ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೋಮವಾರಪೇಟೆ | ಕುಸಿಯುವ ಭೀತಿಯಲ್ಲಿದೆ ಕಬ್ಬಿಣದ ಸೇತುವೆ

ಇಂದಿಗೂ ಪ್ರಾರಂಭವಾಗದ ನೂತನ ಸೇತುವೆ ಕಾಮಗಾರಿ,
Published 3 ಜುಲೈ 2024, 6:31 IST
Last Updated 3 ಜುಲೈ 2024, 6:31 IST
ಅಕ್ಷರ ಗಾತ್ರ

ಸೋಮವಾರಪೇಟೆ: ಸಮೀಪದ ಐಗೂರು ಗ್ರಾಮದ ಚೋರನ ಹೊಳೆಗೆ ಅಡ್ಡಲಾಗಿ ಬ್ರಿಟೀಷರ ಕಾಲದಲ್ಲಿ ನಿರ್ಮಿಸಿರುವ ಕಬ್ಬಿಣ ಸೇತುವೆಯು ಕುಸಿಯುವ ಭೀತಿ ಇದ್ದು, ಇಂದಿಗೂ ನೂತನ ಸೇತುವೆ ನಿರ್ಮಾಣವಾಗಿಲ್ಲ.

ತಾಲ್ಲೂಕಿನ ಮಡಿಕೇರಿ-ಕೊಡ್ಲಿಪೇಟೆ ರಾಜ್ಯ ಹೆದ್ದಾರಿಯನ್ನು 1837ರಲ್ಲಿ ಬ್ರಿಟಿಷರು ಆಡಳಿತ ನಡೆಸುತ್ತಿದ್ದ ಲಾರ್ಡ್ ಲೂಯಿಸ್ ಕಾಲದಲ್ಲಿ ನಿರ್ಮಿಸಲಾಗಿದೆ. ರಸ್ತೆಯಲ್ಲಿ ಸಾಕಷ್ಟು ಬೃಹತ್ ವಾಹನಗಳೂ ಸೇರಿದಂತೆ ಶಾಲಾ ಬಸ್ ಮತ್ತು ಸಾರಿಗೆ ಬಸ್‌ಗಳು ಸಂಚರಿಸುತ್ತಿರುವ ಪ್ರಮುಖ ರಸ್ತೆಯಾಗಿದ್ದು, ಅಪಾಯದ ಸ್ಥಿತಿಯಲ್ಲಿದೆ.

ಸೇತುವ ತೀರಾ ಕಿರಿದಾಗಿದ್ದು, ಕೇವಲ ಒಂದು ವಾಹನ ಸಂಚಾರಕ್ಕೆ ಮಾತ್ರವೇ ಅವಕಾಶ ಇದೆ. ಎದುರಿನಿಂದ ಬರುವ ವಾಹನಗಳು ಅಲ್ಲಿಯೇ ನಿಂತು ಕಾಯುವಂತಹ ಪರಿಸ್ಥಿತಿ ಇದೆ. ಕಳೆದ ಕೆಲವು ವರ್ಷಗಳ ಹಿಂದೆ ಎಂಜಿನಿಯರ್‌ ಒಬ್ಬರು ಸೇತುವೆಯ ಸ್ಥಿತಿಗತಿಗಳನ್ನು ಪರಿಶೀಲಿಸಿ, ದುಸ್ಥಿತಿಯಲ್ಲಿರುವ ಸೇತುವೆಯ ಮೇಲೆ ಬೃಹತ್ ವಾಹನಗಳು ಸಂಚರಿಸಿದರೆ, ಯಾವಾಗ ಬೇಕಾದರೂ ಅಪಾಯ ಎದುರಾಗಬಹುದು ಎಂದು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದರು.

ಸೇತುವೆ ಶಿಥಿಲಗೊಂಡ ನಂತರ ಸೇತುವೆ ಮುಂಭಾಗದಲ್ಲಿ ಬೃಹತ್ ವಾಹನಗಳ ಸಂಚಾರ ನಿಷೇಧಿಸಿದ್ದರು. ಆದರೆ, ಸೇತುವೆ ನಿರ್ಮಾಣಕ್ಕೆ ಮುಂದಾಗಿರಲಿಲ್ಲ. ಇಂದಿಗೂ ಸುಮಾರು 40 ಟನ್ ತೂಕದ ಟಿಂಬರ್ ತುಂಬಿದ ಲಾರಿಗಳು ಇಂದು ಸಂಚರಿಸುತ್ತಿವೆ. ಆದರೂ, ಇದನ್ನು ತಡೆಯಲು ಇಲಾಖಾಧಿಕಾರಿಗಳು ಮುಂದಾಗಿಲ್ಲ.

ಈ ರಸ್ತೆ ಹಾಸನದಿಂದ ಮಡಿಕೇರಿಗೆ ತೆರಳುವ ಮುಖ್ಯ ರಸ್ತೆಯಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಲ್ಲಿ, ವಾಹನಗಳು ಸುತ್ತಿ ಬಳಸಿಕೊಂಡು ಹೋಗಬೇಕಿದೆ. ಕೇವಲ ಏಕಮುಖ ಸಂಚಾರದ ಸೇತುವೆ ಇದಾಗಿದ್ದು ಬಸ್ಸು, ಲಾರಿ ಚಲಿಸುವ ಸಂದರ್ಭ ಪಾದಚಾರಿಗಳು ನಡೆಯಲು ಕೂಡ ಜಾಗವಿರುವುದಿಲ್ಲ. ತಿರುವಿನಲ್ಲಿ ಈ ಸೇತುವೆ ಇರುವುದರಿಂದ ಸಾಕಷ್ಟು ಅಪಘಾತಗಳು ನಡೆದಿವೆ. ಕೂಡಲೇ ಸೇತುವೆಯನ್ನು ತೆರವುಗೊಳಿಸಿ ನೂತನ ಸೇತುವೆ ನಿರ್ಮಾಣ ಮಾಡಬೇಕೆಂದು ಐಗೂರು ಗ್ರಾಮಸ್ಥರು ಒತ್ತಾಯಿಸಿದರು.

ಸೇತುವೆಯ ಕೆಳಭಾಗ ಶಿಥಿಲಾವಸ್ಥೆಗೆ ತಲುಪಿ ಹಲವು ವರ್ಷಗಳೇ ಕೆಳೆದಿವೆ. ಘನ ವಾಹನಗಳು ಬಸ್ಸುಗಳು ಚಲಿಸುವಾಗ ದೊಡ್ಡ ಮಟ್ಟದಲ್ಲಿ ಅಲುಗಾಡುತ್ತಿದೆ. 2018ರಿಂದ ಭಾರಿ ಮಳೆಯಾಗುತ್ತಿದ್ದು, ಚೋರನ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಾಗಿ ಮೇಲ್ಮಟ್ಟದವರೆಗೆ ಬರುತ್ತದೆ. ಸೇತುವೆಯ ಅಡಿಭಾಗ ಶಿಥಿಲಗೊಂಡಿರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎನಿಸಿದೆ.

ಶಿಥಿಲವಾಗಿರುವ ಸೇತುವೆಗೆ ಅಳವಡಿಸಿರುವ ಕಬ್ಬಿಣಕ್ಕೆ ಅಲ್ಲಲ್ಲಿ ವೆಲ್ಡ್ ಮಾಡಿ, ಬಣ್ಣ ಬಳಿಯಲಾಗಿತ್ತು. ಒಂದು ತಿಂಗಳಿನಲ್ಲಿ ಸೇತುವೆ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ಹೇಳಿ 6 ತಿಂಗಳು ಕಳೆಯುತ್ತಾ ಬಂದರೂ, ಇನ್ನು ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ.

ಸೇತುವೆ ಮೇಲೆಗುಂಡಿ ಬಿದ್ದಲ್ಲಿ ಸೀಮೆಂಟ್ ಪ್ಲಾಸ್ಟರಿಂಗ್ ಮಾಡಿ ತಾತ್ಕಾಲಿಕವಾಗಿ ಸರಿಪಡಿಸಲಾಗಿತ್ತು. ಆದರೆ, ಮತ್ತೆ ಅದು ಬಿರುಕು ಬಿಡುತ್ತಿದೆ. ಭಾರಿ ಮಳೆಯಾದಲ್ಲಿ ಅಪಾಯ ಎದುರಾಗಬಹುದಾಗಿದ್ದು, ಕೂಡಲೇ ನೂತನ ಸೇತುವೆ ನಿರ್ಮಾಣಕ್ಕೆ ಇಲಾಖೆ ಮುಂದಾಗಬೇಕಿದೆ ಎಂದು ಐಗೂರಿನ ನವೀನ್ ಒತ್ತಾಯಿಸಿದರು.

ಈ ಬಗ್ಗೆ ಸೇತುವೆ ಉಸ್ತುವಾರಿ ವಹಿಸಿಕೊಂಡಿರುವ ಎಂಜಿನಿಯರ್ ಎಂ.ಎಚ್.ವಿಜಯಕುಮಾರ್ ಮಾತನಾಡಿ, ‘ನೂತನ ಸೇತುವೆ ಕಾಮಗಾರಿಗೆ ₹ 10 ಕೋಟಿ ವೆಚ್ಚದ ಕ್ರಿಯಾ ಯೋಜನೆ ತಯಾರಿಸಿ, ಟೆಂಡರ್ ಕರೆಯಲಾಗಿತ್ತು. ಆದರೆ, ಕೇವಲ ಒಬ್ಬರು ಮಾತ್ರ ಟೆಂಡರ್‌ನಲ್ಲಿ ಭಾಗವಹಿಸಿದ್ದರಿಂದ ಟೆಂಡರ್ ರದ್ದಾಗಿದೆ. ಮತ್ತೆ 2ನೇ ಬಾರಿ ಟೆಂಡರ್ ಕರೆಯಲು ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಸದ್ಯದಲ್ಲಿಯೇ ಸೇತುವೆ ಕಾಮಗಾರಿ ಪ್ರಾರಂಭಿಸಲಾಗುವುದು’ ಎಂದು ತಿಳಿಸಿದರು.

ಸೋಮವಾರಪೇಟೆ ಸಮೀಪದ ಐಗೂರು ಗ್ರಾಮದ ಕಬ್ಬಿಣ ಸೇತುವೆ ಶಿಥಿಲಾವಸ್ಥೆಗೆ ತಲುಪಿದ್ದು ತುಕ್ಕು ಹಿಡಿ ಕಬ್ಬಿಣವನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ಕಿಳೆದ 6 ತಿಂಗಳ ಹಿಂದೆ ವೆಲ್ಡ್ ಮಾಡಿಸಿದ್ದ ಚಿತ್ರ.
ಸೋಮವಾರಪೇಟೆ ಸಮೀಪದ ಐಗೂರು ಗ್ರಾಮದ ಕಬ್ಬಿಣ ಸೇತುವೆ ಶಿಥಿಲಾವಸ್ಥೆಗೆ ತಲುಪಿದ್ದು ತುಕ್ಕು ಹಿಡಿ ಕಬ್ಬಿಣವನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ಕಿಳೆದ 6 ತಿಂಗಳ ಹಿಂದೆ ವೆಲ್ಡ್ ಮಾಡಿಸಿದ್ದ ಚಿತ್ರ.

₹ 10 ಕೋಟಿ ವೆಚ್ಚದ ಕ್ರಿಯಾ ಯೋಜನೆ ತಯಾರು ಟೆಂಡರ್ ಕರೆದಾಗ ಬಂದವರು ಒಬ್ಬರೇ ಏಕವ್ಯಕ್ತಿ ಭಾಗವಹಿಸಿದ್ದರಿಂದ ರದ್ದಾದ ಟೆಂಡರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT