ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ ಕೊರತೆ; ಪಶು ಇಲಾಖೆಯೇ ರೋಗಗ್ರಸ್ತ

ಚರ್ಮಗಂಟು ರೋಗ ಇಲ್ಲ, ಮುಂಜಾಗ್ರತಾ ಕ್ರಮವಾಗಿ ಬಂದಿವೆ ಲಸಿಕೆಗಳು
Last Updated 5 ಡಿಸೆಂಬರ್ 2022, 12:41 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪಶುಗಳಿಗಿಂತ ಪಶು‍ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯೇ ಸಮಸ್ಯೆಗಳಿಂದ ಬಳಲುತ್ತಿದ್ದು, ಸರ್ಕಾರ ತುರ್ತಾಗಿ ಸಿಬ್ಬಂದಿಯನ್ನು ನಿಯೋಜಿ ಸಬೇಕಿದೆ. ಇಲ್ಲದಿದ್ದರೆ ಕಾಯಿಲೆಗಳು ಉಲ್ಬಣಿಸಿದರೆ ನಿಭಾಯಿಸುವುದು ಕಷ್ಟವಾಗಲಿದೆ. ಸದ್ಯ ಜಿಲ್ಲೆಯಲ್ಲಿ ಕಾಲುಬಾಯಿ ಜ್ವರವಾಗಲಿ, ಚರ್ಮಗಂಟು ರೋಗವಾಗಲಿ ಕಂಡು ಬಂದಿಲ್ಲ. ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕುವ ಪ್ರಕ್ರಿಯೆ ನಡೆಯುತ್ತಿದೆ.

ಜಿಲ್ಲೆಯಲ್ಲಿ 93,538 ರಾಸುಗಳಿವೆ. ಇವುಗಳಿಗೆ 50 ವೈದ್ಯರು ಬೇಕಾಗಿದ್ದಾರೆ. ಆದರೆ, ಇರುವುದು ಕೇವಲ 18 ವೈದ್ಯರು ಮಾತ್ರ. ಜಾನುವಾರು ಅಭಿವೃದ್ಧಿ ಅಧಿಕಾರಿ 5 ಮಂದಿ ಇರಬೇಕಿತ್ತು, ಇರುವುದು ಕೇವಲ ಇಬ್ಬರೇ. 14 ಮಂದಿ ಇರಬೇಕಾದ ಜಾನುವಾರು ಅಧಿಕಾರಿಗಳು ಇರುವುದು ಕೇವಲ ಮೂವರು. ಹಿರಿಯ ಪಶುವೈದ್ಯಕೀಯ ಪರೀಕ್ಷಕರು 37 ಬೇಕಿದ್ದು 17 ಮಂದಿ ಯಷ್ಟೇ ಇದ್ದಾರೆ. ಕಿರಿಯ ಪಶು ವೈದ್ಯಕೀಯ ಪರೀಕ್ಷಕರು 43 ಮಂದಿ ಬೇಕಿದೆ. ಆದರೆ, ಇರುವುದು ಕೇವಲ ಇಬ್ಬರೇ. 118 ಮಂದಿ ಡಿ ದರ್ಜೆ ನೌಕರರು ಇರಬೇಕಾದ ಕಡೆ ಇರುವುದು ಕೇವಲ 17. ಹೊರಗುತ್ತಿಗೆಯಡಿ 21 ಮಂದಿಯನ್ನು ನೇಮಕ ಮಾಡಿಕೊಳ್ಳ ಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಕೊರತೆಯ ನಡುವೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಕಾಲುಬಾಯಿ ಜ್ವರಕ್ಕೆ ಲಸಿಕೆ ಹಾಕುತ್ತಿದೆ. ಡಿ. 7ಕ್ಕೆ ಇದು ಮುಗಿಯಲಿದೆ.

ಚರ್ಮಗಂಟು ರೋಗಕ್ಕೆ 10 ಸಾವಿರ ಡೋಸ್ ಲಸಿಕೆ ಬಂದಿದ್ದು, 4 ಸಾವಿರಕ್ಕೂ ಅಧಿಕ ಲಸಿಕೆ ಹಾಕಲಾಗಿದೆ. ಈ ಲಸಿಕೆಗಳನ್ನು ಸೋಮವಾರಪೇಟೆ, ಕುಶಾಲನಗರ, ವಿರಾಜಪೇಟೆ ಭಾಗಗಳಿಗೆ ಹಂಚಿಕೆ ಮಾಡಲಾಗಿದೆ. ಹೆಚ್ಚುವರಿ ಯಾಗಿ 39 ಸಾವಿರ ಲಸಿಕೆಯನ್ನು ತರಿಸಿಕೊಳ್ಳಲಾಗುತ್ತಿದೆ.

ಕೊಡಗು ಜಿಲ್ಲೆಗೆ ಬೇಕಿದೆ ಇನ್ನಷ್ಟು ಸಿಬ್ಬಂದಿ: ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಭೌಗೋಳಿಕವಾಗಿ ವಿಭಿನ್ನವಾಗಿರುವ ಕೊಡಗು ಜಿಲ್ಲೆಗೆ ಅಗತ್ಯ ಇರುವಷ್ಟು ಸಿಬ್ಬಂದಿಯನ್ನು ಸರ್ಕಾರ ನೇಮಕ ಮಾಡಬೇಕಿದೆ. ಗುಡ್ಡಗಾಡು ಪ್ರದೇಶ, ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಇರುವ ಭಾರಿ ಅಂತರ, ಒಂದು ಮನೆಯಿಂದ ಮತ್ತೊಂದು ಮನೆಗೆ ಇರುವ ದೂರ. ಇವುಗಳೆಲ್ಲವನ್ನೂ ಪರಿಗಣಿಸಿ ಯಾದರೂ ಕೊಡಗು ಜಿಲ್ಲೆ ಯನ್ನು ವಿಶೇಷವೆಂದು ಪರಿಗಣಿಸಿ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಬೇಕಿದೆ. ಒಬ್ಬ ವೈದ್ಯರು ಒಂದು ಗ್ರಾಮಕ್ಕೆ ಹೋದರೆ ಇಡೀ ದಿನ ಇಡಿಯುತ್ತದೆ. ಕೆಲಸಗಳು ಶೀಘ್ರಗತಿಯಲ್ಲಿ ಸಾಗುವು ದಿಲ್ಲ. ಇದರಿಂದ ರೈತರು ನಿರೀಕ್ಷಿಸಿದಷ್ಟು ವೇಗದಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ.

ಸರ್ಕಾರ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಿ ಸೋಮವಾರಪೇಟೆ ತಾಲ್ಲೂ ಕಿನ ಪ್ರತಿ ಹೋಬಳಿ ಮಟ್ಟದಲ್ಲಿಯೂ ಪಶು ಚಿಕಿತ್ಸಾ ಕೇಂದ್ರಗಳನ್ನು ತೆರೆದಿದೆ. ಸುಸಜ್ಜಿತ ಕಟ್ಟಡಗಳನ್ನು ನೀಡಿದ್ದರೂ ಸಿಬ್ಬಂದಿ ಕೊರತೆಯಿಂದ ಯೋಜನೆ ನಿರುಪಯುಕ್ತವಾಗುತ್ತಿದೆ.

ತಾಲ್ಲೂಕಿನ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಒಬ್ಬರೇ ವೈದ್ಯರು ಕೆಲಸ ಮಾಡುತ್ತಿದ್ದು, ಸಮಸ್ಯೆಯಾಗಿದೆ. ಆಸ್ಪತ್ರೆಗೆ ಕರೆತರುವ ಪ್ರಾಣಿಗಳನ್ನು ನೋಡುವುದರೊಂದಿಗೆ ಹೊರಭಾಗ ದಿಂದ ಕರೆ ಬಂದಲ್ಲಿ ಸ್ಥಳಕ್ಕೆ ಹೋಗಿ ನೋಡಬೇಕಾದ ಅನಿವಾರ್ಯತೆ ಇದೆ. ಇದರೊಂದಿಗೆ ವೈದ್ಯರನ್ನು ಗ್ರಾಪಂ. ನೋಡಲ್ ಅಧಿಕಾರಿ ಯಾಗಿ ಮತ್ತು ಚುನಾವಣೆಗಳಿಗೆ ನೇಮಕ ಮಾಡುವುದ ರಿಂದ, ಮೊದಲೇ ವೈದ್ಯರ ಕೊರತೆ ಎದುರಿಸುತ್ತಿರುವ ಆಸ್ಪತ್ರೆಯಲ್ಲಿ ಇನ್ನಷ್ಟು ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.

ಕೊಡ್ಲಿಪೇಟೆ, ಆಲೂರು ಸಿದ್ದಾಪುರ, ಗೌಡಳ್ಳಿ, ಮಾದಾಪುರ, ಶಾಂತಳ್ಳಿ ಕೇಂದ್ರಕ್ಕೆ ವೈದ್ಯರೇ ಇಲ್ಲ. ಶನಿವಾರಸಂತೆ, ಅಬ್ಬೂರುಕಟ್ಟೆ, ಗೌಡಳ್ಳಿ, ಗೋಣಿಮರೂರು, ತೋಳೂರುಶೆಟ್ಟಳ್ಳಿ, ನಿಡ್ತ, ಗರ್ವಾಲೆ ಮತ್ತು ಚೆಟ್ಟಳ್ಳಿಯಲ್ಲಿ ಕೆಲವೇ ಕೆಲವು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

ಕುಶಾಲನಗರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿರುವ ಪಶುವೈದ್ಯ ಆಸ್ಪತ್ರೆ ಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಜಾನುವಾರುಗಳ ಚಿಕಿತ್ಸೆಗಾಗಿ ರೈತರು ಪರದಾಡುವ ಸ್ಥಿತಿಯಿದೆ.

ಹೆಬ್ಬಾಲೆ, ತೊರೆನೂರು, ಶಿರಂಗಾಲ, ಹುದುಗೂರು, ಗುಡ್ಡೆಹೊ ಸೂರು ಹಾಗೂ ನಂಜರಾಯಪಟ್ಟಣ ವ್ಯಾಪ್ತಿಯಲ್ಲಿರುವ ಪಶುವೈದ್ಯ ಆಸ್ಪತ್ರೆಗ ಳಲ್ಲಿ ವೈದ್ಯರಿಲ್ಲದೆ ರೈತರು ಹೈರಾಣಾಗಿ ಹೋಗಿದ್ದಾರೆ.

ಜಿಲ್ಲೆಯಲ್ಲಿಯೇ ಅತಿ ದೊಡ್ಡ ಗ್ರಾಮ ವ್ಯಾಪ್ತಿಯನ್ನು ಹೊಂದಿರುವ ಹೆಬ್ಬಾಲೆ ಗ್ರಾಮದಲ್ಲಿ ಒಂದೂವರೆ ದಶಕದಿಂದ ಪಶುವೈದ್ಯರಿಲ್ಲ.

ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪ್ರಮಾಣದ ಹಾಲು ಉತ್ಪಾದನೆ ಹೊಂದಿರುವ ಈ ಗ್ರಾಮಗಳಲ್ಲಿ ಪಶುವೈದ್ಯ ಅಲಭ್ಯತೆ ಯಿಂದ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಇಲ್ಲದಂತ ಪರಿಸ್ಥಿತಿ ಉಂಟಾಗಿದೆ ಎಂದು ರೈತರು ತಮ್ಮ ಅಳಲು ತೊಡಿಕೊಂಡಿದ್ದಾರೆ.

ಪಶುಚಿಕಿತ್ಸಾಲಯದಲ್ಲಿ ಕೇವಲ ಡಿ.ದರ್ಜೆಯ ನೌಕರರು ಇದ್ದು, ಉತ್ತಮ ಚಿಕಿತ್ಸೆಗೆ ದೂರದ ಕೂಡಿಗೆ ಹಾಗೂ ಕುಶಾಲನಗರದಿಂದ ಖಾಸಗಿ ವೈದ್ಯರನ್ನು ಕರೆಸಿ ರಾಸುಗಳಿಗೆ ಚಿಕಿತ್ಸೆ ಕೊಡಿಸುವ ದುಸ್ಥಿತಿ ನಿರ್ಮಾಣಗೊಂಡಿದೆ.

ಶನಿವಾರಸಂತೆ ಪಟ್ಟಣದ ಮುಖ್ಯರಸ್ತೆ
ಯಲ್ಲಿ ಇರುವ ಪಶು ಆಸ್ಪತ್ರೆ ಹೋಬಳಿ ವ್ಯಾಪ್ತಿಯ ಮುಖ್ಯ ಆಸ್ಪತ್ರೆಯಾಗಿದೆ. 1956ರಲ್ಲಿ ಅಂದಿನ ಕೂರ್ಗ್ ಮುಖ್ಯ
ಮಂತ್ರಿ ಸಿ.ಎಂ.ಪೂಣಚ್ಚ ಅವರಿಂದ ಉದ್ಘಾಟಿಸಲ್ಪಟ್ಟಿತ್ತು. ಅಂದಿನ ಚಿಕಿತ್ಸಾ ಕೇಂದ್ರ ಇಂದು ಆಸ್ಪತ್ರೆಯಾಗಿದೆ.

ಶನಿವಾರಸಂತೆ, ದುಂಡಳ್ಳಿ ಹಾಗೂ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರು, ಪಶುಪಾಲಕರೇ ಅಧಿಕ ಸಂಖ್ಯೆಯಲ್ಲಿದ್ದು ಶನಿವಾರಸಂತೆ ಪಶು ಆಸ್ಪತ್ರೆಗೆ ಪ್ರತಿದಿನ 50-60 ಮಂದಿ ಜಾನುವಾರುಗಳನ್ನು ಪರೀಕ್ಷೆ ಮತ್ತು ಚಿಕಿತ್ಸೆ ಗಾಗಿ ಕರೆತರುತ್ತಾರೆ. ಸಾಕು ನಾಯಿ, ಬೆಕ್ಕು ಇತರೆ ಪ್ರಾಣಿಗಳನ್ನು ಚಿಕಿತ್ಸೆ ಗಾಗಿ ಕರೆತರುವುದು ಸಾಮಾನ್ಯವಾಗಿದೆ.

ಪ್ರಸ್ತುತ ನಿಡ್ತ ಗ್ರಾಮದ ಪಶು ಚಿಕಿತ್ಸಾಲಯ ವೈದ್ಯಾಧಿಕಾರಿ ಡಾ.ಬಿ.ಎಂ. ಸತೀಶ್ ಶನಿವಾರಸಂತೆ ಆಸ್ಪತ್ರೆಯ ಪ್ರಭಾರ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಸ್.ಎಸ್. ಚಂದ್ರಶೇಖರ್ ಖಾಯಂ ಜಾನುವಾರು ಅಧಿಕಾರಿಯಾಗಿದ್ದಾರೆ.ನಿಡ್ತ ಪಶು ಚಿಕಿತ್ಸಾಲಯದ ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಎಸ್.ಪಿ. ಧರ್ಮರಾಜ್ ಹಾಗೂ ಅಂಕನಳ್ಳಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ಕಿರಿಯ ಪಶು ವೈದ್ಯಕೀಯ ಪರೀಕ್ಷಕ ಸರ್ವರ್ ಪಾಶ ಶನಿವಾರಸಂತೆ ಆಸ್ಪತ್ರೆಯಲ್ಲೂ ಕರ್ತವ್ಯ ನಿರ್ವಹಿಸಬೇಕಾಗಿದೆ.

ವಿರಾಜಪೇಟೆ ಪಟ್ಟಣದಲ್ಲಿ ತಾಲ್ಲೂಕು ಪಶು ಆಸ್ಪತ್ರೆಯಿದ್ದು, ಅಗತ್ಯ ಸೌಲಭ್ಯಗಳು ಇಲ್ಲಿದೆ. ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಈಚೆಗೆ ಆಸ್ಪತ್ರೆಗೆ ನಿರ್ಮಿಸಿದ ನೂತನ ಕೊಠಡಿಯನ್ನು ಉದ್ಘಾಟಿಸಲಾಗಿತ್ತು. ಜತೆಗೆ ನೂತನ ತುರ್ತು ಚಿಕಿತ್ಸಾ ವಾಹನವನ್ನು ಒದಗಿಸಲಾಗಿದೆ. ತಾಲ್ಲೂಕಿನಲ್ಲಿ ಪಶು ಆಸ್ಪತ್ರೆಯಲ್ಲಿ ಅಗತ್ಯ ವೈದ್ಯರು ಸೇರಿದಂತೆ ಅಗತ್ಯ ಸಿಬ್ಬಂದಿ ಕೊರತೆಯಿದೆ.

ಈಚೆಗೆ ಆಸ್ಪತ್ರೆಗೆ ತುರ್ತು ಚಿಕಿತ್ಸಾ ವಾಹನ ಒದಗಿಸಲಾಗಿದೆ. ಆದರೂ ಇನ್ನು ಟೆಂಡರ್ ಪ್ರಕ್ರಿಯೆ ಪೂರ್ಣ ಗೊಂಡಿಲ್ಲ. ಇದರಿಂದ ನೂತನ ತುರ್ತು ವಾಹನ ಇನ್ನು ಸೇವೆಗೆ ಲಭ್ಯವಾಗಿಲ್ಲ.

ಅಸ್ವಿತ್ವ ಕಳೆದುಕೊಳ್ಳಲಿರುವ ಕಾಳೀದೇವರಹೊಸೂರು ಪಶುಪಾಲನಾ ಕೇಂದ್ರ

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳೀದೇವರಹೊಸೂರು 2.20 ಎಕರೆ ಪೈಸಾರಿ ಜಾಗದಲ್ಲಿ 1920 ರಲ್ಲಿ ಬ್ರಿಟಿಷರು ಗೋಸದನ ನಿರ್ಮಾಣ ಮಾಡಿ ನಂತರ 1958 ರಲ್ಲಿ ಪಶುಪಾಲನಾ ಕೇಂದ್ರವನ್ನು ಆರಂಭಿಸಿ ಸುತ್ತಮುತ್ತಲಿನ ರೈತರಿಗೆ ಅನುಕೂಲ ಕಲ್ಪಿಸಿದ್ದರು. ಆದರೆ ಈಗ ಈ ಜಾಗವನ್ನು ಸಂರ್ಪೂಣವಾಗಿ ಸಾಮಾಜಿಕ ಅರಣ್ಯ ಇಲಾಖೆಗೆ ವರ್ಗಾಯಿಸಿ ಆರ್‌ಟಿಸಿ ಕೂಡಾ ನಮೂದಾಗಿದೆ. ಇದರಿಂದ ಪಶುಪಾಲನಾ ಕೇಂದ್ರ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.

ಕೆಲಸದ ಹೊರೆ ಮುಗಿಸಲು ಆಗುತ್ತಿಲ್ಲ

ದಿನದ 24 ಗಂಟೆ ಕೆಲಸ ಮಾಡಿದರೂ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಕಾಲು ಬಾಯಿ ಜ್ವರದ ಲಸಿಕೆ ನೀಡುವ ಕೆಲಸ ನಡೆಯುತ್ತಿದ್ದು, ಸಿಬ್ಬಂದಿಯನ್ನು ಎರಡು ತಂಡಗಳಲ್ಲಿ ಗ್ರಾಮೀಣ ಭಾಗಗಳಿಗೆ ಕಳುಹಿಸಲಾಗುತ್ತಿದೆ. ಆಸ್ಪತ್ರೆಯಲ್ಲಿ ನನ್ನೊಂದಿಗೆ ಗುತ್ತಿಗೆ ಆಧಾರದ ಸಿಬ್ಬಂದಿ ಮಾತ್ರ ಇದ್ದು ಹೆಚ್ಚಿನ ಸಮಸ್ಯೆಯಾಗಿದೆ

ಡಾ.ಬದಾಮಿ, ಸಹಾಯಕ ನಿರ್ದೇಶಕ, ಸೋಮವಾರಪೇಟೆ ಆಸ್ಪತ್ರೆ

ಪ್ರಾಣಿಗಳ ಚಿಕಿತ್ಸೆಯೇ ತಲೆನೋವು

ಮಲೆ ನಾಡಾಗಿದ್ದು, ಬೆಟ್ಟ ಗುಡ್ಡಗಳಿಂದ ಕೂಡಿರುವ ತಾಲ್ಲೂಕಿನಲ್ಲಿ ಸಂಚಾರ ದುಸ್ತರ. ಇದರ ನಡುವೆ, ತಕ್ಷಣ ಚಿಕಿತ್ಸೆ ಕೊಡಬೇಕೆಂದರೆ, ಸಾಧ್ಯವೇ ಇಲ್ಲ. ವೈದ್ಯರು ಸ್ಥಳಕ್ಕೆ ತಲುಪುವವರೆಗೆ ಸಾಕು ಪ್ರಾಣಿಗಳ ಜೀವವೇ ಇಲ್ಲವಾಗಿರುತ್ತದೆ. ಕೆಲವೆಡೆ ದಿನಗೂಲಿ ನೌಕರರು ಸರಿಯಾಗಿ ಕೆಲಸ ಬಾರದ್ದ ಇನ್ನೂ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ

ರಾಜೇಶ್, ಯಡವಾರೆ ಗ್ರಾಮ ನಿವಾಸಿ

ಪಶುಪಾಲನಾ ಕೇಂದ್ರ ಮೇಲ್ದರ್ಜೆಗೇರಿಸಿ

ಆರು ದಶಕಗಳ ಹಿಂದೆ ಹುದುಗೂರು ಗ್ರಾಮದಲ್ಲಿ ಸ್ಥಾಪನೆಗೊಂಡ ಪಶುಪಾಲನಾ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು. ಜೊತೆಗೆ ವೈದ್ಯರು ಹಾಗೂ ಸಿಬ್ಬಂದಿ ನಿಯೋಜಿಸಿ ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸಬೇಕು.

ಟಿ.ಎಂ.ಚಿಣ್ಣಪ್ಪ, ರೈತ ಮುಖಂಡ, ಹುದುಗೂರು.

ಪ್ರಾಮಾಣಿಕ ಸೇವೆ ಮಾಡುವೆ

4 ಕಡೆ ಕರ್ತವ್ಯ ನಿರ್ವಹಿಸಬೇಕಾಗಿದ್ದು ಕೆಲಸದ ಒತ್ತಡ ಬಹಳವಿದೆ. ಆದರೆ. ಇಲ್ಲಿನ ರೈತರು, ಹೈನುಗಾರಿಕೆ ಮಾಡುವವರು ಸಂಪೂರ್ಣ ಸಹಕಾರ ನೀಡುವುದರಿಂದ ಸಕಾಲಕ್ಕೆ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದೆ. ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲವಾದರೂ ಪ್ರಾಮಾಣಿಕವಾಗಿ ನನ್ನ ಕರ್ತವ್ಯ ನಿರ್ವಹಿಸುತ್ತಿರುವೆ.

ಡಾ.ಬಿ.ಎಂ.ಸತೀಶ್, ಪಶು ವೈದ್ಯಾಧಿಕಾರಿ, ಶನಿವಾರಸಂತೆ

ವೈದ್ಯರಿದ್ದರೆ ಹೂನುಗಾರಿಕೆ ಸುಲಭ

ಶನಿವಾರಸಂತೆ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸತೀಶ್ ಪ್ರಾಮಾಣಿಕ ವೈದ್ಯ. ಜಾನುವಾರುಗಳಿಗೆ ಉತ್ತಮ ಚಿಕಿತ್ಸೆ ಜತೆಗೆ ಔಷಧಿ ನೀಡುತ್ತಾರೆ. ಮಾನವೀಯತೆಯಿಂದ ಸ್ಪಂದಿಸುತ್ತಾರೆ. ಇಂತಹ ವೈದ್ಯರಿದ್ದರೇ ಹೈನುಗಾರಿಕೆ ಸುಲಭ

ಯತೀಶ್, ಕೃಷಿಕ, ಕೂಗೂರು ಗ್ರಾಮ.

ರೇಬಿಸ್ ಚುಚ್ಚುಮದ್ದು ಪ್ರತಿವರ್ಷ ನೀಡಲಿ

ಆಗಸ್ಟ್ ತಿಂಗಳಿನಲ್ಲಿ ಸರ್ಕಾರದ ಯೋಜನೆಯಂತೆ ಪಶು ಆಸ್ಪತ್ರೆಯಲ್ಲಿ ಸಾಕು ನಾಯಿಗಳಿಗೆ ಉಚಿತವಾಗಿ ರೇಬಿಸ್ ಚುಚ್ಚುಮದ್ದನ್ನು ನೀಡಲಾಯಿತು. ಈ ಯೋಜನೆಯನ್ನು ಪ್ರತಿವರ್ಷವೂ ಮುಂದುವರಿಸುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ.

ಸುಭಾಷ್, ಪ್ರಾಣಿಪ್ರಿಯ, ವಿರಾಜಪೇಟೆ

***************************

ನಿರ್ವಹಣೆ: ಕೆ.ಎಸ್.ಗಿರೀಶ್

ಪೂರಕ ಮಾಹಿತಿ: ರಘು ಹೆಬ್ಬಾಲೆ, ಲೋಕೇಶ್ ಡಿ.ಪಿ, ಹೇಮಂತ್‌ಕುಮಾರ್ ಶ.ಗ. ನಯನತಾರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT