ಭೀಕರ ದುರಂತಕ್ಕೆ ಸಾಕ್ಷಿಯಾದ ಕಾವೇರಿ ನಾಡು

7
ಪ್ರಕೃತಿ ಪ್ರಿಯರ ಊರಿನಲ್ಲಿ ಬದುಕು ಬೀದಿಗೆ ತಂದ ವರುಣ

ಭೀಕರ ದುರಂತಕ್ಕೆ ಸಾಕ್ಷಿಯಾದ ಕಾವೇರಿ ನಾಡು

Published:
Updated:
Deccan Herald

ಮಡಿಕೇರಿ: ಜೀವನದಿ ಕಾವೇರಿಯ ಉಗಮ ಸ್ಥಳ, ಪ್ರಕೃತಿ ಪ್ರಿಯರ ಕೊಡಗು ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಸುರಿದ ಭಾರಿ ಮಳೆಗೆ ಜನರು ಅಕ್ಷರಶಃ ನಲುಗಿಹೋಗಿದ್ದಾರೆ. ಬೆಟ್ಟ ಗುಡ್ಡಗಳು ಕುಸಿಯುತ್ತಿವೆ. ಇನ್ನೊಂದೆಡೆ ವಾಸದ ಮನೆಗಳೂ ಕಣ್ಮುಂದೆಯೇ ಕುಸಿದು ಬೀಳುತ್ತಿರುವುದು ಮಳೆ ಸೃಷ್ಟಿಸುತ್ತಿರುವ ಅನಾಹುತಕ್ಕೆ ಸಾಕ್ಷಿಯಾಗಿದೆ.

ಬಹುತೇಕ ಕಡೆಗಳಲ್ಲಿ ದೂರವಾಣಿ ಸಂಪರ್ಕ ಕಡಿತಗೊಂಡಿದೆ. ಬಿಎಸ್‌ಎನ್‌ಎಲ್‌ ಹೊರತುಪಡಿಸಿ ಉಳಿದ ಯಾವ ನೆಟ್‌ವರ್ಕ್‌ ಸಹ ಸಿಗುತ್ತಿಲ್ಲ. ಸ್ಥಿರ ದೂರವಾಣಿಗಳು ಸ್ಥಗಿತಗೊಂಡಿವೆ. ಸಾವಿರಾರು ವಿದ್ಯುತ್‌ ಕಂಬಗಳು ಬಿದ್ದಿದ್ದು, ಗ್ರಾಮಗಳು ಕಾರ್ಗತ್ತಲಲ್ಲಿ ಮುಳುಗಿವೆ. ಜನರು ತಮ್ಮ ಸಂಕಷ್ಟ ಹೇಳಿಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ಪ್ರಕೃತಿ, ನದಿ, ಗಿಡ ಮರಗಳನ್ನು ಪ್ರೀತಿಸುವ ಊರಿನಲ್ಲಿ ಮಳೆಯೇ ಶಾಪವಾಗಿ ಪರಿಣಮಿಸಿದ್ದು ದುರಂತವಾಗಿದೆ. ಮುಂಗಾರು ಆರಂಭವಾದ ಬಳಿಕ ಜಿಲ್ಲೆಯಲ್ಲಿ ಸೂರ್ಯನ ದರ್ಶನವಾಗಿದ್ದೆ ಕಡಿಮೆ. ವಿಪರೀತ ಮಳೆ ಸುರಿಯಿತು. ಇದರಿಂದ ಅಂತರ್ಜಲ ಹೆಚ್ಚಾಗಿ ಬೆಟ್ಟಗುಡ್ಡಗಳು ಕುಸಿಯುತ್ತಿವೆ. ಕಾವೇರಿ, ಲಕ್ಷ್ಮಣತೀರ್ಥ, ಹಟ್ಟಿಹೊಳೆಯಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ನದಿಯಂಚಿನ ಗ್ರಾಮಗಳನ್ನೇ ಅಪೋಶನ ಮಾಡಿದೆ.

ಕ್ಷಣ ಕ್ಷಣಕ್ಕೂ ನದಿ, ಹಳ್ಳಕೊಳ್ಳಗಳು ಉಕ್ಕಿ ಹರಿದವು. ಮಳೆ ಕಡಿಮೆಯಾಗಿ ಪ್ರವಾಹ ಇಳಿಯಲಿದೆ ಎಂದು ಭಾವಿಸಿ ಮನೆಯಲ್ಲಿದ್ದವರಿಗೆ ಹೊರಗೆ ಬರಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ನಾಪೋಕ್ಲು, ಭಾಗಮಂಡಲ, ಕೊಟ್ಟಂಮುಡಿ, ಮುಕ್ಕೊಡ್ಲು, ಹಾಲೇರಿ, ನೆಲ್ಯಹುದಿಕೇರಿ, ಕರಡಿಗೋಡು ಭಾಗದ ಗ್ರಾಮಗಳು ಪ್ರವಾಹಕ್ಕೆ ಸಿಲುಕಿದ್ದು, ಜನರು ಇನ್ನೂ ಹೊರಬರಲು ಸಾಧ್ಯವಾಗಿಲ್ಲ.

ಹಾಲೇರಿ ಆಸುಪಾಸಿನ 2 ಸಾವಿರ ಜನರು ಆಶ್ರಯ ಕಳೆದುಕೊಂಡಿದ್ದಾರೆ. ಎನ್‌ಡಿಆರ್‌ಎಫ್‌ ಸಿಬ್ಬಂದಿ ರಕ್ಷಣೆಗೆ ಇಳಿದಿದ್ದು, ಕೆಲವರನ್ನು ಮಾತ್ರ ದಡ ಸೇರಿಸಿದ್ದಾರೆ. ಇನ್ನೂ ಹಲವರ ಸ್ಥಿತಿ ಏನಾಗಿದೆ ಎಂಬುದು ಹೊರ ಜಗತ್ತಿಗೆ ತಿಳಿಯುತ್ತಿಲ್ಲ. ಇಡೀ ಜಿಲ್ಲೆಯೇ ಸಂಕಷ್ಟದಲ್ಲಿ ಮುಳುಗಿದೆ. ಅದರ ನಡುವೆಯೂ ಕೆಲವು ಸಂಘ– ಸಂಸ್ಥೆಗಳು ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿವೆ. ಮತ್ತೊಂದೆಡೆ ವರದಿಗೆ ತೆರಳಿದ್ದ ಪತ್ರಕರ್ತರು ಮಕ್ಕಂದೂರಿನಲ್ಲಿ ಮಣ್ಣಿನ ಅಡಿ ಸಿಲುಕಿದ್ದವರನ್ನು ರಾತ್ರಿ ರಕ್ಷಿಸಿ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದಾರೆ.

ಆವರಿಸಿದ ಶೂನ್ಯಭಾವ: ಕೊಡಗಿನಲ್ಲಿ ಮಳೆ ಆರ್ಭಟ ಹೊಸದಲ್ಲ. ಆದರೆ, ಈ ಬಾರಿ ಅದು ಸೃಷ್ಟಿಸುತ್ತಿರುವ ಅನಾಹುತದಿಂದ ಶೂನ್ಯಭಾವ ಆವರಿಸಿದೆ. ಸಾವಿರಾರು ಸಂಖ್ಯೆಯಲ್ಲಿ ಜನರು ಬೀದಿಗೆ ಬಿದ್ದಿದ್ದಾರೆ. ಜಿಲ್ಲೆಯಾದ್ಯಂತ 10 ಗಂಜಿ ಕೇಂದ್ರ ತೆರೆಯಲಾಗಿದೆ. ಸಂತ್ರಸ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ನಿವೃತ್ತರ ಸ್ವರ್ಗವೆಂದು ಕರೆಸಿಕೊಳ್ಳುವ ಕುಶಾಲನಗರದ 10 ಬಡಾವಣೆಗಳು ವಾರದಿಂದ ನೀರಿನಲ್ಲಿ ಮುಳುಗಿವೆ. ದಾಖಲೆ ಪತ್ರಗಳು, ಮಕ್ಕಳ ಪುಸ್ತಕ, ಬಟ್ಟೆ, ಆಹಾರ ಸಾಮಗ್ರಿ ಸೇರಿದಂತೆ ಎಲ್ಲವೂ ಪ್ರವಾಹದ ನೀರಿನಲ್ಲಿ ತೊಯ್ದು ಹೋಗಿವೆ.

‘ಹಿಂದೆಂದೂ ಇಂತಹ ಸ್ಥಿತಿ ನಿರ್ಮಾಣವಾದ ಸಂದರ್ಭವೇ ಇರಲಿಲ್ಲ. ಎಷ್ಟೇ ಮಳೆಯಾದರೂ ಬೆಟ್ಟಗಳು ಮಾತ್ರ ಮುನಿಯುತ್ತಿರಲಿಲ್ಲ. ಈ ಬಾರಿ ಅವುಗಳೇ ಅಲುಗಾಡಿದವು’ ಎಂದು ಹಿರಿಯ ಪತ್ರಕರ್ತ ಬಿ.ಸಿ.ದಿನೇಶ್‌ ಹೇಳುತ್ತಾರೆ.

ಜಿಲ್ಲಾಡಳಿತ, ನಗರಸಭೆ ವೈಫಲ್ಯ: ಬೆಟ್ಟಗಳು ಕುಸಿದರೂ ಜೀವಹಾನಿ ಸಾಧ್ಯತೆ ಕಡಿಮೆಯಿತ್ತು. ಭಾರಿ ಮಳೆ ಮುನ್ಸೂಚನೆಯಿದ್ದರೂ ತುರ್ತುಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ಸಾವಿರಾರು ಜನರು ರಕ್ಷಣೆಗೆ ಅಂಗಲಾಚುತ್ತಿದ್ದರೂ ಸ್ಪಂದನೆ ಮಾತ್ರ ಕಾಣದಾಗಿದೆ. ಹೆಚ್ಚಿನ ಸಿಬ್ಬಂದಿ, ಬೋಟ್‌ ವ್ಯವಸ್ಥೆ ಮಾಡಿಕೊಂಡಿದ್ದರೆ ರಕ್ಷಣಾಕಾರ್ಯ ಸುಲಭವಾಗುತಿತ್ತು. ನಗರಸಭೆಯು ಬೆಟ್ಟದ ನಿವಾಸಿಗಳನ್ನು ಮುಂಜಾಗ್ರತೆಯಾಗಿ ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸದೇ ಎಡವಟ್ಟು ಮಾಡಿತು ಎಂದು ಜನರು ಆರೋಪಿಸುತ್ತಿದ್ದಾರೆ.

ಕೊಡಗು ಸಹಾಯವಾಣಿ: 08272 221077
ಜಿಲ್ಲಾಧಿಕಾರಿ: Pi Shreevidya - 94826 28409
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ: Summan D. -94808 04901

ಇದನ್ನೂ ಓದಿ ...

ಕೊಡಗು ಜಿಲ್ಲೆಯಲ್ಲಿ ಮಳೆಗೆ ಸಿಲುಕಿದ್ದೀರಾ? ಸಹಾಯ ಮಾಡುವವರು ಇಲ್ಲಿದ್ದಾರೆ

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !