ಮಡಿಕೇರಿ: ಇಲ್ಲಿನ ಅಬ್ಬಿ ಜಲಪಾತ ವೀಕ್ಷಣೆಗೆ ಸಾರ್ವಜನಿಕರಿಂದ ಕೆ.ನಿಡುಗಣಿ ಗ್ರಾಮ ಪಂಚಾಯಿತಿ ಶುಲ್ಕ ವಸೂಲು ಮಾಡುವುದಕ್ಕೆ ವಿರೋಧ ವ್ಯಕ್ತವಾಗಿದೆ. ಭಾನುವಾರ ಇಲ್ಲಿಗೆ ಬಂದ ಜಲಪಾತ ಇರುವ ತೋಟದ ಮಾಲೀಕರು ಈ ಕುರಿತು ಆಕ್ಷೇಪ ವ್ಯಕ್ತಪಡಿಸಿ, ಹಣ ಸಂಗ್ರಹಿಸುವುದು ಬೇಡ. ಪ್ರವಾಸಿಗರಿಗೆ ಉಚಿತ ಪ್ರವೇಶ ನೀಡಿ ಎಂದು ಒತ್ತಾಯಿಸಿದರು.
ಮಾಲೀಕರಾದ ಪಾರ್ವತಿ ನಾಣಯ್ಯ ಅವರ ಪುತ್ರಿ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಇಂದಿರಾ, ‘ಈ ಹಿಂದೆ ಇದ್ದಂತೆ ಉಚಿತ ಪ್ರವೇಶ ಮುಂದುವರಿಯಬೇಕು’ ಎಂದು ಆಗ್ರಹಿಸಿದರು.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೆ.ನಿಡುಗಣಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಸೆಲ್ವಿನ್ ಜಯಕುಮಾರ್, ‘ಜಿಲ್ಲಾಧಿಕಾರಿ ಅವರ ಆದೇಶದ ಮೇರೆಗೆ ಕಳೆದ 6 ತಿಂಗಳುಗಳಿಂದ ₹ 10 ಪ್ರವೇಶಶುಲ್ಕ ಪಡೆದು ಅಬ್ಬಿ ಜಲಪಾತದ ನಿರ್ವಹಣೆ ಮಾಡಲಾಗುತ್ತಿದೆ. ಅಬ್ಬಿ ಜಲಪಾತಕ್ಕೆ ಹೋಗುವ ದಾರಿ ಇರುವ ತೋಟದ ಮಾಲೀಕರು ಪ್ರವಾಸಿಗರಿಂದ ಪ್ರವೇಶಶುಲ್ಕ ವಸೂಲು ಮಾಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ’ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಡೀನ್ ಬೋಪಣ್ಣ ಪ್ರತಿಕ್ರಿಯಿಸಿ, ‘ಪಂಚಾಯಿತಿ ವತಿಯಿಂದ ₹ 15 ಲಕ್ಷದಷ್ಟು ಅಭಿವೃದ್ಧಿ ಕಾರ್ಯಗಳನ್ನು ಅಬ್ಬಿ ಜಲಪಾತದಲ್ಲಿ ಮಾಡಲಾಗಿದೆ. ಅದರ ನಿರ್ವಹಣಾ ವೆಚ್ಚವಾಗಿ ಅತ್ಯಲ್ಪ ಪ್ರವೇಶಶುಲ್ಕವನ್ನು ಅಧಿಕೃತವಾಗಿಯೆ ಪಡೆಯಲಾಗುತ್ತಿದೆ. ಆದರೆ, ತೋಟದ ಮಾಲೀಕರು ಇದಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ’ ಎಂದರು.
ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರೂ ಆಗಿರುವ ಉಪವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ಪ್ರತಿಕ್ರಿಯಿಸಿ, ‘ಈ ಕುರಿತು ತೋಟದ ಮಾಲೀಕರು ಹಾಗೂ ಕೆ.ನಿಡುಗಣಿ ಗ್ರಾಮ ಪಂಚಾಯಿತಿ ಅವರೊಂದಿಗೆ ಸಭೆ ನಡೆಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.