ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪೋಕ್ಲುವಿನಲ್ಲಿ ಹೂತಿದ್ದ ಶವ ಹೊರತೆಗೆದ ಆರೋಪ; ಸಾರ್ವಜನಿಕರಿಂದ ಪ್ರತಿಭಟನೆ

ನಾಪೋಕ್ಲು: ಹೂತಿದ್ದ ಶವ ಹೊರತೆಗೆದ ಆರೋಪ; ಸಾರ್ವಜನಿಕರಿಂದ ಪ್ರತಿಭಟನೆ
Last Updated 3 ನವೆಂಬರ್ 2019, 15:58 IST
ಅಕ್ಷರ ಗಾತ್ರ

ನಾಪೋಕ್ಲು: ಇಲ್ಲಿನ ಗ್ರಾಮ ಪಂಚಾಯಿತಿ ವತಿಯಿಂದ ಹಿಂದೂ ರುದ್ರಭೂಮಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣವನ್ನು ನಿರ್ಮಿಸಲಾಗಿದ್ದು ವಿವಾದವನ್ನು ಸೃಷ್ಟಿಸಿದೆ. ಯಾವುದೇ ಅಧಿಕಾರಿಗಳ ಗಮನಕ್ಕೂ ತಾರದೇ, ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ನಿರ್ಧಾರ ವ್ಯಾಪಕ ಟೀಕೆಗೂ ಗುರಿಯಾಗಿದ್ದು, ಈ ನಿರ್ಧಾರದ ವಿರುದ್ಧ ಸಾರ್ವಜನಿಕರು ಶನಿವಾರ ಪ್ರತಿಭಟನೆ ನಡೆಸಿದರು.

ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇತು ಗ್ರಾಮದ ಸರ್ವೆ ನಂ. 37\2ರ ನಾಪೋಕ್ಲು ಹೋಬಳಿಗೆ ಒಳಪಟ್ಟ ಹಿಂದೂ ರುದ್ರಭೂಮಿಗೆ ಸೇರಿದ ಸ್ಥಳದಲ್ಲಿ ಗ್ರಾಮ ಪಂಚಾಯಿತಿ ತ್ಯಾಜ್ಯ ವಿಲೇವಾರಿ ಮಾಡುವ ಉದ್ದೇಶದಿಂದ 100 ಅಡಿ ಉದ್ದ, 25 ಅಡಿ ಅಗಲ ಮತ್ತು 10 ಅಡಿ ಆಳದ ಗುಂಡಿ ನಿರ್ಮಿಸಿ ಕೆಲವು ದಿನಗಳಿಂದ ಅಲ್ಲಿ ತ್ಯಾಜ್ಯ ಹಾಕಲಾಗುತ್ತಿತ್ತು. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ರೊಚ್ಚಿಗೆದ್ದ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ನಂತರ ಸ್ಥಳೀಯ ನಾಡು ಕಚೇರಿ ಮತ್ತು ಗ್ರಾಮ ಪಂಚಾಯಿತಿ ಕಚೇರಿ ಬಳಿ ತೆರಳಿ ಗ್ರಾಮ ಪಂಚಾಯಿತಿ ಆಡಳಿತ ಮತ್ತು ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಕೆ.ಜಿ.ಬೋಪಯ್ಯ ಭೇಟಿ: ಸ್ಥಳಕ್ಕೆ ಶಾಸಕ ಕೆ.ಜಿ.ಬೋಪಯ್ಯ ಭೇಟಿ ನೀಡಿ ಪರಿಶೀಲಿಸಿದರು. ನಂತರ ಸ್ಥಳೀಯ ನಾಡ ಕಚೇರಿಯಲ್ಲಿ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿ, ಕಾವೇರಿ ನದಿ ತೀರದಿಂದ 300 ಮೀ. ದೂರದವರೆಗೆ ಯಾವುದೇ ಕೆಲಸ ಮಾಡುವ ಹಾಗಿಲ್ಲ. ಆದರೂ ಕಸ ವಿವೇವಾರಿಗೆ ಸ್ಥಳವನ್ನು ಆಯ್ಕೆ ಮಾಡಿದ ಬಗ್ಗೆ ಕಂದಾಯ ಪರಿವೀಕ್ಷಕ ರಾಮಯ್ಯ ಅವರನ್ನು ಪ್ರಶ್ನಿಸಿದರು. ಇದಕ್ಕೆ ಸರಿಯಾಗಿ ಉತ್ತರ ಲಭಿಸದ ಕಾರಣ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರವಾಣಿ ಮೂಲಕ ವಿಷಯ ಪ್ರಸ್ತಾಪಿಸಿ ಕಂದಾಯ ಪರಿವೀಕ್ಷಕರಿಗೆ ಶೋಕಾಸ್ ನೋಟೀಸ್ ನೀಡುವಂತೆ ಸೂಚಿಸಿದರು.

ಪಿಡಿಒ ಚೋಂದಕ್ಕಿ ಮಾತನಾಡಿ, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಕಾಮಗಾರಿಗೆ ಕ್ರಿಯಾಯೋಜನೆ ತಯಾರಿಸಿಲ್ಲ. ಹಣವೂ ನೀಡಿಲ್ಲ ಎಂದರು. ಬೋಪಯ್ಯ ಪ್ರತಿಕ್ರಿಯಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಕಾನೂನು ಬಾಹಿರವಾಗಿ ಈ ಕಾರ್ಯ ಮಾಡಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಎಸ್ ಐ ಮಂಚಯ್ಯ ಅವರಿಗೆ ಸೂಚಿಸಿದರು.

ಮರ ಕಣ್ಮರೆ: ಈ ಸ್ಥಳದಲ್ಲಿ ಒಂದು ಶ್ರೀಗಂಧದ ಮರ, ಐದು ಬೀಟೆ ಮರ, ಐದು ಅಕೇಶಿಯ ಮರ ಇದ್ದು ಅದನ್ನು ಕತ್ತರಿಸಿ ಸಾಗಿಸಲಾಗಿದೆ. ಇದಕ್ಕೆ ಅರಣ್ಯ ಇಲಾಖೆಯವರು ಶಾಮೀಲಾಗಿದ್ದಾರೆ ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ಇಲ್ಲಿ ಹೂಳಲಾಗಿದ್ದ 16 ಶವಗಳು ಕಾಣೆಯಾಗಿವೆ ಇದನ್ನು ಹುಡುಕಿಕೊಡುವ ಕೆಲಸವನ್ನು ಮಾಡಬೇಕು. ಕಂದಾಯ ಪರಿವೀಕ್ಷಕ ಮತ್ತು ಪಿಡಿಒ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಒತ್ತಾಯಿಸಿದರು.

ಈ ರುದ್ರ ಭೂಮಿ 40 ವರ್ಷಗಳಿಂದ ಇದ್ದು ಇಲ್ಲಿ ಸಾವಿರಾರು ಮೃತ ಶರೀರಗಳ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ರುದ್ರಭೂಮಿಯ ಪ್ರವೇಶದಲ್ಲಿ ಮೃತ ಶರೀರವನ್ನು ದಹಿಸುವ ಕಾರ್ಯ ನಡೆಸಿದರೆ, ಹಿಂಭಾಗದಿಂದ ಮೃತ ಶರೀರವನ್ನು ಹೂಳುತ್ತಾ ಬರಲಾಗುತ್ತಿದೆ. ಮೃತ ದೇಹಗಳನ್ನು ಹೂತಿರುವ ಸ್ಥಳದಲ್ಲಿ ಗುಂಡಿ ನಿರ್ಮಿಸಿರುವುದರಿಂದ ಅಲ್ಲಿದ್ದ ಮೃತ ಶರೀರಗಳು ಕಾಣೆಯಾಗಿವೆ. ಇದನ್ನು ಗ್ರಾಮ ಪಂಚಾಯಿತಿ ಹುಡುಕಿ ಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ಕಳೆದ ವರ್ಷ ಆಕ್ಟೋಬರ್ 6ರಂದು ಕುಶಾಲನಗರ ಸಮೀಪ ಉಂಟಾದ ಅಪಘಾತದಲ್ಲಿ ಹಾರಂಗಿ ನಾಲೆಗೆ ಬಿದ್ದು ಮೃತಪಟ್ಟ ನಾಲ್ವರು ಮತ್ತು ನಂತರ ಮೃತಪಟ್ಟ ಅವರ ಸಂಬಂಧಿ ಸೇರಿದಂತೆ ಐದು ಮೃತ ದೇಹಗಳನ್ನು ಒಂದೇ ಬದಿಯಲ್ಲಿ ಮಣ್ಣು ಮಾಡಲಾಗಿತ್ತು. ಹಬ್ಬ ಹರಿದಿನಗಳಲ್ಲಿ ನಾವು ಅಲ್ಲಿ ಪೂಜೆ ನಡೆಸಿ, ಎಡೆ ಇಡುತ್ತಿದ್ದೆವು ಆದರೆ ಈಗ ಮೃತ ದೇಹವನ್ನು ಹೂತ ಸ್ಥಳವೇ ತಿಳಿಯುತ್ತಿಲ್ಲ ಹುಡುಕಿಕೊಡಿ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡರು.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಮತ್ತು ನಾಪೋಕ್ಲು ಭಜರಂಗದಳದ ಅಧ್ಯಕ್ಷ ಬಿ.ಎಂ.ಪ್ರತೀಪ್ ವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್, ತಳೂರು ಕಿಶೋರ್ ಕುಮಾರ್, ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಪಾಡಿಯಮ್ಮಂಡ ಮನು ಮಹೇಶ್, ಕುಂಡ್ಯೋಂಳಂಡ ರಮೇಶ್ ಮುದ್ದಯ್ಯ, ಡಿವೈಎಸ್ ಪಿ ದಿನೇಶ್ ಕುಮಾರ್ ಮತ್ತಿತರರು ಇದ್ದರು. ನಾಪೋಕ್ಲು ಠಾಣೆಯ ಎಸ್ ಐ ಆರ್.ಮಂಚಯ್ಯ ಮತ್ತು ಸಿಬ್ಬಂದಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT