ಕೊಡಗು ಮರು ನಿರ್ಮಾಣ: ರಸ್ತೆ ಸಂಪರ್ಕ ಸುಧಾರಣೆ ಕಾರ್ಯ ಚುರುಕು

7
ಕೊಡಗಿನಲ್ಲೀಗ ಪ್ರಖರ ಬಿಸಿಲು, ಬೇಸಿಗೆ‌ ನೆನಪು

ಕೊಡಗು ಮರು ನಿರ್ಮಾಣ: ರಸ್ತೆ ಸಂಪರ್ಕ ಸುಧಾರಣೆ ಕಾರ್ಯ ಚುರುಕು

Published:
Updated:
Deccan Herald

ಮಡಿಕೇರಿ: ಕೊಡಗಿನಲ್ಲೀಗ ಬೇಸಿಗೆ ವಾತಾವರಣ. ಇಲ್ಲಿಗೆ ಈಗ ಬಂದರೆ ಅಷ್ಟೊಂದು‌ ಮಳೆ ಬಂತಾ! ಎಂದು ಹೇಳುವಷ್ಟರ ಮಟ್ಟಿಗೆ ವಾತಾವರಣ ಬದಲಾಗಿದೆ.

ವಾರದಿಂದ ಬಿಸಿಲು ಹೆಚ್ಚಾಗುತ್ತಿದ್ದಂತೆ ರಸ್ತೆ ಕಾಮಗಾರಿ ವೇಗ ಪಡೆದುಕೊಂಡಿದೆ. ಮರಳು ತುಂಬಿಸಿದ ಚೀಲಗಳನ್ನು ಇಟ್ಟು ರಸ್ತೆ‌ ಸಂಪರ್ಕ ಕಲ್ಪಿಸುವ ಕಾಮಗಾರಿ ನಡೆಯುತ್ತಿದೆ. ನಿರಾಶ್ರಿತರಿಗೆ ಆಹಾರ ಮತ್ತು ಪುನರ್ವಸತಿ ಕಲ್ಪಿಸುವ ಕೆಲಸಗಳೂ ನಡೆಯುತ್ತಿವೆ.

ಇನ್ನೊಂದೆಡೆ ಕುಸಿದ ರಸ್ತೆ, ಸೇತುವೆಗಳ ತಾತ್ಕಾಲಿಕ ದುರಸ್ತಿ ಆಗಿದ್ದು, ಮಳೆಯ ಅನಾಹುತಗಳಿಂದ ಆತಂಕ ಪಡುತ್ತಿದ್ದ ಜನ ಸಣ್ಣಪುಟ್ಟ ಕಾರ್ಯಗಳಿಗೆ ವಾಹನಗಳನ್ನು ಬಳಸಲಾರಂಭಿಸಿದ್ದಾರೆ.

ಪ್ರವಾಸೋದ್ಯಮ, ವ್ಯಾಪಾರ- ವಹಿವಾಟು ಕೂಡ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗುತ್ತಿದ್ದು, ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಜನದಟ್ಟಣೆ ಕಂಡುಬರುತ್ತಿದೆ. ಮಡಿಕೇರಿಗೆ ಸಂಪರ್ಕಿಸುವ ಮುಖ್ಯ ರಸ್ತೆ ಸೇರಿದಂತೆ ಜನರಲ್ ತಿಮ್ಮಯ್ಯ ವೃತ್ತ, ಇಂದಿರಾ ಗಾಂಧಿ ವೃತ್ತ, ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಗುಂಡಿ ಬಿದ್ದಿರುವ ರಸ್ತೆಗಳನ್ನು ದುರಸ್ತಿಗೊಳಿಸಲು ನಗರಸಭೆ ಮುಂದಾಗಿದೆ.

ಕೊನೆಗೂ ದುರಸ್ತಿ ಭಾಗ್ಯ: ಗುಂಡಿ ಬಿದ್ದ ರಸ್ತೆಗಳ ದುರಸ್ತಿ ಕಾರ್ಯವನ್ನು ಮಳೆ ಕಾರಣದಿಂದ ವಿಳಂಬಗೊಳಿಸಲಾಗಿತ್ತು. ಕೆಲವಡೆ ಮಣ್ಣು ಹಾಕಿ ದುರಸ್ತಿ ಮಾಡಿದರೆ ಇನ್ನೂ ಹಲವಡೆ ಡಾಂಬರೀಕರಣ ಮಾಡುವ ಮೂಲಕ ರಸ್ತೆ ಸುಧಾರಣೆ ಮಾಡಲಾಗುತ್ತಿದೆ.

ದಸರಾ ಸಮೀಪಿಸುತ್ತಿರುವ ಕಾರಣ ಬೇಗ ಕಾಮಗಾರಿ ಪೂರ್ಣ ಗೊಳಿಸಲು ಗುತ್ತಿಗೆದಾರರಿಗೆ ನಗರಸಭೆ ಸೂಚಿಸಿದೆ. ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ನಿಟ್ಟುಸಿರು ಬಿಟ್ಟಿದ್ದು, ರಸ್ತೆಗುಂಡಿ ಮುಚ್ಚುವ ಕಾರ್ಯ ಕಳಪೆಯಾಗದೆ ಗುಣಮಟ್ಟದಿಂದ ಕೂಡಿರಲಿ ಎಂಬ ಅಭಿಪ್ರಾಯಗಳನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಹಲವು ವರ್ಷಗಳಿಂದ ರಾಜಾಸೀಟ್‌ ಮಾರ್ಗದ ರಸ್ತೆ, ಮಂಗೇರಿರ ಮುತ್ತಣ್ಣ ವೃತ್ತ, ರಾಣಿಪೇಟೆ, ರೇಸ್‌ ಕೋರ್ಸ್‌ ರಸ್ತೆ, ಕಾನ್ವೆಂಟ್‌ ಜಂಕ್ಷನ್‌, ದೇಚೂರು ರಸ್ತೆ, ಪೆನ್ಷನ್‌ ಲೈನ್‌, ರಾಜರಾಜೇಶ್ವರಿ ದೇವಾಲಯಕ್ಕೆ ತೆರಳುವ ರಸ್ತೆ, ಕೊಹಿನೂರು ರಸ್ತೆ, ಗಣಪತಿ ಬೀದಿಯ ರಸ್ತೆ ಸೇರಿದಂತೆ ನಗರದ ಹಲವು ಮುಖ್ಯ ರಸ್ತೆಗಳು ಗುಂಡಿ ಬಿದ್ದು ಸಂಚಾರಕ್ಕೆ ದುಸ್ತರವಾಗಿದ್ದವು. ಈ ರಸ್ತೆಗಳಲ್ಲೂ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದೆ.

ನೂತನ ರಸ್ತೆ ನಿರ್ಮಾಣಕ್ಕೆ ಆಗ್ರಹ: ನಗರದಲ್ಲಿರುವ ಸಾಕಷ್ಟು ರಸ್ತೆಗಳು ಭಾರಿ ಮಳೆಗೆ ಕೊಚ್ಚಿ ಹೋಗಿರುವುದರಿಂದ ಹೊಸದಾಗಿಯೇ ರಸ್ತೆಗಳ ನಿರ್ಮಾಣವನ್ನು ನಗರಸಭೆ ಕೈಗೆತ್ತಿಗೊಳ್ಳಬೇಕು. ಈ ಬಗ್ಗೆ ಸರ್ಕಾರದಿಂದ ಅನುದಾನ ಪಡೆದು ಬೃಹತ್‌ ಯೋಜನೆಯಡಿ ಗುಣಮಟ್ಟದ ನೂತನ ರಸ್ತೆಗಳು ಆಗಬೇಕು ಎಂಬ ಆಗ್ರಹ ನಗರವಾಸಿಗಳಲ್ಲಿ ಕೇಳಿ ಬರುತ್ತಿವೆ.

ಯುಜಿಡಿ ಕಿರಿಕಿರಿ: ಈ ಭಾರಿ ಸುರಿವ ಮಳೆಗೆ ನಗರದ ವಿವಿಧ ರಸ್ತೆಗಳು ಗುಂಡಿ ಬಿದ್ದು, ನೀರು ತುಂಬಿಕೊಳ್ಳುತ್ತದೆ. ನಗರದಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಯುಜಿಡಿ ಕಾಮಗಾರಿಯಿಂದ ಬಹುತೇಕ ರಸ್ತೆಗಳು ಹದಗೆಟ್ಟಿವೆ. ನೂತನ ರಸ್ತೆಯ ಮೊದಲು ಯುಜಿಡಿ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲವೇ ಯುಜಿಡಿ ಕಾಮಗಾರಿಯನ್ನು ನಗರಸಭೆ ಕೈ ಬಿಡಬೇಕು ಎಂದು ಕಾವೇರಿ ಬಡಾವಣೆಯ ನಿವಾಸಿ ದೀಕ್ಷಿತ್‌ ರೈ ಹೇಳುತ್ತಾರೆ.

ಹಳೆಯ ಮಡಿಕೇರಿ ನೆನಪು

ನಿರಾಶ್ರಿತರ ಕೇಂದ್ರದಲ್ಲಿ ಸಂತ್ರಸ್ತರ ಸಂಖ್ಯೆ ಕಡಿಮೆಯಾಗುತ್ತಿವೆ. ಜತೆಗೆ ಶಾಲೆ, ಬಸ್ ಓಡಾಟ ಆರಂಭವಾಗಿದ್ದು, ಪ್ರವಾಸಿಗರಿಗೂ ಮಡಿಕೇರಿಗೆ ಹೆಚ್ಚು ಆಗಮಿಸುತ್ತಿರುವುದರಿಂದ ಸಹಜ ಸ್ಥಿತಿಯತ್ತ ಮಡಿಕೇರಿ ಬಂದಿದೆ. ಈ ಶುಕ್ರವಾರದಿಂದ ಹೆಚ್ಚಿನ ಪ್ರವಾಸಿ ವಾಹನಗಳು‌ ಪ್ರವಾಸಿ ತಾಣಗಳ ಬಳಿ ಕಂಡುಬಂದವು.

ಪರ್ಯಾಯ ನೆಲೆ ಕಂಡುಕೊಳ್ಳುವ ಪ್ರಯತ್ನದಲ್ಲಿರುವ ನಿರಾಶ್ರಿತರು ಅಳಿದುಳಿದ ಪೀಠೊಪಕರಣಗಳು, ಬಳಕೆಗೆ ಯೋಗ್ಯವಾದ ಗೃಯೋಪಯೋಗಿ ವಸ್ತುಗಳ ಶೋಧದಲ್ಲಿ ಸಾಮೂಹಿಕವಾಗಿ ತೊಡಗಿಸಿಕೊಂಡಿದ್ದಾರೆ. ಮತ್ತೆ ಇಂಥ ಸಂಕಷ್ಟ ಕೊಡಗಿಗೆ ಬೇಡ ಎಂದು ಜನ ಪ್ರಾರ್ಥಿಸುತ್ತಿದ್ದಾರೆ.

ಮುಖ್ಯಾಂಶಗಳು
* ತಿಂಗಳ ಬಳಿಕ ವಹಿವಾಟಿನಲ್ಲೂ ಸುಧಾರಣೆ

* ಅಲ್ಲಲ್ಲಿ ಬಸ್ ಸೇವೆ ಆರಂಭ

* ಭರದಿಂದ ಸಾಗುತ್ತಿದೆ ಮರು ನಿರ್ಮಾಣ ಕಾರ್ಯ

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !