ಗುರುವಾರ , ಮೇ 19, 2022
22 °C
ನಾಪೋಕ್ಲುವಿನ ಅರೆಯಡ ಸತೀಶ್ ಸುಬ್ಬಯ್ಯ ಕೋವಿಡ್‌ನಿಂದ ಸಾವು, ಕುಟುಂಬಕ್ಕೆ ಸಂಕಷ್ಟ

ಪ್ರಯಾಣಿಕರ ಪ್ರೀತಿಯ ‘ಆಟೊ ಸತಿ’

ಸಿ.ಎಸ್‌.ಸುರೇಶ್‌ Updated:

ಅಕ್ಷರ ಗಾತ್ರ : | |

Prajavani

ನಾಪೋಕ್ಲು: ‘ನಾನು ನಾಲ್ಕು ವರ್ಷದವಳಿದ್ದಾಗ ನಾಪೋಕ್ಲಿಗೆ ಬಂದೆ. ನನ್ನ ತಂದೆ 25 ವರ್ಷಗಳಿಂದ ನಾಪೋಕ್ಲುವಿನಲ್ಲಿ ಆಟೊ ಓಡಿಸುತ್ತಿದ್ದರು. ಕೊರೊನಾ ನನ್ನ ತಂದೆಯ ಬದುಕನ್ನು ಕಸಿದುಕೊಂಡಿತು. ಕನಿಷ್ಠ ಪಕ್ಷ ನನ್ನ ಅಮ್ಮನನ್ನಾದರೂ ಉಳಿಸಿಕೊಡಿ’ ಎಂದು ನಾಪೋಕ್ಲುವಿನ ಸೀಮಾ ಗದ್ಗದಿತರಾಗಿ ಹೇಳುವಾಗ ಎಲ್ಲರ ಕಣ್ಣಂಚಿನಲ್ಲಿ ನೀರು ಒಸರುತ್ತದೆ.

ಈ ವರ್ಷದ ಕೊರೊನಾ ಸೋಂಕಿನಿಂದ ಜೀವ ಕಳೆದುಕೊಂಡವರಲ್ಲಿ ನಾಪೋಕ್ಲುವಿನ ಅರೆಯಡ ಸತೀಶ್ ಸುಬ್ಬಯ್ಯ ಕೂಡ ಒಬ್ಬರು.

‘ಆಟೊ ಸತಿ’ ಎಂದು ಜನಾನುರಾಗಿಯಾಗಿ ಪರಿಚಿತರಾಗಿದ್ದವರು. ಇಲ್ಲಿನ ಆಟೊ ಚಾಲಕ ಸತೀಶ್ ಸುಬ್ಬಯ್ಯ ಮೊದಲು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಜೀವನ ನಿರ್ವಹಣೆಗೆ ನಾಪೋಕ್ಲುವಿಗೆ ಬಂದು, ಆಟೊ ಓಡಿಸಲು ಆರಂಭಿಸಿದರು. ಹತ್ತಿರದಲ್ಲಿ ಖಾಸಗಿ ಶಾಲೆ ಇದ್ದುದರಿಂದ ಮಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದು ಬಾಡಿಗೆ ಮನೆಯಲ್ಲಿ ವಾಸವಾಗಿ ಜೀವನ ಸಾಗಿಸುತ್ತಿದ್ದರು.

ನಾಪೋಕ್ಲುವಿನಲ್ಲಿ 200ಕ್ಕೂ ಅಧಿಕ ಆಟೊಗಳಿವೆ. ಆದರೆ, ಪಟ್ಟಣದಲ್ಲಿ ಬೆಳ್ಳಂಬೆಳಿಗ್ಗೆ ಬಾಡಿಗೆಗೆ ಸಿಗುತ್ತಿದ್ದ ಆಟೊ ಎಂದರೆ ಸತೀಶ್ ಅವರದ್ದೇ. ನಸುಕಿನಲ್ಲಿ ಚಾಲಕ ಸತೀಶ್ ಅವರು ಬೆಳಗಿನ ಜಾವ ಬೆಂಗಳೂರಿನಿಂದ ರಾತ್ರಿ ಹೊರಟು ನಸುಕಿನ ಜಾವ ನಾಪೋಕ್ಲು ತಲುಪುತ್ತಿದ್ದ ಗ್ರಾಮೀಣ ಪ್ರದೇಶದ ಮಂದಿಯನ್ನು ಆತ್ಮೀಯವಾಗಿ ಸ್ವಾಗತಿಸಿ, ಮನೆಗಳಿಗೆ ತಲುಪಿಸುತ್ತಿದ್ದರು.

‘ಅಪ್ಪ ಬೆಳಿಗ್ಗೆ 4 ಗಂಟೆಗೆ ಮನೆಯಿಂದ ಹೊರಟರೆ ಮತ್ತೆ ಸಂಜೆ 6.30ಕ್ಕೆ ಮನೆಗೆ ಮರಳುತ್ತಿದ್ದರು. ಅಲ್ಲಿಯವರೆಗೆ ದೂರದ ಊರಿನಿಂದ ಬಂದವರನ್ನು ಮನೆಗೆ ತಲುಪಿಸುವ ಜವಾಬ್ದಾರಿ ಇವರದ್ದು. ಯಾವ ಗ್ರಾಹಕರ ದೂರವಾಣಿ ಕರೆ ಬಂದರೂ ನಿದ್ದೆ, ಊಟ ಬಿಟ್ಟು ಧಾವಿಸುತ್ತಿದ್ದರು. ಎಲ್ಲರನ್ನೂ ಜವಾಬ್ದಾರಿಯುತವಾಗಿ ಮನೆಗೆ ತಲುಪಿಸುವ ಕೆಲಸ ನಿರ್ವಹಿಸುತ್ತಿದ್ದರು. ಬೆಳಗಿನ ಕಾಫಿ ತಿಂಡಿ ಊಟ ಕೂಡ ಇಲ್ಲದೇ ಗ್ರಾಹಕರ ಸೇವೆಗೆ ಮುಂದಾಗುತ್ತಿದ್ದರು. ಇಂತಹ ಅಪ್ಪ ಇಲ್ಲ ಎಂದರೆ ನಂಬಲಾಗುತ್ತಿಲ್ಲ’ ಎಂದು ಸೀಮಾ ದುಃಖಿಸುತ್ತಾರೆ.

ಅಪ್ಪನ ಮರಣಾನಂತರ ಅಮ್ಮ ಸುಶೀಲಾ ಅವರಿಗೂ ಕೊರೊನಾ ಸೋಂಕು ತಗಲಿದ್ದು, ಮಡಿಕೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನನಗೂ ಕೂಡ ಪಾಸಿಟಿವ್ ಆಗಿತ್ತು. ಒಂದು ವಾರದ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದೇನೆ. ನನಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಜೀವನ ನಿರ್ವಹಣೆಯ ಜವಾಬ್ದಾರಿ ನನ್ನ ಮೇಲಿದೆ. ಇದೀಗ ನಾಪೋಕ್ಲುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ಸಮೀಪದ ಹಳೇ ತಾಲ್ಲೂಕಿನಲ್ಲಿ ಹಿರಿಯರ ಐನ್‌ಮನೆ ಇದೆ. ಗಂಡ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅಮ್ಮನ ಪರಿಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆ ಫಲಕಾರಿಯಾಗಿ ಶೀಘ್ರ ಗುಣಮುಖವಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೇನೆ’ ಎಂದು ಸೀಮಾ ವ್ಯಥೆಪಟ್ಟರು.

ಆ ದಿನ ‘ಆಟೊ ಸತಿ’ ಇನ್ನಿಲ್ಲ ಎಂಬ ಸುದ್ದಿ ಕೇಳಿ ನಾಪೋಕ್ಲುವಿನ ಜನತೆಗೆ ಗರ ಬಡಿದಂತಾಗಿತ್ತು. ಆಟೊ ಚಾಲಕರು ಕಣ್ಣೀರುಗರೆದಿದ್ದರು. ಎಲ್ಲರೊಂದಿಗೆ ಹೊಂದಿಕೊಂಡು ಸಹಬಾಳ್ವೆ ನಡೆಸುತ್ತಿದ್ದ ‘ಆಟೊ ಸತಿ’ ನಿಧನದಿಂದ ಕುಟುಂಬ ಸಂಕಷ್ಟದಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು