ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ | ಪರಿಸರವಾದಿ ಕೆ.ಎಂ. ಚಿಣ್ಣಪ್ಪ ಇನ್ನಿಲ್ಲ

Published 26 ಫೆಬ್ರುವರಿ 2024, 8:35 IST
Last Updated 26 ಫೆಬ್ರುವರಿ 2024, 8:35 IST
ಅಕ್ಷರ ಗಾತ್ರ

ಮಡಿಕೇರಿ: ಪರಿಸರವಾದಿ ಕೆ.ಎಂ.ಚಿಣ್ಣಪ್ಪ (84) ಅನಾರೋಗ್ಯದಿಂದ ಸೋಮವಾರ ಮಧ್ಯಾಹ್ನ ಇಲ್ಲಿನ ಪೊನ್ನಂಪೇಟೆ ತಾಲ್ಲೂಕಿನ ಕುಮಟೂರು ಗ್ರಾಮದ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಇವರಿಗೆ ಒಬ್ಬ ಪುತ್ರ, ಪತ್ನಿ ಇದ್ದಾರೆ.

ದಕ್ಷಿಣ ಕೊಡಗಿನ ಕುಮಟೂರು ಗ್ರಾಮದಲ್ಲಿ ಜನಿಸಿದ ಇವರು 1967 ರಲ್ಲಿ ಅರಣ್ಯ ಇಲಾಖೆಗೆ ಅರಣ್ಯಾಧಿಕಾರಿಯಾಗಿ ಸೇರಿದರು. ನಾಗರಹೊಳೆಯ ವಲಯ ಅರಣ್ಯಾಧಿಕಾರಿಯಾಗಿ ಅವರು ಅರಣ್ಯ ಉಳಿಸುವುದಕ್ಕಾಗಿ ಅವಿರತವಾಗಿ ಶ್ರಮಿಸಿದ್ದರು.

ಮರದ ಕಳ್ಳಸಾಗಣೆ, ಗಾಂಜಾ ತೋಟ ಮಾಡುವುದು, ಬೇಟೆ ಮೊದಲಾದ ಅಪರಾಧ ಕೃತ್ಯಗಳನ್ನು ನಿಯಂತ್ರಣಕ್ಕೆ ತಂದಿದ್ದರು. ಇವರ ಸೇವೆಯನ್ನು ಪರಿಗಣಿಸಿ 1985ರಲ್ಲಿ ಮುಖ್ಯಮಂತ್ರಿ ಚಿನ್ನದ ಪದಕವನ್ನೂ ಇವರು ಪಡೆದಿದ್ದರು. ನಂತರ ‘ವೈಲ್ಡ್ ಲೈಫ್ ಫಸ್ಟ್’ ಅಧ್ಯಕ್ಷರಾಗಿ ಟಿಂಬರ್ ಮಾಫಿಯಾ ವಿರುದ್ಧ ಧ್ವನಿ ಎತ್ತಿದ್ದರು.

ಇತ್ತೀಚಿನ ವರ್ಷಗಳಲ್ಲಿ ತಮ್ಮ ಇಳಿ ವಯಸ್ಸಿನಲ್ಲಿ ಅರಣ್ಯವನ್ನು ಬೆಂಕಿಯಿಂದ ರಕ್ಷಿಸಲು ನಿರಂತರವಾಗಿ ಶ್ರಮಿಸಿದ್ದರು. ಹೊತ್ತಿಕೊಂಡ ಬೆಂಕಿಯನ್ನು ಆರಿಸುವುದು ಮಾತ್ರವಲ್ಲ ವಿದ್ಯಾರ್ಥಿಗಳಿಗೆ ಅರಣ್ಯವನ್ನು ಬೆಂಕಿಯಿಂದ ರಕ್ಷಿಸುವುದು ಹೇಗೆ ಎಂಬುದರ ಕುರಿತು ತಿಳಿವಳಿಕೆ ನೀಡುತ್ತಿದ್ದರು. ಇವರು ಕಾಡು, ಪರಿಸರ ಸಂರಕ್ಷಣೆ ಕುರಿತು ಹಲವು ಕೃತಿಗಳನ್ನೂ ರಚಿಸಿದ್ದಾರೆ.

ನಿರ್ಭೀತಿಯಿಂದ ಕಾಡಿನ ರಕ್ಷಣೆ ಮಾಡಿದ್ದರು

ಪರಿಸರವಾದಿ ಕೆ.ಎಂ.ಚಿಣ್ಣಪ್ಪ ಅವರು ನಿರ್ಭೀತಿಯಿಂದ ಕಾಡಿನ ರಕ್ಷಣೆ ಮಾಡಿದ ಅರಣ್ಯಾಧಿಕಾರಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತಹವರು. ಈ ಕಾರ್ಯದಲ್ಲಿ ಹಲವು ಬಾರಿ ಅವರ ಮೇಲೆ ದಾಳಿಗಳು ಉಂಟಾದರೂ ಎದೆಗುಂದದೇ, ಬೇರೆಲ್ಲೂ ಹೋಗದೇ ನಾಗರಹೊಳೆಯಲ್ಲೇ ನೆಲೆನಿಂತು ಕಾಡಿನ ರಕ್ಷಣೆಗೆ ಪಣತೊಟ್ಟವರು. ಮುಖ್ಯವಾಗಿ, ಯುವತಲೆಮಾರಿಗೆ ಕಾಡಿನ ಮಹತ್ವ ಕುರಿತು ತಿಳಿವಳಿಕೆ ನೀಡುತ್ತಿದ್ದ ಅಪರೂಪದ ಪರಿಸರವಾದಿಯಾಗಿದ್ದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆಯ ನಿವೃತ್ತ ಕಾರ್ಯದರ್ಶಿ ಎ.ಸಿ.ಲಕ್ಷ್ಮಣ್, ‘ಕಾಡಿನ ರಕ್ಷಣೆ ಕುರಿತು ಅಪಾರವಾದ ಜ್ಞಾನ ಹೊಂದಿದ್ದ ಅಪರೂಪದ ಮನುಷ್ಯ ಚಿಣ್ಣಪ್ಪ. ಅವರಿಂದ ಕಲಿಯುವುದು ಸಾಕಷ್ಟಿತ್ತು. ಅತ್ಯಂತ ಕಟ್ಟುನಿಟ್ಟಿನ ಶಿಸ್ತಿನ ಮನುಷ್ಯ ಅವರು. ಅರಣ್ಯ ರಕ್ಷಣೆಯ ಯಾವುದೇ ಸಂದರ್ಭದಲ್ಲಿಯೂ ಅವರು ರಾಜಿ ಮಾಡಿಕೊಳ್ಳಲಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಹಾಲಿ ಡಿಸಿಎಫ್ ಭಾಸ್ಕರ್ ಪ್ರತಿಕ್ರಿಯಿಸಿ, ‘ನಾನು ವಿದ್ಯಾರ್ಥಿ ದೆಸೆಯಲ್ಲಿ ಸ್ವಯಂಸೇವಕನಾಗಿ ನಾಗರಹೊಳೆಗೆ ಹೋದಾಗ ಚಿಣ್ಣಪ್ಪ ಅವರು ತರಬೇತಿ ನೀಡಿದ್ದರು. ಅಧಿಕಾರಿಗಳು ಯಾವಾಗಲೂ ಜೀಪಿನಲ್ಲಿ ಕಾಡಿನೊಳಗೆ ಹೋಗದೇ ನಡೆದುಕೊಂಡೆ ಹೋಗಬೇಕು ಎಂದು ಸದಾ ಹೇಳುತ್ತಿದ್ದರು. ನಮ್ಮ ಕಣ್ಣು, ಕಿವಿ, ಮೂಗುಗಳು ಜಾಗೃತವಾಗಿದ್ದರೆ ನಡೆದುಕೊಂಡು ಹೋದಾಗ ಕಾಡಿನ ಒಂದೊಂದು ಎಲೆಯೂ ನಮಗೆ ಪಾಠ ಹೇಳುತ್ತದೆ. ಅವರ ಅನುಭವ ಅಪಾರವಾಗಿತ್ತು’ ಎಂದು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT