ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ತವ್ಯ ಲೋಪ: ವೈದ್ಯ ಅಮಾನತು

ನಿರ್ಲಕ್ಷ್ಯ ಸಿಬ್ಬಂದಿಗೆ ಬಿಸಿ ಮುಟ್ಟಿಸಿದ ಆರೋಗ್ಯ ಸಚಿವ ಬಿ.ಶ್ರೀರಾಮುಲು
Last Updated 27 ಸೆಪ್ಟೆಂಬರ್ 2019, 12:22 IST
ಅಕ್ಷರ ಗಾತ್ರ

ಮಡಿಕೇರಿ: ಕರ್ತವ್ಯ ಲೋಪದ ಆರೋಪದ ಮೇಲೆ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಅನಿಲ್‌ ಅವರನ್ನು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಅಮಾನತು ಪಡಿಸಿದ್ದಾರೆ.

ಈ ವೈದ್ಯರ ಕರ್ತವ್ಯ ಲೋಪ ಕುರಿತು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಸಹ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಗಮನಕ್ಕೆ ತಂದಿದ್ದರು. ಸೋಮಣ್ಣ ಅವರೂ, ವೈದ್ಯರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದರು. ರಂಜನ್ ಮತ್ತೆ ಆರೋಗ್ಯ ಸಚಿವರ ಗಮನಕ್ಕೆ ತಂದಾಗ ಅಲ್ಲೇ ಅಮಾನತಿಗೆ ಆದೇಶ ನೀಡಿದ್ದಾರೆ.

ಬಳಿಕ ರಾಮುಲು ಮಾತನಾಡಿ, ‘ಆ ವೈದ್ಯನ ವಿರುದ್ಧ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. ಯಾರೇ ಕರ್ತವ್ಯ ಲೋಪ ಎಸಗಿದರೂ, ಅಮಾನತು ಮಾಡಲಾಗುವುದು. ಅದರ ಅರ್ಥ ಬೆದರಿಕೆ ಅಲ್ಲ. ಸುಧಾರಣೆ ಆಗಬೇಕು ಅಷ್ಟೇ’ ಎಂದು ಸಚಿವರು ಹೇಳಿದರು.

ಪ್ರತ್ಯೇಕತೆಯಿಂದ ಸಮಸ್ಯೆ: ಮಡಿಕಲ್ ಕಾಲೇಜು ಹಾಗೂ ಆರೋಗ್ಯ ಇಲಾಖೆ ಪ್ರತ್ಯೇಕಗೊಂಡ ನಂತರ ಸಮನ್ವಯತೆ ಕೊರತೆಯಿಂದ ಸಮಸ್ಯೆಗಳು ಸೃಷ್ಟಿಯಾಗಿದೆ. ಯಾವುದೇ ಸರ್ಕಾರ ಬರಲಿ; ಎರಡು ಇಲಾಖೆಗಳೂ ಒಂದೇ ಸೂರಿನಡಿ ಕೆಲಸ ಮಾಡಿದರೆ ಸಮಸ್ಯೆ ಸ್ವಲ್ಪಮಟ್ಟಿಗೆ ನೀಗಲಿದೆ. ಆ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

‘ಸಾಕಷ್ಟು ರೋಗಿಗಳು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ್ದೇನೆ. ಈ ಆಸ್ಪತ್ರೆಯಲ್ಲಿ ರೆಡಿಯಾಲಜಿಸ್ಟ್‌ ಸಮಸ್ಯೆಯಿದೆ. ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲಾಗುವುದು. ಇಲ್ಲದಿದ್ದರೆ ರಾಜ್ಯ ಸರ್ಕಾರದ ಮೂಲಕ ಭರ್ತಿ ಮಾಡಲಾಗುವುದು. 450 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಮುಖ್ಯಮಂತ್ರಿ ಜತೆಗೆ ಚರ್ಚಿಸಲಾಗುವುದು. ಖಾಸಗಿ ಆಸ್ಪತ್ರೆಗೆ ಪೈಪೋಟಿ ನೀಡಬೇಕಾಗಿದೆ. ಎಲ್ಲ ಬೇಡಿಕೆ ಈಡೇರಿಕೆಗೆ ಸರ್ಕಾರ ಮಟ್ಟದಲ್ಲಿ ಪ್ರಯತ್ನಿಸಲಾಗುವುದು’ ಎಂದು ಶ್ರೀರಾಮುಲು ಹೇಳಿದರು.

ಇದೇ ವೇಳೆ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ. 92 ‘ಡಿ’ ಗ್ರೂಪ್ ನೌಕರರ ಬದಲು ಕೇವಲ 17 ನೌಕರರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾಕ‌ಷ್ಟು ಹುದ್ದೆಗಳೂ ಖಾಲಿಯಿವೆ ಎಂದು ಸಿಬ್ಬಂದಿಗಳು ಗಮನ ಸೆಳೆದರು.

ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮುಖ್ಯಸ್ಥ ಕಾರ್ಯಪ್ಪ, ಶಾಸಕ ಕೆ.ಜಿ.ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್ ಇತರ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT