ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ದಾಂಗುಡಿ ಇಟ್ಟ ಡೆಂಗಿ, ಬೇಕಿದೆ ಇನ್ನಷ್ಟು ಮುನ್ನೆಚ್ಚರಿಕೆ

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಿದ ಕಾಯಿಲೆಗಳು, ಎಚ್ಚೆತ್ತುಕೊಳ್ಳದ ಸ್ಥಳೀಯ ಆಡಳಿತಗಳು
Published 3 ಜೂನ್ 2024, 7:24 IST
Last Updated 3 ಜೂನ್ 2024, 7:24 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮೇ ತಿಂಗಳಿನಲ್ಲಿ ಸುರಿದ ಮಳೆಯು ಎಲ್ಲರಿಗೂ ಸಂತಸ ತಂದಿದೆ. ಇದರೊಂದಿಗೆ ಸಾರ್ವಜನಿಕರು ಹಾಗೂ ಅಧಿಕಾರಿ ವೃಂದದವರ ನಿರ್ಲಕ್ಷ್ಯದಿಂದ ಸಾಂಕ್ರಮಿಕ ರೋಗಗಳನ್ನೂ ಹೊತ್ತು ತರುವ ಭೀತಿ ಮೂಡಿಸಿದೆ. ಈಗಾಗಲೇ ಜಿಲ್ಲೆಯಲ್ಲಿ ಡೆಂಗಿ ದಾಂಗುಡಿ ಇಡುತ್ತಿದ್ದು, ಕಳೆದ ವರ್ಷ ಈ ವೇಳೆಯಲ್ಲಿದ್ದ ಪ್ರಕರಣಗಳಿಗೆ ಹೋಲಿಸಿದರೆ ಈ ವರ್ಷ ದುಪ್ಪಟ್ಟಾಗಿದೆ. ಇದರೊಂದಿಗೆ ಇತರೆ ಸಾಂಕ್ರಮಿಕ ರೋಗಗಳೂ ಹೆಚ್ಚುತ್ತಿವೆ.

ಕಳೆದ ವರ್ಷ ಜನವರಿಯಿಂದ ಮೇ 22ರವರೆಗೆ ಕೇವಲ 29 ಡೆಂಗಿ ಪ್ರಕರಣಗಳಷ್ಟೇ ಇತ್ತು. ಆದರೆ, ಈ ವರ್ಷ 58 ಮಂದಿಯಲ್ಲಿ ಡೆಂಗಿ ಪತ್ತೆಯಾಗಿದೆ. ಮೇ ತಿಂಗಳಿನಲ್ಲಿ ಮಳೆ ಆರಂಭವಾದ ನಂತರ ಒಟ್ಟು 23 ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 1,486 ಮಂದಿಯಲ್ಲಿ ಭೇದಿ (ಡಯೇರಿಯಾ), ತಲಾ ಇಬ್ಬರಲ್ಲಿ ಕಾಲರಾ, ಮಲೇರಿಯಾ ರೋಗಗಳೂ ಕಂಡು ಬಂದಿವೆ.

ಮುಂಗಾರು ಮಳೆಯ ಹೊಸ್ತಿಲಲ್ಲಿ ಬಿಟ್ಟು ಬಿಟ್ಟು ಸುರಿದ ಮಳೆಯಿಂದ ನೀರು ನಿಂತು ಅವುಗಳು ಸೊಳ್ಳೆಗಳ ಆವಾಸ ಸ್ಥಾನವಾಗಿ ಬದಲಾಯಿತು. ಇದರಿಂದ ಸುಲಭವಾಗಿ ಡೆಂಗಿ ವೈರಾಣುವನ್ನು ಸಾಗಿಸುವ ಸೊಳ್ಳೆಗಳು ಸಮೃದ್ಧವಾಗಿ ಬೆಳೆದವು. ಇದರಿಂದ ಎಲ್ಲೆಡೆ ಡೆಂಗಿ ಹರಡಲಾರಂಭಿಸಿವೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಜಾಗೃತಿ ಕಾರ್ಯಕ್ರಮಗಳ ಮೂಲಕ, ಆಶಾ ಕಾರ್ಯಕರ್ತೆಯರು ಲಾರ್ವ ಸರ್ವೆ ಮೂಲಕ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿದ್ದರೂ, ಅದು ಸಾಕಾಗುತ್ತಿಲ್ಲ. ಇದಕ್ಕೆ ಜೊತೆಯಾಗಿ ಸ್ಥಳೀಯ ಸಂಸ್ಥೆಗಳು ನೈರ್ಮಲ್ಯ ಕುರಿತು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಕೈಗೊಳ್ಳದೇ ಇರುವುದು ಹಾಗೂ ಸಾರ್ವಜನಿಕರ ನಿರ್ಲಕ್ಷ್ಯ ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಬಹುಮುಖ್ಯ ಕಾರಣ ಎನಿಸಿದೆ.

ಸ್ವಚ್ಛತೆ, ಅನೈ‌ರ್ಮಲ್ಯ ಮಡಿಕೇರಿ ಸೇರಿದಂತೆ ಜಿಲ್ಲೆಯ ಎಲ್ಲೆಡೆ ತಾಂಡವವಾಡುತ್ತಿದೆ. ಜೊತೆಗೆ, ಬೀದಿ ಬದಿ ವ್ಯಾಪಾರಿಗಳು ಯಾವುದೇ ನಿಯಂತ್ರಣ ಇಲ್ಲದೇ ಸಂಪೂರ್ಣ ತೆರೆದಿಟ್ಟ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ನೀಡುವುದರ ಬಗ್ಗೆಯೂ ಸ್ಥಳೀಯ ಆಡಳಿತ ಹೆಚ್ಚಿನ ನಿಯಂತ್ರಣ ಹೇರಿಲ್ಲ. ಹೀಗಾಗಿ, ಎಲ್ಲೆಡೆ ಕಾಯಿಲೆ ಭೀತಿ ತಲೆದೋರಿದೆ.

ಸೋಮವಾರಪೇಟೆಯಲ್ಲಿ ಕ್ರಮ ಇಲ್ಲ: ಜಿಲ್ಲೆಯಲ್ಲಿ ಹಲವು ವೈರಸ್ ಜ್ವರ ಹೆಚ್ಚಾಗುತ್ತಿದ್ದರೂ, ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಾಗಲಿ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಾಗಲಿ ಸೂಕ್ತ ಕ್ರಮ ತೆಗೆದುಕೊಳ್ಳಲು ಮುಂದಾಗಿಲ್ಲ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಖಾಲಿ ಜಾಗಗಳಲ್ಲಿ ತ್ಯಾಜ್ಯದ ರಾಶಿ ಕಾಣಬಹುದು. ಇದರಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ಸೇರಿದಂತೆ ನೀರು ಸಂಗ್ರಹವಾಗುವ ಹಲವು ವಸ್ತುಗಳು ಬಿದ್ದಿವೆ. ಮಳೆಯಾಗುತ್ತಿರುವುದರಿಂದ ಅದರಲ್ಲಿ ನೀರು ಸಂಗ್ರಹವಾಗುತ್ತಿದೆ. ಕೆಲವೆಡೆ ಚರಂಡಿಗಳಲ್ಲಿ ತ್ಯಾಜ್ಯ ಸಂಗ್ರಹದಿಂದಾಗಿ ವೈರಸ್ ಉತ್ಪಾದನೆಗೆ ದಾರಿಯಾಗಿದೆ.

ಪಂಚಾಯಿತಿಯವರು ಮನೆ ಮನೆಗಳಲ್ಲಿ ತ್ಯಾಜ್ಯ ಸಂಗ್ರಹ ಮಾಡಿದಲ್ಲಿ ಈ ಸಮಸ್ಯೆ ಬರುತ್ತಿರಲಿಲ್ಲ. ವಾಹನಗಳು ತ್ಯಾಜ್ಯ ಸಂಗ್ರಹಕ್ಕೆ ಬಾರದ ಕಾರಣ, ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದು ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿಯೂ, ಕಟ್ಟಡದ ಸುತ್ತ ಸ್ವಚ್ಛವಾಗಿ ಇಟ್ಟುಕೊಳ್ಳಲು ಮುಂದಾಗುತ್ತಿಲ್ಲ. ಕೇವಲ ಎದುರುಗಡೆ ಮಾತ್ರ ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದು, ಒಳ ಹೋಗಿ ನೋಡಿದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಹಾಗೂ ಗಿಡಗಂಟಿಗಳು ಕಂಡುಬರುತ್ತಿದೆ. ಕಾಯಿಲೆಗಳು ಹೆಚ್ಚಾಗುವ ಮುನ್ನ ಸಂಬಂಧಿಸಿದ ಇಲಾಖೆಗಳು ಹಾಗೂ ಜನರು ಎಚ್ಚೆತ್ತುಕೊಳ್ಳಬೇಕಾಗಿದೆ.

ಕುಶಾಲನಗರ ತಾಲ್ಲೂಕು ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮ: ಕುಶಾಲನಗರ ತಾಲ್ಲೂಕಿನಲ್ಲಿ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ.

ನಿಂತ ನೀರಿನ ಎಲ್ಲ ತಾಣಗಳು ಸೊಳ್ಳೆ ಉತ್ಪತ್ತಿಯ ಕೇಂದ್ರವಾಗಿರುತ್ತವೆ. ಸೊಳ್ಳೆಗಳ ನಿಯಂತ್ರಣಕ್ಕಾಗಿ ನಮ್ಮ ಸುತ್ತಮುತ್ತಲಿನ ಪರಿಸರ, ಮನೆಯ ಅಕ್ಕ-ಪಕ್ಕದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಬೇಕು. ಇಂತಹ ಮುಂಜಾಗ್ರತಾ ಕ್ರಮಗಳಿಂದ ಮಾತ್ರ ಸಾಂಕ್ರಾಮಿಕ ರೋಗಗಳಿಂದ ದೂರ ಉಳಿಯಲು ಸಾಧ್ಯ ಎಂಬುದನ್ನು ಕುರಿತು ಸಾರ್ವಜನಿಕರಲ್ಲಿ ಜಾಗೃತಿ, ಅರಿವು ಮೂಡಿಸಲಾಗುತ್ತಿದೆ.

ಮಳೆಗಾಲ ಶುರುವಾಗಿದೆ. ವಾತಾವರಣ ಬದಲಾವಣೆಯಿಂದ ಮತ್ತು ಸೊಳ್ಳೆ ಕಡಿತದಿಂದ ಸಾಂಕ್ರಾಮಿಕ ರೋಗಗಳು ಬಾಧಿಸುವ ಸಾಧ್ಯತೆ ಹೆಚ್ಚು. ಮಕ್ಕಳು, ವೃದ್ಧರನ್ನು ಈ ರೋಗಗಳು ಹೆಚ್ಚಾಗಿ ಕಾಡುತ್ತವೆ.

ಪ್ರತಿ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿ ಮೂಲಕ ಲಾರ್ವಾ (ಸೊಳ್ಳೆ ಮರಿಗಳು) ಸರ್ವೆ ನಡೆಯುತ್ತದೆ. ಕಂಡುಬಂದಲ್ಲಿ ಆ ನೀರನ್ನು ಚೆಲ್ಲಲು ತಿಳಿಸಲಾಗುತ್ತಿದೆ. ಮಲೇರಿಯಾ, ಡೆಂಗಿ ಸೇರಿ ಯಾವುದೇ ಸಾಂಕ್ರಾಮಿಕ ರೋಗ ಕಂಡುಬಂದರೂ ರೋಗಿ ವಾಸವಿರುವ ಪ್ರದೇಶದಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ರಕ್ತದ ಮಾದರಿಗಳನ್ನು ಪರೀಕ್ಷೆ ಮಾಡಿ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.

ಮುನ್ನೆಚ್ಚರಿಕೆ ಕ್ರಮವಾಗಿ ಮಳೆಗಾಲದಲ್ಲಿ ಉಲ್ಬಣವಾಗುವ ಮಲೇರಿಯಾ, ಕಾಲರಾ, ಡೆಂಗಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಪಂಚಾಯಿತಿಗಳು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿವೆ. ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಪ್ರಾಥಮಿಕ ಸೇರಿದಂತೆ ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಗ್ಲುಕೋಸ್‌ ಚುಚ್ಚುಮದ್ದು, ಓಆರ್‌ಎಸ್‌ ಮತ್ತು ಮಾತ್ರೆಗಳ ದಾಸ್ತಾನು ಇಡಲಾಗಿದೆ.

ನಿರ್ವಹಣೆ: ಕೆ.ಎಸ್.ಗಿರೀಶ

ಮಾಹಿತಿ: ಡಿ.ಪಿ.ಲೋಕೇಶ್, ರಘು ಹೆಬ್ಬಾಲೆ, ಎಂ.ಎನ್.ಹೇಮಂತ್, ಜೆ.ಸೋಮಣ್ಣ

ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯ ಒಂದು ಬದಿಯಲ್ಲಿ ಮರ ಕಡಿದಿದ್ದು ಅಲ್ಲಿಯೇ ಕೊಳೆಯುತ್ತಿರುವುದು
ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯ ಒಂದು ಬದಿಯಲ್ಲಿ ಮರ ಕಡಿದಿದ್ದು ಅಲ್ಲಿಯೇ ಕೊಳೆಯುತ್ತಿರುವುದು
ಮಡಿಕೇರಿಯ ಟಿ.ಜಾನ್ ಬಡಾವಣೆಯ ಕೊನೆ ಭಾಗದಲ್ಲಿ ಚರಂಡಿಯಲ್ಲಿ ಗಿಡಗಂಟಿಗಳು ಹೆಚ್ಚಾಗಿ ಬೆಳೆದುಕೊಂಡಿದ್ದು ನೀರು ಹರಿಯುವಿಕೆಗೆ ಅಡ್ಡಿಯಾಗಿದೆ. ಇದರಿಂದ ಸುತ್ತಮುತ್ತಲ ನಿವಾಸಿಗಳಿಗೆ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಸಾಂಕ್ರಮಿಕ ರೋಗಗಳ ಭೀತಿ ಆವರಿಸಿದೆ
ಮಡಿಕೇರಿಯ ಟಿ.ಜಾನ್ ಬಡಾವಣೆಯ ಕೊನೆ ಭಾಗದಲ್ಲಿ ಚರಂಡಿಯಲ್ಲಿ ಗಿಡಗಂಟಿಗಳು ಹೆಚ್ಚಾಗಿ ಬೆಳೆದುಕೊಂಡಿದ್ದು ನೀರು ಹರಿಯುವಿಕೆಗೆ ಅಡ್ಡಿಯಾಗಿದೆ. ಇದರಿಂದ ಸುತ್ತಮುತ್ತಲ ನಿವಾಸಿಗಳಿಗೆ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಸಾಂಕ್ರಮಿಕ ರೋಗಗಳ ಭೀತಿ ಆವರಿಸಿದೆ
ಕುಶಾಲನಗರದ ಕಾರು ಚಾಲಕರ ಮತ್ತು ಮಾಲೀಕರ ಬಡಾವಣೆಯಲ್ಲಿ ಮಳೆ ಬಂದಾಗ ನುಗ್ಗಿದ ನೀರು
ಕುಶಾಲನಗರದ ಕಾರು ಚಾಲಕರ ಮತ್ತು ಮಾಲೀಕರ ಬಡಾವಣೆಯಲ್ಲಿ ಮಳೆ ಬಂದಾಗ ನುಗ್ಗಿದ ನೀರು
ಸಿದ್ದಾಪುರದ ಮಾರುಕಟ್ಟೆಯಲ್ಲಿ ಈಚೆಗೆ ಕಸದ ರಾಶಿ ಹಲವು ದಿನಗಳ ಕಾಲ ಬಿದ್ದಿತ್ತು
ಸಿದ್ದಾಪುರದ ಮಾರುಕಟ್ಟೆಯಲ್ಲಿ ಈಚೆಗೆ ಕಸದ ರಾಶಿ ಹಲವು ದಿನಗಳ ಕಾಲ ಬಿದ್ದಿತ್ತು
ಸುಮಾ ಸೋಮವಾರಪೇಟೆ ಪಟ್ಟಣದ ನಿವಾಸಿ
ಸುಮಾ ಸೋಮವಾರಪೇಟೆ ಪಟ್ಟಣದ ನಿವಾಸಿ
ಕಿರಣ್
ಕಿರಣ್
ಬಾಂಬೆ ಮೋಯ್ದು
ಬಾಂಬೆ ಮೋಯ್ದು
ವಿಶ್ವನಾಥ್
ವಿಶ್ವನಾಥ್

ಕಾಯಿಲೆ ಉಲ್ಬಣವಾಗುವ ಮುಂಚೆ ವಹಿಸಬೇಕಿದೆ ಮುಂಜಾಗ್ರತೆ ಸೊಳ್ಳೆ, ನೊಣಗಳ ನಿಯಂತ್ರಣಕ್ಕೆ ತೊಡಬೇಕಿದೆ ಪಣ ಎಲ್ಲ ಇಲಾಖೆಗಳೂ ಸಹಭಾಗಿತ್ವದಿಂದ ಕೆಲಸ ಮಾಡಬೇಕಿದೆ

ಮನೆ ಬಾಗಿಲಿಗೆ ಬಂದು ತ್ಯಾಜ್ಯ ಸಂಗ್ರಹಿಸಿ ಮನೆಗಳ ಬಳಿಗೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಿಂದ ತ್ಯಾಜ್ಯ ಸಂಗ್ರಹಿಸಲು ಬರುತ್ತಿಲ್ಲ. ವಾರಕ್ಕೆ ಕನಿಷ್ಠ 3 ದಿನಗಳಾದರೂ ಬಂದು ತ್ಯಾಜ್ಯ ಸಂಗ್ರಹಿಸಿದರೆ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಪ್ಪಿಸಬಹುದು. ಹೆಚ್ಚಿನವರು ಬಾಡಿಗೆ ಮನೆಯಲ್ಲಿರುವುದರಿಂದ ನಮ್ಮ ಮನೆಯ ಸುತ್ತ ಮುತ್ತ ಜಾಗ ಇಲ್ಲದಿರುವುದರಿಂದ ಅನಿವಾರ್ಯವಾಗಿ ಕಸವನ್ನು ಹೊರಗೆ ಎಸೆಯಬೇಕಾಗುತ್ತದೆ. ಆದುದ್ದರಿಂದ ಪಟ್ಟಣ ಪಂಚಾಯಿತಿ ದಿನ ನಿಗದಿಗೊಳಿಸಿ ಮನೆ ಬಾಗಿಲಿಗೆ ಬಂದು ತ್ಯಾಜ್ಯ ಸಂಗ್ರಹಿಸಬೇಕಾಗಿದೆ. ಸುಮಾ ಪಟ್ಟಣದ ನಿವಾಸಿ ಸೋಮವಾರಪೇಟೆ. ಚರಂಡಿ ನೀರು ನಿಲ್ಲದಂತೆ ಕ್ರಮ ವಹಿಸಲಿ ಅವಳಿ ಗ್ರಾಮ ಪಂಚಾಯಿತಿಯಂತಿರುವ ಅರುವತ್ತೊಕ್ಕಲು ಮತ್ತು ಗೋಣಿಕೊಪ್ಪಲುಗಳಲ್ಲಿ ಶುಚಿತ್ವ ಮರೀಚಿಕೆಯಾಗಿದೆ. ಮಳೆಗಾಲದಲ್ಲಿ ರಸ್ತೆ ಬದಿಯ ಚರಂಡಿಗಳಲ್ಲಿ ನೀರು ನಿಂತು ಸೊಳ್ಳೆ ಮತ್ತಿತರ ಕ್ರಿಮಿಕೀಟಗಳ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರುಡುವ ಭೀತಿ ಎದುರಾಗಿದೆ. ಗ್ರಾಮ ಪಂಚಾಯಿತಿ ಮನೆ ಮುಂದಿನ ಮತ್ತು ಹೊರಗಿನ ರಸ್ತೆ ಬದಿಯ ಚರಂಡಿಗಳನ್ನು ದುರಸ್ತಿಪಡಿಸಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಜತೆಗೆ ಆಗಾಗ್ಗೆ ಕೀಟನಾಶಕಗಳನ್ನು ಸಿಂಪಡಿಸಿ ಸೊಳ್ಳೆಗಳನ್ನು ನಿಯಂತ್ರಿಸುವ ತುರ್ತು ಕ್ರಮ ಕೈಗೊಳ್ಳಲಿ. ಜೆ.ಸಿ ಕಿರಣ್ ಅರುವತ್ತೊಕ್ಕಲು. ಕೀರೆಹೊಳೆ ಶುದ್ಧೀಕರಣದತ್ತ ಗಮನಹರಿಸಲಿ ಗೋಣಿಕೊಪ್ಪಲುವಿನ ಮಧ್ಯಭಾಗದಲ್ಲಿ ಹರಿಯುತ್ತಿರುವ ಕೀರೆಹೊಳೆಗೆ ಪಟ್ಟಣದ ಬೇಕರಿ ಹೋಟೆಲ್ ಹಾಗೂ ಮನೆಗಳ ಶೌಚಾಲಯದ ನೀರು ಸೇರಿ ಹೊಳೆ ಸಂಪೂರ್ಣವಾಗಿ ಕಲುಷಿತಗೊಂಡಿದೆ. ಜತೆಗೆ ಕೆಲವು ಬಾಡಿಗೆ ಮನೆ ನಿವಾಸಿಗಳು ಮನೆಯ ತ್ಯಾಜ್ಯವನ್ನು ಹೊಳೆಗೆ ಎಸೆಯುತ್ತಿದ್ದಾರೆ. ಇದರಿಂದ ತ್ಯಾಜ್ಯ ಕರಗಿ ಹೊಳೆಯ ನೀರು ಕ್ರಿಮಿಕೀಟಗಳ ಆವಾಸ ಸ್ಥಾನವಾಗಿದೆ. ಗ್ರಾಮ ಪಂಚಾಯಿತಿ ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಹೊಳೆಯನ್ನು ಶುದ್ಧವಾಗಿಡುವತ್ತ ಗಮನರಿಸಲಿ. ಬಾಂಬೆ ಮೋಯ್ದು ಪೊನ್ನಂಪೇಟೆ ಸಾರ್ವಜನಿಕರು ಎಚ್ಚರದಿಂದಿರಬೇಕು ಮಳೆಗಾಲದ ಆರಂಭದಲ್ಲಿ ಸಾಮಾನ್ಯವಾಗಿ ವಾಂತಿಭೇದಿ ಕಾಲರಾ ಶೀತಜ್ವರ ಸೇರಿದಂತೆ ವೈರಲ್ ಜ್ವರದಂತಹ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಈ ಬಗ್ಗೆ ಸಾರ್ವಜನಿಕರು ಎಚ್ಚರದಿಂದಿರಬೇಕು. ಚರಂಡಿ ಸೇರಿದಂತೆ ಮನೆಯ ಸುತ್ತಮುತ್ತಲು ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ವಿಶೇಷವಾಗಿ ಡೆಂಗಿ ಕುರಿತಂತೆ ಗಮನಹರಿಸಬೇಕು. ಮಳೆಗಾಲದಲ್ಲಿ ಬಿಸಿ ನೀರು ಸೇರಿದಂತೆ ಬಿಸಿಯಾದ ಆಹಾರವನ್ನೆ ಸೇವಿಸಬೇಕು. ತೆರದಿಟ್ಟ ಪದಾರ್ಥಗಳನ್ನು ಸೇವಿಸಬಾರದು. ಡಾ.ವಿಶ್ವನಾಥ್ ಸಿಂಪಿ ಶಸ್ತ್ರ ಚಿಕಿತ್ಸಕರು ಸಾರ್ವಜನಿಕ ಆಸ್ಪತ್ರೆ ವಿರಾಜಪೇಟೆ ಜಾಗೃತಿ ಮೂಡಿಸಲಾಗುತ್ತಿದೆ ಸಾಂಕ್ರಾಮಿಕ ರೋಗಗಳಿಂದ ದೂರವಿರಲು ವೈಯಕ್ತಿಕ ಸ್ವಚ್ಛತೆ ಕೈ ತೊಳೆದುಕೊಳ್ಳುವುದು ಆಹಾರ ಮುಚ್ಚಿಡುವುದು ಬಿಸಿಯಾದ ಆಹಾರ ಸೇವನೆ ಮತ್ತು ನಿಯಮಿತ ವ್ಯಾಯಾಮ ಪಾಲನೆ ಅಗತ್ಯ. ಆರೋಗ್ಯ ಇಲಾಖೆಯ ಸತತ ಪ್ರಯತ್ನದ ಫಲವಾಗಿ ಇತ್ತೀಚೆಗೆ ಸಾಂಕ್ರಾಮಿಕ ರೋಗ ಪ್ರಕರಣಗಳಲ್ಲಿ ಇಳಿಮುಖವಾಗಿದೆ. ರೋಗದ ತೀವ್ರತೆಯ ಮೇಲೆ ಜನ ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಮಲೇರಿಯಾ ಡೆಂಗಿ ಸೇರಿ ಯಾವುದೇ ಸಾಂಕ್ರಾಮಿಕ ರೋಗ ಕಂಡುಬಂದರೂ ರೋಗಿ ವಾಸವಿರುವ ಪ್ರದೇಶದಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ರಕ್ತದ ಮಾದರಿಗಳನ್ನು ಪರೀಕ್ಷೆ ಮಾಡಿ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಡಾ.ಇಂಧೂದರ್ ತಾಲ್ಲೂಕು ವೈದ್ಯಾಧಿಕಾರಿ ಕುಶಾಲನಗರ. ಕ್ರಮ ಕೈಗೊಳ್ಳಲಾಗಿದೆ ಕುಶಾಲನಗರ ಪುರಸಭೆ ಎಲ್ಲಾ ವಾರ್ಡ್‌ಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಕಸ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮಳೆ ನೀರು ಪಟ್ಟಣದ ಹೊರಗೆ ಹೋಗುವ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ವಾರ್ಡ್‌ಗಳಲ್ಲಿ ರಾಸಾಯನಿಕ ಹೊಗೆಯನ್ನು ಸಿಂಪಡಿಸುವುದು ಮತ್ತು ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್ ಹಾಕುವ ಮೂಲಕ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು ಕ್ರಮ ಕೈಗೊಳ್ಳಲಾಗಿದೆ. ಉದಯಕುಮಾರ್ ಪುರಸಭೆ ಆರೋಗ್ಯ ನಿರೀಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT