ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ವಸ್ತ್ರಸಿರಿಗೆ ಚಾಲನೆ ನೀಡಿದ ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ

Published 6 ಜನವರಿ 2024, 6:13 IST
Last Updated 6 ಜನವರಿ 2024, 6:13 IST
ಅಕ್ಷರ ಗಾತ್ರ

ಮಡಿಕೇರಿ: ಪಿ.ಎಂ.ವಿಶ್ವಕರ್ಮ ಯೋಜನೆಯಡಿ ನೇಕಾರರಿಗೆ ಸಹಾಯಧನದಡಿ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ತಿಳಿಸಿದರು.

ಜವಳಿ ಅಭಿವೃದ್ಧಿ ಆಯುಕ್ತಾಲಯ, ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಡಿಕೇರಿ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಜನವರಿ 12ರವರೆಗೆ ಏರ್ಪಡಿಸಿರುವ ‘ಕಾವೇರಿ ವಸ್ತ್ರಸಿರಿ’ ಜಿಲ್ಲಾ ಮಟ್ಟದ ಕೈಮಗ್ಗ ಉತ್ಪನ್ನಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆಧುನಿಕತೆ ಬೆಳೆದಂತೆ ಕೈಮಗ್ಗ ನೇಕಾರರು ಸಂಕಷ್ಟವನ್ನು ಎದುರಿಸುತ್ತಿದ್ದು, ಕೈಮಗ್ಗ ನೇಕಾರರಿಗೆ ಸರ್ಕಾರದಿಂದ ಹಲವು ಸಹಾಯಧನ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ಕರಕುಶಲಕರ್ಮಿಗಳಿಗೆ ಪ್ರಧಾನಮಂತ್ರಿ ವಿಶ್ವಕರ್ಮ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿಯೊಂದಿಗೆ ಮಾನ್ಯತೆ ನೀಡಲಾಗುತ್ತದೆ. ಕೌಶಲ್ಯ, ಉನ್ನತೀಕರಣ, ಟೂಲ್ ಕಿಟ್ ಪ್ರೋತ್ಸಾಹ, ಡಿಜಿಟಲ್ ವಹಿವಾಟು ಮತ್ತು ಮಾರ್ಕೆಟಿಂಗ್ ಬೆಂಬಲವನ್ನು ಒದಗಿಸುತ್ತದೆ. ಕ್ರೇಡಿಟ್ ಬೆಂಬಲವನ್ನು ಶೇ 5ರಷ್ಟು ರಿಯಾಯಿತಿ ಬಡ್ಡಿಯ ದರದಲ್ಲಿ ₹ 1 ಲಕ್ಷ ಮತ್ತು 2 ಲಕ್ಷ ಪ್ರೋತ್ಸಾಹವನ್ನು ಒದಗಿಸಲಾಗುತ್ತದೆ ಎಂದು ಅವರು ತಿಳಿಸಿದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್ ಮಾತನಾಡಿ, ‘ಆಧುನಿಕತೆಗೆ ಹೊಂದಿಕೊಂಡು ಕೈಮಗ್ಗವನ್ನು ಉಳಿಸಿಕೊಂಡು ಆಧುನಿಕತೆಗೆ ಒಗ್ಗಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರತಿಯೊಬ್ಬರೂ ಶ್ರಮಿಸಬೇಕು. ಆ ನಿಟ್ಟಿನಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು’ ಎಂದರು.

ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಸ್ವಾಮಿ ಮಾತನಾಡಿ, ‘ಸರ್ಕಾರದಿಂದ ಪ್ರತಿವರ್ಷ ಜಿಲ್ಲಾಮಟ್ಟದ ಕೈಮಗ್ಗ ಉತ್ಪನ್ನಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗುತ್ತಿದೆ. ಶೇ 20ರಷ್ಟು ರಿಯಾಯಿತಿ ದರದಲ್ಲಿ ಕೈಮಗ್ಗ ಉತ್ಪನ್ನಗಳು ಗ್ರಾಹಕರಿಗೆ ದೊರೆಯಲಿವೆ’ ಎಂದು ಮಾಹಿತಿ ನೀಡಿದರು.

ಚಿಕ್ಕಬಳ್ಳಾಪುರ, ಬೆಂಗಳೂರು, ತುಮಕೂರು, ಚಾಮರಾಜನಗರ, ಹಾಸನ, ಗುಬ್ಬಿ, ಶಿವಮೊಗ್ಗ, ಬಾಗಲಕೋಟೆ, ಗದಗ ಜಿಲ್ಲೆಯ ಲಕ್ಷ್ಮೇಶ್ವರ, ಕೊಡಗು ಜಿಲ್ಲೆಯ ಕುಶಾಲನಗರ, ಪೊನ್ನಂಪೇಟೆ, ಹೀಗೆ ವಿವಿಧ ಜಿಲ್ಲೆ ಹಾಗೂ ತಾಲ್ಲೂಕುಗಳಿಂದ ಕೈಮಗ್ಗ ನೇಕಾರರು ಆಗಮಿಸಿ 20 ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯುತ್ತಿದೆ ಎಂದು ಗುರುಸ್ವಾಮಿ ಮಾಹಿತಿ ನೀಡಿದರು.

ನಗರಸಭಾ ಸದಸ್ಯ ಅಪ್ಪಣ್ಣ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಝೀವಲ್‍ಖಾನ್, ಪೊನ್ನಂಪೇಟೆ ನೇಕಾರರ ಸಹಕಾರ ಸಂಘದ ಅಧ್ಯಕ್ಷ ಪಿ.ಕೆ.ದೇವಾನಂದ, ಕುಶಾಲನಗರ ನೇಕಾರರ ಸಹಕಾರ ಸಂಘದ ಕಾರ್ಯದರ್ಶಿ ಸವಿತಾ ಭಾಗವಹಿಸಿದ್ದರು.

ಗಾಂಧಿ ಮೈದಾನದಲ್ಲಿ ಜನವರಿ 12ರವರೆಗೆ ಮೇಳ 20 ಕ್ಕೂ ಹೆಚ್ಚು ಮಳಿಗೆಗಳಲ್ಲಿ ಪ್ರದರ್ಶನ ಹಲವು ಜಿಲ್ಲೆಗಳಿಂದ ಬಂದಿರುವ ಕೈಮಗ್ಗ ನೇಕಾರರು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT