT