ಶನಿವಾರ, ಅಕ್ಟೋಬರ್ 19, 2019
27 °C
ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದ ಜೆ.ಟಿ. ಸತೀಶ್‌: ಜಿಲ್ಲಾಧಿಕಾರಿಯಿಂದ ಕ್ರಮ  

ಬೆಟ್ಟ ನೆಲಸಮ ಪ್ರಕರಣ: ಎಫ್‌ಡಿಎ ಅಮಾನತು

Published:
Updated:
Prajavani

ಮಡಿಕೇರಿ: ತಾಲ್ಲೂಕಿನ ತಲಕಾವೇರಿ ಸಮೀಪದ ಚೇರಂಗಾಲ ಗ್ರಾಮದಲ್ಲಿ ವಾಣಿಜ್ಯ ಉದ್ದೇಶಕ್ಕೆ ಬೆಟ್ಟವನ್ನೇ ನೆಲಸಮ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ತಾಲ್ಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಜೆ.ಟಿ. ಸತೀಶ್ ಅವರನ್ನು ಅಮಾನತು ಮಾಡಲಾಗಿದೆ. ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಈಚೆಗೆ ಅಮಾನತು ಪಡಿಸಿ ಆದೇಶಿಸಿದ್ದಾರೆ.     

ಬೆಟ್ಟ ಒತ್ತುವರಿ ಮಾಡಿಕೊಂಡು ರೆಸಾರ್ಟ್ ಮಾಡಲು ಮುಂದಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದರು. ಜಿಲ್ಲಾಧಿಕಾರಿಗೆ ತಲಕಾವೇರಿ ಮೂಲ ಸ್ವರೂಪ ಹಿತರಕ್ಷಣಾ ವೇದಿಕೆ ಸದಸ್ಯರು ಮನವಿ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದರು. ಕಂದಾಯ, ಅರಣ್ಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಜಂಟಿ ತನಿಖೆಗೆ ಡಿ.ಸಿ ಆದೇಶಿಸಿದ್ದರು. ವರದಿಯಲ್ಲಿ ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಬೆಟ್ಟ ಸಮತಟ್ಟು ಮಾಡಿರುವುದು, ಅಕ್ರಮವಾಗಿ ಮರ ಕಡಿತಲೆ ಮಾಡಿರುವುದು, ಮಂಜೂರಾದ ಪ್ರದೇಶವನ್ನೇ ಬಿಟ್ಟು ಸರ್ಕಾರಿ ಜಾಗ ಒತ್ತುವರಿ ಮಾಡಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ವರದಿ ಆಧರಿಸಿ, ಇಲಾಖೆ ತನಿಖೆ ಕಾಯ್ದಿರಿಸಿ ಜಿಲ್ಲಾಧಿಕಾರಿ ಅಮಾನತು ಪಡಿಸಿ ಆದೇಶಿಸಿದ್ದಾರೆ. ಸತೀಶ್‌, ಸಂಪಾಜೆ ಕಂದಾಯ ಅಧಿಕಾರಿ ಆಗಿದ್ದ ವೇಳೆ ಈ ಅಕ್ರಮ ನಡೆಸಿದ್ದರು ಎನ್ನಲಾಗಿದೆ.  

ಜಂಟಿ ತನಿಖಾ ತಂಡವು ನೆಲಸಮ ಮಾಡಿದ್ದ ಬೆಟ್ಟದ ವ್ಯಾಪ್ತಿಯಲ್ಲಿ ಸರ್ವೆ ಮಾಡಿ ವರದಿ ಸಲ್ಲಿಸಿತ್ತು. ಅಕ್ರಮ ಸಕ್ರಮ ಯೋಜನೆ ಅಡಿ ಮಂಜೂರು ಮಾಡಿದ್ದ ಜಮೀನು ಬಿಟ್ಟು ಬೇರೆ ಜಾಗದಲ್ಲೂ ವಾಣಿಜ್ಯ ಉದ್ದೇಶಕ್ಕೆ ಬೆಟ್ಟವನ್ನು ನೆಲಸಮ ಮಾಡಲಾಗಿತ್ತು. ಒತ್ತುವರಿ ಮಾಡಿದ್ದು ಸರ್ಕಾರಿ ಜಾಗವೆಂಬುದು ತನಿಖೆಯಿಂದ ಬೆಳಕಿಗೆ ಬಂದಿತ್ತು. ರೆಸಾರ್ಟ್‌ ನಿರ್ಮಾಣಕ್ಕೆ ಸುಮಾರು ಒಂದೂವರೆ ಎಕರೆ ಒತ್ತುವರಿ ಮಾಡಿಕೊಳ್ಳಲಾಗಿತ್ತು. ನೆಲಸಮ ಮಾಡಿದ್ದ ಪರಿಣಾಮ ಬೆಟ್ಟದಲ್ಲಿ ಬೃಹತ್‌ ಪ್ರಮಾಣದ ಬಿರುಕು ಕಾಣಿಸಿಕೊಂಡು, ಬೆಟ್ಟವೇ ಕುಸಿಯುವ ಆತಂಕ ಎದುರಾಗಿತ್ತು.  ಬೆಟ್ಟದ ತಪ್ಪಲಿನ ಕೋಳಿಕಾಡು, ಚೇರಂಗಾಲ ‌ಗ್ರಾಮಸ್ಥರು ಆತಂಕದಲ್ಲಿದ್ದರು. ಈ ಹಿಂದೆ ಪತ್ರಿಕಾಗೋಷ್ಠಿ ನಡೆಸಿದ್ದ ತಲಕಾವೇರಿ ಮೂಲ ಸ್ವರೂಪ ಹಿತರಕ್ಷಣಾ ವೇದಿಕೆ ಪ್ರಮುಖರು, ಪ್ರಕರಣ ಬಯಲಿಗೆ ತಂದಿದ್ದರು.

ಬ್ರಹ್ಮಗಿರಿ ಬೆಟ್ಟವನ್ನೇ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಅಧಿಕಾರಿಯನ್ನು ಬಂಧಿಸಬೇಕು ಎಂದು ವೇದಿಕೆ ಸದಸ್ಯ ಉಳಿಯಡ ಪೂವಯ್ಯ ಅವರು ಅಂದು ಆಗ್ರಹಿಸಿದ್ದರು.

‘ಈ ಕಂದಾಯ ಅಧಿಕಾರಿ ಪ್ರಕೃತಿ ವಿಕೋಪದಲ್ಲಿ ಹಣದಲ್ಲಿ ₹ 32 ಸಾವಿರದಷ್ಟು ಪರಿಹಾರವನ್ನು ಎರಡು ಕಂತಿನಲ್ಲಿ ಪಡೆದುಕೊಂಡಿದ್ದಾರೆ. ಚೇರಂಗಾಲ ಗ್ರಾಮಸ್ಥರ ಬಳಿ ಆ ದಾಖಲೆಗಳೂ ಇವೆ’ ಎಂದು ಪ್ರಕರಣವನ್ನು ಪೂವಯ್ಯ ಬಯಲಿಗೆ ತಂದಿದ್ದರು.

‘ತಲಕಾವೇರಿ ಕ್ಷೇತ್ರವು ‘ದಕ್ಷಿಣ ಕಾಶಿ’ ಎಂದೇ ಪ್ರಸಿದ್ಧಿ ಪಡೆದಿದೆ. ಅದರ ಪಾವಿತ್ರ್ಯತೆ ಇಳಿಯಬೇಕು. ಆದರೆ, ಕೋಳಿಕಾಡು ಸಮೀಪ ನೂರಾರು ಮರ ಕಡಿದು ರೆಸಾರ್ಟ್‌ ನಿರ್ಮಿಸಲು ಸರ್ಕಾರಿ ಅಧಿಕಾರಿಯೇ ಮುಂದಾಗಿದ್ದಾರೆ. ಅಕ್ರಮ – ಸಕ್ರಮದಲ್ಲಿ ಜಮೀನು ಮಂಜೂರು ಮಾಡಿಸಿಕೊಂಡಿದ್ದಾರೆ. ಉಳಿದ ಜಾಗವನ್ನು ಒತ್ತುವರಿ ಮಾಡಿಕೊಂಡು ಅಲ್ಲಿ ರೆಸಾರ್ಟ್‌ ನಿರ್ಮಿಸಲು ಗುಡ್ಡವನ್ನೇ ಸಮತಟ್ಟು ಮಾಡಿದ್ದಾರೆ. ಗುಡ್ಡ ಕುಸಿದರೆ ಹತ್ತಾರು ವರ್ಷಗಳಿಂದ ಕೋಳಿಕಾಡಿನಲ್ಲಿ ವಾಸವಿರುವ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ’ ಎಂದು ಸ್ಥಳೀಯ ಮುಖಂಡ ಸಿರಿಗೆರೆ ನಾಗೇಶ್‌ ಅಂದು ಗಮನ ಸೆಳೆದಿದ್ದರು. ‘ಯುಕೋ’ ಸಂಘಟನೆಯ ಮುಖ್ಯಸ್ಥ ಮಂಜು ಚಿಣ್ಣಪ್ಪ, ದೊರೆ ಸೋಮಣ್ಣ ಅವರು ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು. 

Post Comments (+)