ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶವನ್ನು ಸಾಲದ ಸುಳಿಗೆ ನೂಕಿದ ಕೇಂದ್ರ ಸರ್ಕಾರ: ವಿ.ಎಸ್‌. ಉಗ್ರಪ್ಪ

Published 22 ಏಪ್ರಿಲ್ 2024, 14:11 IST
Last Updated 22 ಏಪ್ರಿಲ್ 2024, 14:11 IST
ಅಕ್ಷರ ಗಾತ್ರ

ಸೋಮವಾರಪೇಟೆ: ಎರಡನೇ ಸ್ವಾತಂತ್ರ್ಯ ಸಂಗ್ರಾಮದಂತೆ ಲೋಕಸಭೆಗೆ ಚುನಾವಣೆ ನಡೆಯುತ್ತಿದ್ದು, ‘ಇಂಡಿಯಾ’ದ ಸತ್ಯ ಮತ್ತು ಎನ್‌ಡಿಎ ಕೂಟದ ಸುಳ್ಳು ಭರವಸೆಗಳ ನಡುವೆ ಚುನಾವಣೆ ನಡೆಯುತ್ತಿದ್ದು, ಮತದಾರರು ಇಂಡಿಯಾ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ದೇಶದ ಸಂವಿಧಾನವನ್ನು ಉಳಿಸಬೇಕೆಂದು ಕಾಂಗ್ರೆಸ್ ಮುಖಂಡ ವಿ.ಎಸ್‌. ಉಗ್ರಪ್ಪ ಹೇಳಿದರು.

ಜೇಸಿ ವೇದಿಕೆಯಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ಕಾಂಗ್ರೆಸ್ ಪಕ್ಷ ಸೋಮವಾರ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಪರವಾಗಿ ಮತ ಯಾಚಿಸಿದರು. ದೇಶದಲ್ಲಿ ಸರ್ವಾಧಿಕಾರದ ಆಡಳಿತ ನಡೆಯುತ್ತಿದೆ. ಅದನ್ನು ಕಿತ್ತೊಗೆಯವ ಕೆಲಸ ಮತದಾರರು ಚುನಾವಣೆಯಲ್ಲಿ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷಗಳ ಕಾಲ ಬಡವರ, ಕಾರ್ಮಿಕರ, ರೈತರ, ಅಲ್ಪಸಂಖ್ಯಾತರ ವಿರೋಧಿಯಾಗಿ ಆಡಳಿತ ಮಾಡಿದೆ. ವಿದೇಶದಿಂದ ಮಿತಿ ಮೀರಿ ಸಾಲವನ್ನು ತರುವ ಮೂಲಕ, ಇಡೀ ದೇಶವನ್ನು ಸಾಲದ ಸುಳಿಯಲ್ಲಿ ಸಿಲುಕುವಂತೆ ಮಾಡಿದ್ದಾರೆ. ಹಿಂದಿನ ಕೇಂದ್ರ ಸರ್ಕಾರ ಕಟ್ಟಿ ಬೆಳೆಸಿದ್ದ ಸರ್ಕಾರಿ ಸ್ವಾಯುತ್ತ ಸಂಸ್ಥೆಗಳನ್ನು ಬೃಹತ್ ಉದ್ದಿಮೆದಾರರಿಗೆ ಮಾರಾಟ ಮಾಡಿದ್ದಾರೆ. ಮತ್ತೊಮ್ಮೆ ದೇಶದ ಪ್ರಧಾನಿಯಾಗಿ ಮುಂದುವರೆದಲ್ಲಿ ಅವರು ದೇಶದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಾರೆಂದು ದೂರಿದರು.

ತನಿಖಾ ಸಂಸ್ಥೆಗಳಾದ ಸಿಬಿಐ, ಇಡಿ, ಐಟಿಯನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಪ್ರಬಲ ನಾಯಕರುಗಳ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ನೀಡಿದ 600 ಭರವಸೆಗಳಲ್ಲಿ 6 ಅನ್ನು ಸಹ ಈಡೇರಿಸಿಲ್ಲ. ಆದರೆ, ಹಿಂದಿನ ಕರ್ನಾಟಕ ಸರ್ಕಾರ 160 ಭರವಸೆಗಳಲ್ಲಿ 165 ಭರವಸೆಗಳನ್ನು ಈಡೇರಿಸಿತ್ತು. ಕಳೆದ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ 5 ಗ್ಯಾರಂಟಿಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಯುವನಿಧಿ, ಅನ್ನಭಾಗ್ಯ ರಾಜ್ಯದ ಜನರಿಗೆ ತಲುಪಿವೆ. ಜನರು ನೆಮ್ಮದಿಯಾಗಿದ್ದಾರೆ ಇವೆಲ್ಲಾ ಕಾರಣಗಳಿಂದ ಮತದಾರರ ಆಶೀರ್ವಾದ ಕಾಂಗ್ರೆಸ್‌ಗೆ ಇದೆ ಎಂದರು.

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರೋಧಿ ಅಲೆ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಬೆಲೆ ನಿಯಂತ್ರಣ ಮಾಡುತ್ತೇವೆಂದು ನೀಡಿದ ಭರವಸೆ ವಿರುದ್ಧವಾಗಿ ದಿನಬಳಕೆಯ ವಸ್ತುಗಳ ಬೆಲೆ ದುಪ್ಪಟ್ಟಾಗಿದೆ. ರೈತರ ಅದಾಯ ದ್ವಿಗುಣ ಮಾಡಲಿಲ್ಲ. ಕೃಷಿ ಬೆಳೆಗೆ ವೈಜ್ಞಾನಿಕ ಬೆಲೆ ಕೊಡಲಿಲ್ಲ. ಯುವಕ- ಯುವತಿಯರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಸುಳ್ಳು ಹೇಳಿ ಕನಿಷ್ಠ 50 ಲಕ್ಷ ಉದ್ಯೋಗ ಸೃಷ್ಟಿ ಮಾಡಲು ವಿಫಲರಾದರು ಎಂದು ಟೀಕಿಸಿದರು.

ಈ ಬಾರಿ ಅಧಿಕಾರ ಕಳೆದುಕೊಳ್ಳುವುದು ಮೋದಿ ಅವರಿಗೆ ಗೊತ್ತಾಗಿದೆ. ಕಾಂಗ್ರೆಸ್‌ಗೆ ಮತ ಹಾಕಿದರೆ ಮಂಗಳಸೂತ್ರ ಕಳೆದುಕೊಂಡಂತೆ ಎಂಬ ಭಾಲಿಶ ಹೇಳಿಕೆಯನ್ನು ನೀಡುವ ಮೂಲಕ ಪ್ರಧಾನಿ ಮಂಗಳಸೂತ್ರಕ್ಕೆ ಅವಮಾನ ಮಾಡಿದ್ದಾರೆ. ಒಬ್ಬ ರಾಜನೀತಿಜ್ಞ ಇಂತಹ ಪದಗಳನ್ನು ಬಳಸುವಂತಹದಲ್ಲ. ಪ್ರಧಾನಿ ಹುದ್ದೆಗೆ ಇಂತಹವರು ಅವಮಾನ ಎಂದು ಹೇಳಿದರು. ಚುನಾವಣಾ ಅಯೋಗ ಇಂತಹ ಹೇಳಿಕೆ ನೀಡಿದ ಪ್ರಧಾನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೊಡಗಿನ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಕಿತ್ತು ಹಾಕಿದ್ದೇವೆ. ಕಷ್ಟದ ಕಾಲದಲ್ಲಿ ಕಾಂಗ್ರೆಸ್ ಕೈಹಿಡಿಯುತ್ತದೆ ಎಂದು ಜನರಿಗೆ ಗೊತ್ತಾಗಿದೆ. ಗ್ಯಾರಂಟಿ ಯೋಜನೆಗಳಿಂದ ಜನರು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಜನಕಲ್ಯಾಣ ಯೋಜನೆಯನ್ನು ಬಿಟ್ಟಿಭಾಗ್ಯ ಎಂದು ಹೀಗಳೆದು, ಮಹಿಳೆಯರನ್ನು ಅವಮಾನ ಮಾಡುತ್ತಿರುವ ಬಿಜೆಪಿಗೆ ಮಹಿಳೆಯರು ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಸಾಧನೆಗಳನ್ನು ಮತದಾರರಿಗೆ ಕಾರ್ಯಕರ್ತರು ಮನವರಿಕೆ ಮಾಡಿಕೊಡಬೇಕು. ರಾಜ್ಯ ಸರ್ಕಾರದ ಗ್ಯಾರಂಟಿಗಳೊಂದಿಗೆ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೆಚ್ಚುವರಿ ಗ್ಯಾರಂಟಿಗಳು ಸಿಗಲಿವೆ. ಮೋದಿ ಸರ್ಕಾರ ದೇಶದ ಜನರಿಗೆ ಯಾವುದೇ ಸೌಲಭ್ಯಗಳನ್ನು ನೀಡದೇ ಅಪಾರ ಪ್ರಮಾದಲ್ಲಿ ಸಾಲ ಮಾಡಿ, ದೇಶವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದೆ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಮೌಳಿ, ಕೆ.ಪಿ.ಚಂದ್ರಕಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಡಿಸಿಸಿ ಉಪಾಧ್ಯಕ್ಷ ಕೆ.ಎಂ. ಲೋಕೇಶ್, ಪಕ್ಷದ ಪ್ರಮುಖರಾದ ಹನೀಪ್, ಕೆ.ಎ. ಯಾಕುಬ್, ಸುರಯ್ಯ ಅಬ್ರಾರ್, ಮಿಥುನ್ ಹಾನಗಲ್, ವಿ.ಪಿ. ಶಶಿಧರ್, ಬಿ.ಇ. ಜಯೇಂದ್ರ, ಶೀಲಾ ಡಿಸೋಜ, ಎಚ್.ಆರ್. ಸುರೇಶ್, ಸಿ.ಪಿ.ಐ ನ ಸೋಮಪ್ಪ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT