ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಜಪೇಟೆ; ಮೆರವಣಿಗೆಗೆ ಬೆಳಕಿನ ಚಿತ್ತಾರ

ಶ್ರದ್ಧಾಭಕ್ತಿಯಿಂದ ಸಾಗಿದ ಅದ್ದೂರಿ ಮೆರವಣಿಗೆ
Published 28 ಸೆಪ್ಟೆಂಬರ್ 2023, 16:38 IST
Last Updated 28 ಸೆಪ್ಟೆಂಬರ್ 2023, 16:38 IST
ಅಕ್ಷರ ಗಾತ್ರ

ವಿರಾಜಪೇಟೆ: ಪಟ್ಟಣದ ವಿವಿಧ ಗೌರಿ ಗಣೇಶೋತ್ಸವ ಸಮಿತಿಗಳ ಉತ್ಸವ ಮೂರ್ತಿಗಳ ವಿಸರ್ಜನೋತ್ಸವದ ಶೋಭಾಯಾತ್ರೆಯು ವಿಜೃಂಭಣೆಯಿಂದ ಗುರುವಾರ ನಡೆಯಿತು.

ಈ ಶೋಭಾಯಾತ್ರೆಯ ಮೆರವಣಿಗೆಯುದ್ದಕ್ಕೂ ಸಡಗರ, ಸಂಭ್ರಮಗಳು ಮನೆ ಮಾಡಿದ್ದವು. ಪಟ್ಟಣ ವ್ಯಾಪ್ತಿಯ 22 ಸಮಿತಿಗಳ ಮಂಟಪಗಳು ಇದರಲ್ಲಿ ಭಾಗವಹಿಸಿದ್ದವು.

ಮೊದಲಿಗೆ, ಪಟ್ಟಣದ ಗಡಿಯಾರ ಕಂಬ ಸಮೀಪದ ಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಉತ್ಸವ ಮೂರ್ತಿಯನ್ನು ಗುರುವಾರ ರಾತ್ರಿ ಧಾರ್ಮಿಕ ವಿಧಿವಿಧಾನಗಳನ್ನು ಕೈಗೊಂಡು ಹೂವಿನ ಅಲಂಕೃತ ಮಂಟಪದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಇರಿಸುವ ಮೂಲಕ ಅದ್ದೂರಿ ಮೆರವಣಿಗೆ ಆರಂಭವಾಯಿತು.

ಈ ವೇಳೆ ಸ್ಥಳದಲ್ಲಿ ಕಿಕ್ಕಿರಿದು ಸೇರಿದ್ದ ಭಕ್ತಾದಿಗಳು ತೆಂಗಿನಕಾಯಿಯ ಈಡುಗಾಯಿ ಒಡೆದು, ಜಯಘೋಷ ಮೊಳಗಿಸಿದರು. ಜತೆಗೆ, ಪಟಾಕಿಗಳನ್ನೂ ಸಿಡಿಸಲಾಯಿತು. ಬಳಿಕ ವಿಸರ್ಜನೋತ್ಸವಕ್ಕೆ ಶ್ರದ್ಧಾಭಕ್ತಿಯಿಂದ ವಾದ್ಯ ತಂಡಗಳು ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಚಾಲನೆ ನೀಡಲಾಯಿತು.

ಗಣಪತಿ ದೇವಾಲಯದಲ್ಲಿ ವಿಸರ್ಜನೋತ್ಸವಕ್ಕೆ ಚಾಲನೆ‌ ನೀಡಿದ ಬಳಿಕ ಪಟ್ಟಣದ ವಿವಿಧ ಕಡೆಗಳಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದ ಉಳಿದ ಪ್ರಮುಖ 21 ಸಮಿತಿಗಳು ತಮ್ಮ ತಮ್ಮ ಅಲಂಕೃತ ಮಂಟಪಗಳಲ್ಲಿ ಮೂರ್ತಿಗಳನ್ನು ಇರಿಸಿ ಮೆರವಣಿಗೆಗೆ ಚಾಲನೆ‌ ನೀಡಲಾಯಿತು.

22 ಸಮಿತಿಗಳ ಉತ್ಸವ ಮೂರ್ತಿಯನ್ನು ಹೊತ್ತ ವಿದ್ಯುತ್ ಅಲಂಕೃತ ಮಂಟಪಗಳು, ವಿವಿಧ ಕಲಾ ತಂಡಗಳು, ಡಿ.ಜೆ ಹಾಗೂ ವಾದ್ಯವೃಂದಗಳೊಂದಿಗೆ ಪಟ್ಟಣದ ಮುಖ್ಯ ರಸ್ತೆಯನ್ನು ಪ್ರವೇಶಿಸಿದವು. ಈ ಸಂದರ್ಭ ದಾರಿಯುದ್ದಕ್ಕೂ ಭಕ್ತರು ಈಡುಗಾಯಿ ಒಡೆದು ಪೂಜೆ ಸಲ್ಲಿಸಿ ಧನ್ಯತಾ ಭಾವ ಮೆರೆದರು.

ವಿವಿಧ ಸಮಿತಿಗಳು ವಿದ್ಯುತ್ ಅಲಂಕೃತ ಮಂಟಪಗಳು, ಹೂವಿನ ಮಂಟಪಗಳೊಂದಿಗೆ ವಾದ್ಯವೃಂದ, ಡಿ.ಜೆ, ಸಿಡಿಮದ್ದುಗಳ ಪ್ರದರ್ಶನ, ಅನಾರ್ಕಲಿ, ಕೀಲುಕುದುರೆ, ಗೊಂಬೆಕುಣಿತ ಸೇರಿದಂತೆ ವಿವಿಧ ಆಕರ್ಷಕ ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದು ಸಾರ್ವಜನಿಕರ ಗಮನ ಸೆಳೆಯಿತು. ಡಿ.ಜೆ ಹಾಗೂ ವಾದ್ಯಕ್ಕೆ ಸಾರ್ವಜನಿಕರು ವಿವಿಧ ಸಮಿತಿಗಳ ಮಂಟಪಗಳ ಮುಂಭಾಗದಲ್ಲಿ ತಲ್ಲೀನರಾಗಿ ಕುಣಿದು ಸಂಭ್ರಮಿಸಿದರು.

ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಮೂವರು ಡಿವೈಎಸ್ಪಿ, 12 ಮಂದಿ ಸಿಪಿಐಗಳು, 31 ಸಬ್‌ಇನ್‌ಸ್ಪೆಕ್ಟರ್‌ಗಳು, 54 ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ಗಳು, 62 ಮಹಿಳಾ ಸಿಬ್ಬಂದಿ ಸೇರಿದಂತೆ ಒಟ್ಟು 419 ಪೊಲೀಸ್ ಸಿಬ್ಬಂದಿ, 65 ಗೃಹರಕ್ಷಕ ದಳದ ಸಿಬ್ಬಂದಿ, ರಾಜ್ಯ ಮೀಸಲು ಪಡೆ, ಜಿಲ್ಲಾ ಮೀಸಲು ಪಡೆ, ಅಗ್ನಿ ಶಾಮಕ ದಳವನ್ನು ನಿಯೋಜಿಸಲಾಗಿತ್ತು.

ವಿರಾಜಪೇಟೆಯ ಅಪ್ಪಯ್ಯಸ್ವಾಮಿ ರಸ್ತೆಯ ಬಾಲಾಂಜನೇಯ ಗಣೇಶೋತ್ಸವ ಸೇವಾ ಸಮಿತಿಯ ಮಂಟಪ ಗುರುವಾರ ರಾತ್ರಿ ನಡೆದ ಶೋಭಾಯಾತ್ರೆಯಲ್ಲಿ ಕಣ್ಮನ ಸೆಳೆಯಿತು
ವಿರಾಜಪೇಟೆಯ ಅಪ್ಪಯ್ಯಸ್ವಾಮಿ ರಸ್ತೆಯ ಬಾಲಾಂಜನೇಯ ಗಣೇಶೋತ್ಸವ ಸೇವಾ ಸಮಿತಿಯ ಮಂಟಪ ಗುರುವಾರ ರಾತ್ರಿ ನಡೆದ ಶೋಭಾಯಾತ್ರೆಯಲ್ಲಿ ಕಣ್ಮನ ಸೆಳೆಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT