ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿಗೆ ಗೆಲುವು

7
ಮಡಿಕೇರಿಯಲ್ಲಿ ಬಿಜೆಪಿ ಮುಖಂಡ ಆರ್‌. ಅಶೋಕ್‌ ಹೇಳಿಕೆ

ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿಗೆ ಗೆಲುವು

Published:
Updated:

ಮಡಿಕೇರಿ: ‘ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಬಿಜೆಪಿ ಅತ್ಯಂತ ಸವಾಲಿನ ರೀತಿಯಲ್ಲಿ ಸ್ವೀಕರಿಸಿದ್ದು ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ನಗರಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬರಲಿದ್ದಾರೆ’ ಎಂದು ಬಿಜೆಪಿ ಮುಖಂಡ ಆರ್‌. ಅಶೋಕ್‌  ಹೇಳಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಹೀಗಾಗಿ ಬಿಜೆಪಿ ಮುಖಂಡರು ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದಾರೆ’ ಎಂದು ಹೇಳಿದರು.

‘ರೈತರ ಸಾಲಮನ್ನಾ ವಿಚಾರದಲ್ಲಿ ರಾಜ್ಯ ಸರ್ಕಾರವು ಎಡಬಿಡಂಗಿ ರೀತಿಯಲ್ಲಿ ವರ್ತಿಸುತ್ತಿದೆ. ಇದುವರೆಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲಮನ್ನಾ ವಿಚಾರದಲ್ಲಿ ಮೀನಮೇಷ ಎಣಿಸಲಾಗುತ್ತಿದೆ. ಅದರ ಬಗ್ಗೆ ಯಾವುದೇ ಆದೇಶ ಹೊರಡಿಸಿಲ್ಲ’ ಎಂದು ದೂರಿದರು.

‘ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ರಾಜ್ಯವೆಂದರೆ ಹಾಸನ ಮಾತ್ರ ಎಂದು ತಿಳಿದುಕೊಂಡಿದ್ದಾರೆ. ಬಜೆಟ್‌ನಲ್ಲೂ ಹಾಸನಕ್ಕೆ ಎಲ್ಲವನ್ನೂ ನೀಡಿದ್ದಾರೆ. ಇಡೀ ರಾಜ್ಯವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಕೊಡಗಿನಲ್ಲೂ ವ್ಯಾಪಕ ಮಳೆಯಾಗುತ್ತಿದೆ. ಇಲ್ಲಿಯೂ ಭೂಕುಸಿತ ಉಂಟಾಗಿ ರಾಷ್ಟ್ರೀಯ ಹೆದ್ದಾರಿಯೇ ಮುಚ್ಚಿ ಹೋಗುವ ಸ್ಥಿತಿ ಉಂಟಾಗಿದೆ. ಆದರೆ, ಸರ್ಕಾರ ಮಾತ್ರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ’ ಎಂದು ದೂರಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಡಗು ಜಿಲ್ಲೆಗೆ ₹100 ಕೋಟಿಯ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡುತ್ತಿದ್ದೆವು. ಆದರೆ, ಈ ಸರ್ಕಾರ ಬಜೆಟ್‌ನಲ್ಲಿ ಯಾವ ಅನುದಾನವನ್ನೂ ಘೋಷಣೆ ಮಾಡಿರಲಿಲ್ಲ ಎಂದರು.

‘ಏರ್ ಶೋ ಸ್ಥಳಾಂತರದ ಬಗ್ಗೆ ಇನ್ನೂ ನನಗೆ ಸ್ಪಷ್ಟ ಮಾಹಿತಿ ಇಲ್ಲ. ಈ ಬಗ್ಗೆ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಬಳಿ ಮಾತನಾಡಲಾಗಿದೆ. ಅವರು ಕೂಡ ನಿರ್ಮಲ ಸೀತಾರಾಂ ಅವರೊಂದಿಗೆ ಮಾತನಾಡಿದ್ದಾರೆ. ಬೆಂಗಳೂರಿನಲ್ಲೇ ಏರ್ ಶೋ ಮಾಡುವಂತಾಗಲು ಅನಂತ್ ಕುಮಾರ್ ಅವರೊಂದಿಗೆ ಇನ್ನೊಮ್ಮೆ ಮಾತನಾಡಲಾಗುವುದು’ ಎಂದು ಹೇಳಿದರು.

‘ಇನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಕೊಡಗು ಉಸ್ತುವಾರಿಯನ್ನು ನನಗೆ ನೀಡಲಾಗಿದ್ದು, ಆ ನಿಟ್ಟಿನಲ್ಲಿ ಜಿಲ್ಲೆಗೆ ಭೇಟಿ ನೀಡಿದ್ದೇನೆ. ಹೊಂದಾಣಿಕೆಯಿಂದ ಆಡಳಿತ ನಡೆಸುವುದಾಗಿ ಅಧಿಕಾರಕ್ಕೆ ಬಂದ ಮೈತ್ರಿ ಸರ್ಕಾರದಲ್ಲಿ ಈಗ ಹೊಂದಾಣಿಕೆಯೇ ಕಂಡುಬರುತ್ತಿಲ್ಲ. ಈ ಹಿನ್ನೆಲೆ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ’ ಎಂದರು.

ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಬಿ.ಬಿ. ಭಾರತೀಶ್ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !