ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ಎಚ್‌ಐವಿ ಸೋಂಕು; ವಿರಾಜಪೇಟೆಯಲ್ಲಿ ಅಧಿಕ!

ಇಂದು ವಿಶ್ವ ಏಡ್ಸ್ ದಿನಾಚರಣೆ: ಜಿಲ್ಲೆಯಲ್ಲಿ ಪ್ರಕರಣಗಳ ಇಳಿಮುಖ
Last Updated 1 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಎಚ್‌ಐವಿ ಸೋಂಕು ಇಳಿಮುಖವಾಗುತ್ತಿದೆ. ಆದರೆ, ಇತರ ತಾಲ್ಲೂಕುಗಳಿಗೆ ಹೋಲಿಸಿದರೆ ವಿರಾಜಪೇಟೆಯಲ್ಲೇ ಅತ್ಯಧಿಕ ಸೋಂಕುಗಳು ಪತ್ತೆಯಾ ಗುತ್ತಿವೆ.

2011–12ನೇ ಸಾಲಿನಲ್ಲಿ 220 ಸೋಂಕಿತರು ಜಿಲ್ಲೆಯಲ್ಲಿದ್ದರು. ನಿರಂತ ರವಾಗಿ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡಿವೆ. ಪ್ರಸಕ್ತ ಸಾಲಿನಲ್ಲಿ ಕೇವಲ 62 ಮಂದಿ ಸೋಂಕಿತರಷ್ಟೇ ಇದ್ದಾರೆ. ಇದು ತುಸು ಸಮಾಧಾನ ತರಿಸಿದೆ.

ಆತಂಕದ ವಿಷಯ ಎಂದರೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಹೋಲಿಸಿದರೆ ವಿರಾಜಪೇಟೆ ತಾಲ್ಲೂಕಿನಲ್ಲಿ ಮಾತ್ರ 2011–12ನೇ ಸಾಲಿನಿಂದಲೂ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ.

2011–12ನೇ ಸಾಲಿನಿಂದ ಇಲ್ಲಿಯ ವರೆಗೆ ಜಿಲ್ಲೆಯಲ್ಲಿ ಕಂಡು ಬಂದ 1,422 ಎಚ್‌ಐವಿ ಸೋಂಕಿತರ ಪೈಕಿ 682 ಮಂದಿ ವಿರಾಜಪೇಟೆಯಲ್ಲೆ ಇದ್ದಾರೆ. ಉಳಿದಂತೆ, ಸೋಮವಾರಪೇಟೆಯಲ್ಲಿ 460 ಹಾಗೂ ಮಡಿಕೇರಿಯಲ್ಲಿ 280 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಪ್ರಸಕ್ತ ಸಾಲಿನಲ್ಲೂ ಪತ್ತೆಯಾಗಿ ರುವ 62 ಮಂದಿಯ ಪೈಕಿ 25 ಮಂದಿ ವಿರಾಜಪೇಟೆಯಲ್ಲೇ ಇದ್ದಾರೆ. ಮಡಿಕೇರಿಯಲ್ಲಿ 17, ಸೋಮವಾರ ಪೇಟೆಯಲ್ಲಿ 10 ಹಾಗೂ ಇತರೆ ಜಿಲ್ಲೆಯ 10 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಜಿಲ್ಲೆಯಲ್ಲಿ 44 ಐಸಿಟಿಸಿ ಕೇಂದ್ರ ಗಳಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ 1 ಎಆರ್‌ಟಿ ಕೇಂದ್ರ, 4 ಲಿಂಕ್‌ ಎಆರ್‌ಟಿ ಕೇಂದ್ರ, 7 ಐಐಡಿಗಳಿವೆ. ಆಶೋದಯ ಸಮಿತಿ, ಓಡಿಪಿ, ಸ್ನೇಹಾಶ್ರಯ ಸಮಿತಿ ಹಾಗೂ ಸರ್ವೋದಯ ಎಚ್‌ಐವಿ ಬಾಧಿತರ ಸಂಘವು ಎಚ್‌ಐವಿ ಪೀಡಿತರ ಶ್ರೇಯಕ್ಕಾಗಿ ಕೆಲಸ ಮಾಡುತ್ತಿವೆ.

‘ಎಚ್‌ಐವಿ ಸೋಂಕಿತರನ್ನು ಬಹಿಷ್ಕರಿಸಬಾರದು. ಯಾವುದೇ ವಿಚಾರದಲ್ಲೂ ಅವರಿಗೆ ತಾರತಮ್ಯ ಮಾಡಬಾರದು. ಇತರರಂತೆ ಅವರನ್ನೂ ಸಮಾನ ಗೌರವದಿಂದ ಕಾಣಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ತಿಳಿಸಿದ್ದಾರೆ.

ಇಂದು ಕಾರ್ಯಕ್ರಮ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಕೊಡಗು ವೈದ್ಯಕೀಯ ವಿಜ್ಞಾನ ಗಳ ಸಂಸ್ಥೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಕೊಡಗು, ಮಡಿಕೇರಿ ಲಯನ್ಸ್ ಸಂಸ್ಥೆ, ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆ, ಸರ್ಕಾರಿ ಪದವಿಪೂರ್ವ ಕಾಲೇಜು, ಎಫ್‍ಎಂಕೆಎಂಸಿ ಕಾಲೇಜು, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಸರ್ಕಾರಿ ಮಹಿಳಾ ಕಾಲೇಜು, ಓಡಿಪಿ-ಸ್ನೇಹಾಶ್ರಯ ಸಮಿತಿ ವತಿಯಿಂದ ಡಿ. 1ರಂದು ಬೆಳಿಗ್ಗೆ 11 ಗಂಟೆಗೆ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ‘ಸಮಾನಗೊಳಿಸು’ ನಮ್ಮೆಲ್ಲರ ಪ್ರಾಮಾಣಿಕ ಪ್ರಯತ್ನದಿಂದ ಅಸ ಮಾನತೆಗಳನ್ನು ಪರಿಹರಿಸೋಣ ಮತ್ತು ಏಡ್ಸ್‌ನ್ನು ಕೊನೆಗಾಣಿಸೋಣ ಎಂಬ ಘೋಷವಾಕ್ಯದೊಂದಿಗೆ ವಿಶ್ವ ಏಡ್ಸ್ ದಿನದ ಸಭಾ ಕಾರ್ಯಕ್ರಮ ನಡೆಯಲಿದೆ.

ಇದಕ್ಕೂ ಮುನ್ನ ಬೆಳಿಗ್ಗೆ 9.30 ಗಂಟೆಗೆ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಡೆಯುವ ಜಾಥಾಕ್ಕೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಭೃಂಗೇಶ್ ಅವರು ಚಾಲನೆ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT