ಬುಧವಾರ, ಡಿಸೆಂಬರ್ 11, 2019
25 °C
ಪರಿವರ್ತನಾ ವೇದಿಕೆ ವತಿಯಿಂದ ನಡೆದ ವಿಚಾರ ಸಂಕಿರಣದಲ್ಲಿ ಬಿ.ಗೋಪಾಲ್ ಕರೆ

ಸಂವಿಧಾನ ತಿರುಚುವ ಷಡ್ಯಂತ್ರ: ಪ್ರತಿಯೊಬ್ಬರೂ ಧ್ವನಿ ಎತ್ತಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಭಾರತದ ಸಂವಿಧಾನವನ್ನು ತಿರುಚುವ ಷಡ್ಯಂತ್ರಗಳು ದೇಶದಲ್ಲಿ ಕೆಲವು ಪಕ್ಷ, ಸಂಘಟನೆಗಳಿಂದ ನಡೆಯುತ್ತಿದೆ. ಇದರ ವಿರುದ್ಧ ಪ್ರತಿಯೊಬ್ಬರೂ ಧ್ವನಿ ಎತ್ತುವ ಅನಿವಾರ್ಯತೆ ಎದುರಾಗಿದೆ ಎಂದು ಪ್ರಜಾ ಪರಿವರ್ತನಾ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಗೋಪಾಲ್ ಆತಂಕ ವ್ಯಕ್ತ ಪಡಿಸಿದರು.

ನಗರದ ಬಾಲಭವನ ಸಭಾಂಗಣದಲ್ಲಿ ಪರಿವರ್ತನಾ ವೇದಿಕೆ ವತಿಯಿಂದ ಭಾನುವಾರ ಸ್ವಾತಂತ್ರ್ಯ ಭಾರತದಲ್ಲಿ ಬಹುಜನರು ಅವಲಂಬಿತರು ಏಕೆ? ಎಂಬ ವಿಷಯದ ಬಗ್ಗೆ ನಡೆದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಂವಿಧಾನ ದೇಶದ ಆತ್ಮವಿದ್ದಂತೆ. ಸರ್ವರಿಗೂ ಸಮಬಾಳು, ಸಮಪಾಲು ಸಂವಿಧಾನದ ಮೂಲ ತತ್ವವಾಗಿದೆ. ಎಲ್ಲರೂ ಪಕ್ಷ, ಧರ್ಮ, ಜಾತಿ, ಲಿಂಗ ಬೇದವಿಲ್ಲದೆ ಸಂಘಟಿತರಾಗಬೇಕು ಎಂದು ಕರೆ ನೀಡಿದರು.

ದೇಶದಲ್ಲಿ ಜಾತೀಯತೆ ನಿರ್ಮೂಲನೆಯಾಗಿಲ್ಲ. ಆರ್ಥಿಕ ಸಮಾನತೆ ದೊರೆತಿಲ್ಲ. ಆದರೆ ರಾಜಕೀಯ ಧ್ರುವೀಕರಣವಾಗುತ್ತಿದೆ. ಪ್ರಸಕ್ತ ರಾಜಕೀಯ ಸ್ಥಿತಿ ಒಡೆದು ಆಳುವ ಸಂದೇಶ ನೀಡುತ್ತಿದೆ. ಈ ದೌರ್ಬಲ್ಯದಿಂದ ಸಶಕ್ತ ಭಾರತ ಕಟ್ಟಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಸ್ವಾತಂತ್ರ್ಯ ಬಂದು 70 ದಶಕಕಳೆದರೂ ದೇಶದಲ್ಲಿ ಬಡಜನರು, ಹಿಂದುಳಿದ ವರ್ಗದವರು, ಕೂಲಿ ಕಾರ್ಮಿಕರು ತಮ್ಮ ಜೀವನದಲ್ಲಿ ಏಳಿಗೆ ಸಾಧಿಸಲು ಸಾಧ್ಯವಾಗುತ್ತಿಲ್ಲ. ದೇಶದಲ್ಲಿ ಸಂಪೂರ್ಣವಾಗಿ ಬಡತನ ಇನ್ನೂ ನಿರ್ಮೂಲನೆ ಆಗಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ಕೂಲಿ ಕಾರ್ಮಿಕರ ಜೀವನ ಕೊಡಗಿನಲ್ಲೆ ದುಸ್ತರವಾಗಿದೆ. ಪ್ರಜ್ಞಾವಂತ ನಾಗರಿಕ ಸಮಾಜ ಬಡಜನರ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಚಿಂತಿಸಿ ಪರಿಹಾರದ ಮಾರ್ಗವನ್ನು ಕಂಡುಕೊಳ್ಳಬೇಕಿದೆ ಎಂದು ಕೋರಿದರು.

ಬಡವರ ಪರವಾಗಿ ಜನ ಪ್ರತಿನಿಧಿಗಳು ಅಧಿವೇಶನದಲ್ಲಿ ಮಾತನಾಡುವವರೇ ಇಲ್ಲ. ದಲಿತರು, ಶೋಷಿತರ ಮೇಲೆ ಉಳ್ಳವರು ದೌರ್ಜನ್ಯ ನಡೆಸುತ್ತಿದ್ದಾರೆ. ಬಡವರಿಗಾಗಿ ಹಲವಾರು ಕಾಯ್ದೆಗಳಿದ್ದು, ಯಾವುದು ಕೂಡ ಸಮರ್ಪಕವಾಗಿ ಜಾರಿಗೆ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ಉಪ ಚುನಾವಣಾ ಕಣದಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿಗಳು, ನಾಯಕರು ಭರವಸೆಗಳ ನುಡಿಮುತ್ತುಗಳನ್ನು ಮನೆಮನೆಗೆ ತಲುಪಿಸುವ ಕಾರ್ಯ ಚುರುಕ್ಕಾಗಿ ನಡೆಯುತ್ತಿದೆ. ಆದರೆ ಯಾರೊಬ್ಬರೂ ಕ್ಷೇತ್ರದ ಅಭಿವೃದ್ಧಿ, ನನೆಗುದಿಗೆ ಬಿದ್ದಿರುವ ಯೋಜನೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ವೇದಿಕೆಯ ಪದಾಧಿಕಾರಿ ಡಾ. ಪ್ರೊ.ವಿ.ಷಣ್ಮುಗಂ ಮಾತನಾಡಿ, ಭಾರತ ಸಂವಿಧಾನದ ಮೂಲಭೂತ ಕಾನೂನುಗಳಿಗೆ ಅಗೌರವ ತೋರುವ ಮತ್ತು ಚ್ಯುತಿ ತರುವಂತಹ ಮತ್ತು ಸಂವಿಧಾನದ ಆಶಯಗಳನ್ನು ದಿಕ್ಕರಿಸುವಂತಹ ಕಾರ್ಯದಲ್ಲಿ ತೊಡಗಿರುವುದು ವಿಷಾದಕರ ಸಂಗತಿ ಎಂದರು.

ಮತವನ್ನು ತಾಯಿಯಂತೆ ಕಾಪಾಡಬೇಕು ಎನ್ನುತ್ತಾರೆ. ಆದರೆ ಹಿಂದಿನ ಕಾಲದಲ್ಲಿ ಉಪ್ಪಿಟ್ಟು, ಚಿತ್ರಾನ್ನ, ಸಾರಾಯಿಗಾಗಿ ಮತವನ್ನು ಮಾರಾಟ ಮಾಡುತ್ತಿದ್ದರು. ಈಗ ಹಣಕ್ಕೆ ಮತವನ್ನು ಮಾರಿಕೊಳ್ಳುತ್ತಿದ್ದಾರೆ. ಬಡವರ ಪರವಾಗಿ ಹೋರಾಡುವವರು ಯಾರೂ ಕೂಡ ಮತ ಹಾಕಲ್ಲ ಎಂದು ವಿಷಾದಿಸಿದರು.

ಚುನಾವಣೆ ಸಂದರ್ಭ ಮತ ಎನ್ನುವುದು ತುಂಬಾ ಮುಖ್ಯ. ಯಾರೂ ಸಹ ತಮ್ಮ ಮತ ದುರ್ಬಳಕೆ ಮಾಡಿಕೊಳ್ಳಬಾರದು. ಪ್ರಜಾಪ್ರಭುತ್ವದ ಅಮೂಲ್ಯವಾದ ಮತವನ್ನು ಹಣ ಪಡೆದು ಮತವನ್ನು ನೀಡಬೇಡಿ. ಒಂದು ವೇಳೆ ನಾವು ಹಣ ಪಡೆದು ಮತ ನೀಡಿದರೆ ನಮ್ಮ ಮತಕ್ಕೆ ಬೆಲೆ ಇರುವುದಿಲ್ಲ ಎಂದು ಹೇಳಿದರು.

ದೇಶದ ಬಹು ಸಂಖ್ಯೆ ಜನರು ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದಿದ್ದು, ಐತಿಹಾಸಿಕವಾಗಿ ಶೋಷಣೆಗೆ ಒಳಪಟ್ಟಿದ್ದಾರೆ. ಸಮಾಜದಲ್ಲಿ ಗೌರವಯುತವಾಗಿ ಬದುಕಲು ಕನಿಷ್ಠ ಅಗತ್ಯತೆಗಳು ಬೇಕು. ಆದರೆ ಅದನ್ನೇ ಸಾಮಾಜಿಕ, ಆರ್ಥಿಕ, ರಾಜಕೀಯ ಕ್ಷೇತ್ರದಲ್ಲಿ ನಿರಾಕರಣೆ ಮಾಡಲಾಗಿದೆ ಎಂದು ದೂರಿದರು.

ವೇದಿಕೆಯ ಜಿಲ್ಲಾಧ್ಯಕ್ಷ ಎಚ್.ಎಸ್ ಮುತ್ತಪ್ಪ ಮಾತನಾಡಿ, ಪ್ರತಿಯೊಬ್ಬ ನಾಗರಿಕನೂ ಸಂವಿಧಾನದ ತತ್ವ, ಸಿದ್ಧಾಂತ ಮತ್ತು ಆಶೋತ್ತರಗಳ ಅಡಿಯಲ್ಲಿ ಬದುಕುತ್ತಿದ್ದೇವೆ. ಆದರೆ ಅದರಲ್ಲಿರುವ ಆಶಯದ ಅನುಗುಣವಾಗಿ ಬದುಕುತ್ತಿಲ್ಲ. ಅಧಿಕಾರದಾಹಕ್ಕಾಗಿ ಸಂವಿಧಾನದ ವಿಧಿಗಳನ್ನು ಅರ್ಥೈಸುವಲ್ಲಿ ಕೆಲವರು ಸೋತಿದ್ದಾರೆ. ಕಾನೂನಿನ ದುರುಪಯೋಗವನ್ನು ಕಾಣುತ್ತಿದ್ದೇವೆ ಎಂದು ವಿಷಾದಿಸಿದರು.

ವೇದಿಕೆಯ ಪ್ರಧಾನ ಕಾರ್ಯದರ್ಶಿ ಗಣೇಶ್, ಸಂಘಟನಾ ಕಾರ್ಯದರ್ಶಿ ಹೊನ್ನಪ್ಪ, ಪ್ರಧಾನ ಕಾರ್ಯದರ್ಶಿ ಶಿವಪ್ಪ, ಸಹ ಕಾರ್ಯದರ್ಶಿ ಸತೀಶ್ ಹಾಜರಿದ್ದರು

ಪ್ರತಿಕ್ರಿಯಿಸಿ (+)