ಶುಕ್ರವಾರ, ಆಗಸ್ಟ್ 6, 2021
25 °C
ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿಗೆ ಕಾಂಗ್ರೆಸ್ ಕೊಡಗು ಜಿಲ್ಲಾ ಘಟಕದ ವಿರೋಧ

ಬಂಡವಾಳಶಾಹಿಗಳ ಪರ ಬಿಜೆಪಿ ಆಡಳಿತ: ವೀಣಾ ಅಚ್ಚಯ್ಯ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಬಂಡವಾಳಶಾಹಿಗಳ ಪರವಾದ ಆಡಳಿತ ನಡೆಸುತ್ತಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಕಂದಾಯ ಸಚಿವರು ಕೊಡಗಿನ ಭೂಮಿ ಮೇಲೆ ಕಣ್ಣಿಟ್ಟಿದ್ದಾರೆ. ಸಾಕಷ್ಟು ಜಮೀನು ಪಾಳು ಬಿದ್ದಿವೆ ಎಂದೂ ಹೇಳಿದ್ದಾರೆ. ಜಮೀನು ಪಾಳು ಬೀಳಲು ತನ್ನದೇ ಆದ ಕಾರಣಗಳಿವೆ. ಆದರೆ, ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ನೈಜ ರೈತರಾದವರು ಶ್ರೀಮಂತರು ಹಾಗೂ ಉದ್ಯಮಿಗಳ ಜಮೀನಿಗೆ ಕೂಲಿಗೆ ತೆರಳುವ ಪರಿಸ್ಥಿತಿಯನ್ನು ಸೃಷ್ಟಿ ಮಾಡಿದ್ದಾರೆ ಎಂದು ಹೇಳಿದರು.

ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೆ: ಕೋಟಿ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿರುವ ಕೇಂದ್ರ ಸರ್ಕಾರ, ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡುತ್ತಿದೆ. ಲಾಕ್‍ಡೌನ್ ಸಡಿಲಿಕೆಯಾದ ನಂತರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಒಂದು ಕಡೆ ಪರಿಹಾರ ಕೊಟ್ಟಂತೆ ಮಾಡಿ, ನಿತ್ಯ ಬಳಕೆಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿ ಜನಸಾಮಾನ್ಯರಿಂದ ಮರಳಿ ಕಸಿದುಕೊಳ್ಳುತ್ತಿದೆ ಎಂದರು.

ಸರ್ಕಾರದ ನಿರ್ಲಕ್ಷ್ಯ: ಹುಲಿ, ಚಿರತೆ, ಕಾಡಾನೆ ಸೇರಿದಂತೆ ವನ್ಯಜೀವಿಗಳು ವಿರಾಜಪೇಟೆ ತಾಲ್ಲೂಕಿನಲ್ಲಿ ಉಪಟಳ ನೀಡುತ್ತಿದ್ದು, ಸಾಕಷ್ಟು ಫಸಲು, ಜಮೀನು ಮತ್ತು ಜೀವಹಾನಿಯಾಗಿದೆ. ಆದರೆ, ಇಲ್ಲಿಯವರೆಗೆ ರಾಜ್ಯ ಸರ್ಕಾರ ವನ್ಯಜೀವಿ ದಾಳಿಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದರು ಇಲ್ಲಿಯವರೆಗೆ ರೈತರು, ಬೆಳೆಗಾರರು ಹಾಗೂ ಕಾರ್ಮಿಕರ ಕಷ್ಟ–ನಷ್ಟಗಳಿಗೆ ಸ್ಪಂದಿಸಿಲ್ಲ. ವನ್ಯಜೀವಿ ದಾಳಿ ಕುರಿತು ಇಲ್ಲಿಯವರೆಗೆ ಅರಣ್ಯ ಅಧಿಕಾರಿಗಳ ಮತ್ತು ಗ್ರಾಮಸ್ಥರ ಸಭೆ ನಡೆಸಿಲ್ಲ ಎಂದು ದೂರಿದರು.

ಸೇತುವೆ ಕಾಮಗಾರಿ ನನೆಗುದಿಗೆ: ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಭಾಗಮಂಡಲದಲ್ಲಿ ಮೇಲ್ಸೆತುವೆ ಯೋಜನೆಯನ್ನು ಆರಂಭಿಸಲಾಯಿತು. ಸೇತುವೆ ನಿರ್ಮಾಣದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು ಇದನ್ನು ಪೂರ್ಣಗೊಳಿಸುವ ಕಾಳಜಿಯನ್ನು ಆಡಳಿತ ನಡೆಸುತ್ತಿರುವವರು ತೋರುತ್ತಿಲ್ಲ ಎಂದು ದೂರಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ, ರೈತರ ಬಾಯಿಗೆ ಮಣ್ಣು ಹಾಕುವ ಮತ್ತು ರೈತರ ಹಕ್ಕನ್ನು ಕಸಿದುಕೊಳ್ಳುವ ಕಾಯ್ದೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದ ಆಹಾರ ಕ್ಷೇತ್ರಕ್ಕೆ ಧಕ್ಕೆಯಾಗಲಿದೆ ಎಂದು ನೋವು ತೋಡಿಕೊಂಡರು.

26ಕ್ಕೆ ಡಿ.ಸಿ ಕಚೇರಿ ಎದುರು ಪ್ರತಿಭಟನೆ: ನೈಜ ರೈತರು ಕೃಷಿ ಭೂಮಿ ಕಳೆದುಕೊಳ್ಳಲಿದ್ದಾರೆ. ರೈತರನ್ನು ದುರ್ಬಲರನ್ನಾಗಿ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ನೈಜ ರೈತನ ಕೃಷಿ ಜಮೀನು ಭ್ರಷ್ಟರ ಪಾಲಾಗಲಿದೆ. ಕಾಂಗ್ರೆಸ್ ಕಿಸಾನ್ ಘಟಕದ ವತಿಯಿಂದ ಜೂನ್‌ 26ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಭೂಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಲಾಗುವುದು ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪಿ.ಕೆ.ಪೊನ್ನಪ್ಪ, ಕಾಂಗ್ರೆಸ್ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಅಜ್ಜಳ್ಳಿ ರವಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ತೆನ್ನೀರ ಮೈನಾ, ಮುಖಂಡ ವಸಂತ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.