ಬೆಟ್ಟದ ಸಾಲಿನಲ್ಲಿ ಹೆದ್ದಾರಿಗೆ ಹುಡುಕಾಟ

7
ಎಲ್ಲಿದೆಯೋ ದಾರಿ... ರಸ್ತೆಗೆ ಮರಳಿನ ಚೀಲಗಳೇ ಆಸರೆ

ಬೆಟ್ಟದ ಸಾಲಿನಲ್ಲಿ ಹೆದ್ದಾರಿಗೆ ಹುಡುಕಾಟ

Published:
Updated:
Deccan Herald

ಮಡಿಕೇರಿ: ಕೊಡಗು– ದಕ್ಷಿಣ ಕನ್ನಡ ಜಿಲ್ಲೆಯ ಸಂಪರ್ಕ ಕೊಂಡಿಯಾಗಿದ್ದ ರಾಷ್ಟ್ರೀಯ ಹೆದ್ದಾರಿ– 275 ಮಹಾಮಳೆ, ಭೂಕುಸಿತದ ಬಳಿಕ ಸಂಪೂರ್ಣ ಹಾಳಾಗಿದ್ದು, ಸದ್ಯಕ್ಕೆ ಭಾರಿ ವಾಹನಗಳ ಸಂಚಾರ ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿಯಿದೆ.

ಮಡಿಕೇರಿ– ಸಂಪಾಜೆ ನಡುವೆ ಕುಸಿದ ಬೆಟ್ಟಗಳ ಸಾಲಿನಲ್ಲಿ ರಾಷ್ಟ್ರೀಯ ಹೆದ್ದಾರಿಗಾಗಿ 25 ಜೆಸಿಬಿಗಳು, ನೂರಾರು ಕಾರ್ಮಿಕರು ರಸ್ತೆ ಮರು ನಿರ್ಮಾಣದಲ್ಲಿ ತೊಡಗಿದ್ದಾರೆ. ಭೂಕುಸಿತವಾಗಿ 20 ದಿನ ಕಳೆದರೂ ಹೆದ್ದಾರಿಯ ಮೂಲಕ ಎರಡು ಜಿಲ್ಲೆಗಳ ಸಂಪರ್ಕ ಸಾಧ್ಯವಾಗಿಲ್ಲ. ಮಣ್ಣು ತೆರವು ಕಾರ್ಯ ನಡೆಯುತ್ತಿದ್ದು, ಅಲ್ಲಲ್ಲಿ ಮರಳಿನ ಚೀಲವಿಟ್ಟು ಲಘು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತಿದೆ.

ಬೆಟ್ಟಕ್ಕೆ ಮುತ್ತಿಕ್ಕುತ್ತಿದ್ದ ಕಾರ್ಮೋಡಗಳು, ಅಲ್ಲಲ್ಲಿ ಹರಿಯುತ್ತಿದ್ದ ಸಣ್ಣಪುಟ್ಟ ತೊರೆಗಳು, ಜಲಪಾತದ ಸೊಬಗು, ಹಸಿರು ಹೊದ್ದು ಮಲಗಿದ್ದ ಕಾಫಿ ತೋಟಗಳು, ಬೆಟ್ಟದ ಮೇಲೆ ಕಣ್ಣಿಗೆ ಬೀಳುತ್ತಿದ್ದ ಪುಟ್ಟ ಪುಟ್ಟ ಮನೆಗಳು, ಕೊಯಿನಾಡು ಬಳಿಯ ರಬ್ಬರ್‌ ತೋಟ... ಹೀಗೆ ಆಗಸ್ಟ್‌ ಮೊದಲ ವಾರದ ತನಕವೂ ಮಡಿಕೇರಿಯಿಂದ ಸುಳ್ಯದವರೆಗೆ ಸಂಚರಿಸುವಾಗ ಈ ದೃಶ್ಯಗಳು ಕಣ್ಣಿಗೆ ಬೀಳುತ್ತಿದ್ದವು. ಈಗ ಆ ಹೆದ್ದಾರಿಯನ್ನು ಕಂಡರೆ ಬೆಚ್ಚಿ ಬೀಳುವ ಸ್ಥಿತಿಯಿದೆ.

ಹಸಿರು ಸೊಬಗು ಮಾಯವಾಗಿದೆ. ಮನೆಗಳು ಧರೆಗುರುಳಿವೆ. ಮಳೆಯ ನಡುವೆಯೂ ಪ್ಲಾಸ್ಟಿಕ್‌ ಹೊದ್ದು ಸದಾ ಗಿಜಿಗುಡುತ್ತಿದ್ದ ಅಂಗಡಿಗಳು ಬಿಕೋ ಎನ್ನುತ್ತಿವೆ. ಸಾಕಷ್ಟು ಮನೆ, ಅಂಗಡಿಗಳು ಪ್ರಪಾತ ಸೇರಿವೆ. ತೊರೆಗಳು, ನದಿಗಳು ಪಥ ಬದಲಿಸಿವೆ, ಎಲ್ಲಿ ನೋಡಿದರೂ ಮಣ್ಣು ಕಣ್ಣಿಗೆ ಬೀಳುತ್ತಿದ್ದು, ಕಬ್ಬಿಣದ ತಡೆಗೋಡೆಗಳೂ ಕಿತ್ತುಹೋಗಿವೆ. ರಸ್ತೆಯ ಎಡಬದಿಯಲ್ಲಿದ್ದ ಮನೆಗಳ ಮೇಲೆ ಬೆಟ್ಟದ ಮಣ್ಣಿನ ರಾಶಿಯೇ ಬಿದ್ದಿದೆ. ಹೋಂ ಸ್ಟೇಗಳು ಮುಚ್ಚಿವೆ. ಪ್ರಯಾಣಿಕರ ನೆಚ್ಚಿನ ರಾಷ್ಟ್ರೀಯ ಹೆದ್ದಾರಿ ಅತ್ಯಂತ ಅಪಾಯಕಾರಿ ಸ್ಥಿತಿಗೆ ತಲುಪಿದೆ. ಹೆದ್ದಾರಿ ಆಸುಪಾಸಿನ ಗ್ರಾಮಸ್ಥರು ಎಲ್ಲಿದೆಯೋ ದಾರಿ ಎಂದು ಹುಡುಕುತ್ತಿದ್ದಾರೆ. ಮಳೆ ರೌದ್ರನರ್ತನದ ದುಃಸ್ವಪ್ನ ಮಾತ್ರ ಮರೆಯಾಗಿಲ್ಲ.

ಕೆಲವು ಸೌಲಭ್ಯಕ್ಕೆ ಕೊಡಗು ಜಿಲ್ಲೆಯ ಜನರು ದಕ್ಷಿಣ ಕನ್ನಡವನ್ನೇ ಆಶ್ರಯಿಸಿದ್ದರು. ಈ ಹಿಂದೆ ಜಿಲ್ಲಾ ಕೇಂದ್ರದಿಂದ ಸಂಪಾಜೆಗೆ 40 ನಿಮಿಷದಲ್ಲಿ ತಲುಪಬಹುದಿತ್ತು. ಈಗ ಪರ್ಯಾಯ ಮಾರ್ಗವಾದ ಮಡಿಕೇರಿ, ಭಾಗಮಂಡಲ, ಕರಿಕೆ, ಪಾಣತ್ತೂರು ಮೂಲಕ ಸುಳ್ಯ ತಲುಪಲು 4 ಗಂಟೆ ತೆಗೆದುಕೊಳ್ಳುತ್ತದೆ.

ಮಡಿಕೇರಿ, ತಾಳತ್ತಮನೆ, ಕಾಟಕೇರಿ, ಮೊಣ್ಣಂಗೇರಿ, ಮದೆನಾಡು, ಜೋಡುಪಾಲ, ಕೊಯಿನಾಡು ಮೂಲಕ ಹೆದ್ದಾರಿ ಹಾದು ಹೋಗಿದ್ದು 19 ಕಡೆ ಭೂಕುಸಿತವಾಗಿದೆ. ಮೊಣ್ಣಂಗೇರಿ, ಮದೆನಾಡು ಬಳಿ ಬೃಹತ್‌ ಬೆಟ್ಟವೇ ಕರಗಿದೆ. ಬೆಟ್ಟದ ಮಣ್ಣು ರಸ್ತೆ– ಅಕ್ಕಪಕ್ಕದ ಭತ್ತದ ಗದ್ದೆಗಳನ್ನು ಆವರಿಸಿಕೊಂಡಿದೆ.

‘ಕೆಲವು ಸ್ಥಳಗಳಲ್ಲಿ ಬೆಟ್ಟವನ್ನೇ ಕೊರೆದು ರಸ್ತೆ ವಿಸ್ತರಣೆ ಮಾಡಬೇಕು. ಮಡಿಕೇರಿಯಿಂದ ಸಂಪಾಜೆ ತನಕ 35 ಕಿ.ಮೀ ಅಂತರವಿದ್ದು ಹೆದ್ದಾರಿ ಅಭಿವೃದ್ಧಿಗೆ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಹೊಸ ರಸ್ತೆ ನಿರ್ಮಾಣವಾದ ಬಳಿಕವಷ್ಟೇ ಭಾರಿ ವಾಹನಗಳ ಸಂಚಾರ ಸಾಧ್ಯವಾಗಲಿದೆ’ ಎಂದು ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ ಮಾಹಿತಿ ನೀಡಿದರು.

ಬಿಸಿಲಿಗೆ ಮೈಯೊಡ್ಡಿದ ಕೊಡಗು

ಮಡಿಕೇರಿ: ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದ ಜಿಲ್ಲೆಯಲ್ಲಿ ಮಂಗಳವಾರ ದಿನವಿಡೀ ಬಿಸಿಲು ಕಾಣಿಸಿತು. ಬಹಳ ದಿನಗಳ ಬಳಿಕ ಪ್ರಖರವಾದ ಬಿಸಿಲು ಕಂಡುಬಂತು. ಭೂಕುಸಿತವಾದ ಸ್ಥಳದಲ್ಲಿ ಮಣ್ಣು ಸಹ ಒಣಗುತ್ತಿದ್ದು ಗ್ರಾಮೀಣ ಭಾಗಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ಕೆಲಸ ಭರದಿಂದ ಸಾಗಿದೆ.

* ರಸ್ತೆ ಕೊಚ್ಚಿ ಹೋಗಿರುವ ಕಡೆ ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ಅದು ಪೂರ್ಣಗೊಂಡ ಬಳಿಕ ಲಘು ವಾಹನ ಸಂಚಾರಕ್ಕೆ ಅನುಮತಿ ನೀಡಲಾಗುವುದು.
– ಪಿ.ಐ.ಶ್ರೀವಿದ್ಯಾ, ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !