ಶನಿವಾರ, ಸೆಪ್ಟೆಂಬರ್ 25, 2021
24 °C
ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶಾಸಕ ಅಪ್ಪಚ್ಚುರಂಜನ್

‘ಕೊಡವ ಭಾಷೆಗೂ ಆದ್ಯತೆ ಇರಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ‘ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು. ಬದುಕಿನ ಭಾಷೆಯಾದ ಇಂಗ್ಲಿಷ್‍ ಅನ್ನು ದ್ವಿತೀಯ ಭಾಷೆಯಾಗಿ ಕಲಿಯಬೇಕು. ಕೊಡವ ಭಾಷೆಯನ್ನು ತೃತೀಯ ಭಾಷೆ ಆದ್ಯತೆ ನೀಡಿ ಕಲಿಯಬೇಕು’ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಇಲ್ಲಿ ಕರೆ ನೀಡಿದರು.

ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಭಾನುವಾರ ನಡೆದ 2019-20 ಹಾಗೂ 2020-21ನೇ ಸಾಲಿನ ಗೌರವ ಹಾಗೂ ಪುಸ್ತಕ ಪ್ರಶಸ್ತಿ ಪ್ರದಾನ ಸಮಾರಂಭ, ಕೊಡವ ಶಬ್ದಕೋಶ ಮತ್ತು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕೊಡವ ಭಾಷೆ ಮಾತನಾಡುವವರು ವಿಶ್ವದೆಲ್ಲೆಡೆ ಇದ್ದು, ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಯನ್ನು ಎಲ್ಲೆಡೆಯೂ ಪಸರಿಸುವಂತಾಗಬೇಕು. ವಿಶ್ವದೆಲ್ಲೆಡೆ ಕೊಡವ ಸಮಾಜ ಇದೆ. ಆದ್ದರಿಂದ ದೇಶ, ವಿದೇಶಗಳಲ್ಲಿಯೂ ಕೊಡವ ಸಂಸ್ಕೃತಿ, ಆಚಾರ, ವಿಚಾರ ಮತ್ತಷ್ಟು ಪಸರಿಸುವಂತಾಗಬೇಕು’ ಎಂದು ಹೇಳಿದರು.

‘ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಇಡೀ ವಿಶ್ವಕ್ಕೆ ಕೊಡವ ಭಾಷೆಯನ್ನು ಪರಿಚಯಿಸಿದ್ದಾರೆ. ಅಮೆರಿಕಾದಲ್ಲಿಯೂ ಕೊಡವ ಸಮಾಜ ಇದೆ’ ಎಂದರು.

ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಕೊಡವ ಶಬ್ದಕೋಶ ಬಿಡುಗಡೆ ಮಾಡಿ ಮಾತನಾಡಿ, ‘ಕೊಡವ ಸಂಸ್ಕೃತಿ, ಕಲೆ, ಆಚಾರ ವಿಚಾರಗಳು ಶ್ರೀಮಂತಿಕೆಯಿಂದ ಕೂಡಿದೆ. ಕೊಡವ, ಸಂಸ್ಕೃತಿ ಮತ್ತು ಕಲೆಗಳು ಉಳಿದಾಗ ಭಾಷೆ ಬೆಳೆಯಲು ಸಾಧ್ಯ. ಇದರಿಂದ ಮುಂದಿನ ಜನಾಂಗಕ್ಕೆ ಭಾಷೆ ಉಳಿಸಲು ಸಾಧ್ಯ’ ಎಂದು ಹೇಳಿದರು.

‘ಕೊಡವ ಸಂಸ್ಕೃತಿ ಉಳಿಸಿ–ಬೆಳೆಸುವಲ್ಲಿ ಪ್ರಶಸ್ತಿ ಪ್ರದಾನ ಸೇರಿದಂತೆ ಹಲವು ಕಾರ್ಯಕ್ರಮಗಳು ಅತ್ಯಮೂಲ್ಯ. ಆ ನಿಟ್ಟಿನಲ್ಲಿ ಕೊಡವ ಭಾಷೆ, ಸಂಸ್ಕೃತಿ ಬೆಳವಣಿಗೆಗೆ ಶ್ರಮಿಸುತ್ತಿರುವವರನ್ನು ಗೌರವಿಸುತ್ತಿರುವುದು ಶ್ಲಾಘನೀಯ’ ಎಂದರು.

ಪಶ್ಚಿಮಘಟ್ಟ ಅರಣ್ಯ ಸಂರಕ್ಷಣಾ ಸಮಿತಿ ರಾಜ್ಯ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಮಾತನಾಡಿ, ‘ಕೊಡವ ಭಾಷೆ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಮಕ್ಕಳಿಗೆ ತಿಳಿಸಬೇಕು. ಕೊಡಗಿನ ಸಂಸ್ಕೃತಿ ಬಗ್ಗೆ ಮಕ್ಕಳಲ್ಲಿ ಬೆಳಕು ಚೆಲ್ಲುವಂತಾಗಬೇಕು’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್.ರಂಗಪ್ಪ ಮಾತನಾಡಿ, ‘ಕೊಡವ ಭಾಷೆ, ಕಲೆ, ಸಂಸ್ಕೃತಿ, ಸಾಹಿತ್ಯವನ್ನು ಮರೆಯಬಾರದು. ನಾವು ಆಕಾಶದಲ್ಲಿ ಸಂಚಾರ ಮಾಡಿದರೂ, ಭೂಮಿಯ ಬೇರನ್ನು ಮರೆಯಬಾರದು’ ಎಂದರು.

ಹಂಪಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಐಕೋಳಂಡ ಪ್ರಶಾಂತ್ ಭೀಮಯ್ಯ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್.ದೇವಯ್ಯ, ಮಕ್ಕಂದೂರು ಗ್ರಾ.ಪಂ ಅಧ್ಯಕ್ಷ ಕನ್ನಿಕಂಡ ಶ್ಯಾಮ್ ಸುಬ್ಬಯ್ಯ, ಮಕ್ಕಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಕೊಕ್ಕಲೇರ ಸುಜು ತಿಮ್ಮಯ್ಯ, ಗೌರವ ಪ್ರಶಸ್ತಿ ಪುರಸ್ಕೃತರಾದ ಕಸ್ತೂರಿ ಗೋವಿಂದಮಯ್ಯ, ಶೋಭಾ ಸುಬ್ಬಯ್ಯ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ 2019-20, 2020-21 ನೇ ಸಾಲಿನ ಗೌರವ ಮತ್ತು ಪುಸ್ತಕ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ವಾಲ್ಮೀಕಿ ರಾಮಾಯಣ, ಕಾವೇರಿ ಪಳಮೆ, ನೆಮ್ಮದಿರ ಗೂಡ್, ಮನಸ್ಸ್‌ರ ನೊಂಬಲ, ಕಥೆ ಪುತ್ತ್ ಪುಸ್ತಕ ಬಿಡುಗಡೆಗೊಂಡವು. ಅಕಾಡೆಮಿ ಸದಸ್ಯರಾದ ಗೌರಮ್ಮ ಮಾದಮ್ಮಯ್ಯ, ಡಾ.ಸುಭಾಷ್ ನಾಣಯ್ಯ, ಜಾನಕಿ ಮಾಚಯ್ಯ, ಡಾ.ರೇವತಿ ಪೂವಯ್ಯ, ಬಬ್ಬಿರ ಸರಸ್ವತಿ, ಕುಡಿಯರ ಮುತ್ತಪ್ಪ, ಪ್ರಭುಕುಮಾರ್, ಕವನ್ ಕಾರ್ಯಪ್ಪ, ರಿಜಿಸ್ಟ್ರಾರ್ ಗಿರೀಶ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು