ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನ 30 ಉದ್ಘಾಟನೆ, 16 ಶಂಕುಸ್ಥಾಪನೆ!

ಮಾರ್ಚ್ 18ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಡಗು ಜಿಲ್ಲೆಗೆ ಭೇಟಿ
Last Updated 16 ಮಾರ್ಚ್ 2023, 5:12 IST
ಅಕ್ಷರ ಗಾತ್ರ

ಮಡಿಕೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾರ್ಚ್ 18ರಂದು ಇಲ್ಲಿನ ಗಾಂಧಿಮೈದಾನದಲ್ಲಿ ನಡೆಯಲಿರುವ ಫಲಾನುಭವಿಗಳ ಸಮಾವೇಶದಲ್ಲಿ 30ಕ್ಕೂ ಅಧಿಕ ಕಾಮಗಾರಿಗಳನ್ನು ಉದ್ಘಾಟಿಸಲಿದ್ದು, 16 ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

‘ವಿರಾಜಪೇಟೆ ಮತ್ತು ಸೋಮವಾರಪೇಟೆಯಲ್ಲಿ ₹ 73 ಕೋಟಿ ಮೊತ್ತದ ಕುಡಿಯುವ ನೀರು ಕಾಮಗಾರಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಮೂಲಕ ಆ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಪ್ರಸಕ್ತ ವಿಧಾನಸಭಾ ಅವಧಿಯಲ್ಲಿ 5.17 ಲಕ್ಷ ಫಲಾನುಭವಿಗಳು ಜಿಲ್ಲೆಯಲ್ಲಿದ್ದು, ಆ ಪೈಕಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ 51 ಸಾವಿರ ಮಂದಿ ಇದ್ದಾರೆ. ಇವರಲ್ಲಿ ಕೆಲವರ ಜತೆ ಅಂದು ಅವರು ಸಂವಾದ ನಡೆಸಲಿದ್ದಾರೆ’ ಎಂದು ಅವರು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇದಕ್ಕೂ ಮುನ್ನ ಸಮ್ಮೇಳನದ ಸಿದ್ಧತೆ ಕುರಿತು ಸಭೆ ನಡೆಸಿದ ಅವರು, ಎಲ್ಲ ಹಂತದ ಅಧಿಕಾರಿಗಳೂ ಸಮ್ಮೇಳನದ ಯಶಸ್ವಿಗೆ ಶ್ರಮಿಸಬೇಕು ಎಂದು ಸೂಚಿಸಿದರು.

‘ಫಲಾನುಭವಿಗಳ ಸಮ್ಮೇಳನ ಜೊತೆಗೆ ನಗರದಲ್ಲಿ ನಿರ್ಮಾಣವಾಗಿರುವ ಗಾಂಧಿ ಭವನ, ಗ್ರೇಟರ್ ರಾಜಸೀಟ್ ಉದ್ಯಾನ ಸೇರಿದಂತೆ ಹಲವು ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಸಹಕಾರ, ಪರಿಶಿಷ್ಟ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ, ಕಾರ್ಮಿಕ, ಅಲ್ಪಸಂಖ್ಯಾತರ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಯುವ ಸಬಲೀಕರಣ ಮತ್ತು ಕ್ರೀಡೆ, ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮ, ಹಿಂದುಳಿದ ವರ್ಗಗಳ ಕಲ್ಯಾಣ, ಕಂದಾಯ, ಸಾರ್ವಜನಿಕ ಶಿಕ್ಷಣ, ಪೌರಾಡಳಿತ, ಸೆಸ್ಕ್, ನಗರ ಕುಡಿಯುವ ನೀರು ಪೂರೈಕೆ ಹೀಗೆ ವಿವಿಧ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಸೌಲಭ್ಯ ಪಡೆದಿರುವ ಹಾಗೂ ಪಡೆಯುವ ಫಲಾನುಭವಿಗಳನ್ನು ಆಹ್ವಾನಿಸುವಂತೆಯೂ ಹೇಳಿದರು.

ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಕೆ.ರಾಮರಾಜನ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT