ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ನಗರ ಪ್ರದಕ್ಷಿಣೆ: ಎಂಜಿನಿಯರ್‌ಗೆ ತರಾಟೆ

ಮಡಿಕೇರಿಯಲ್ಲಿ ರಸ್ತೆ, ಚರಂಡಿ, ಶುಚಿತ್ವದ ಕೊರತೆ
Last Updated 17 ಡಿಸೆಂಬರ್ 2019, 12:32 IST
ಅಕ್ಷರ ಗಾತ್ರ

ಮಡಿಕೇರಿ: ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಸುನಿಲ್‌ ಸುಬ್ರಮಣಿ ಅವರು ಮಂಗಳವಾರ ನಗರ ಪ್ರದಕ್ಷಿಣೆ ಮಾಡಿ ನಗರಸಭೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿದರು. ಈ ಹಿಂದೆಯೂ ನಗರ ಪ್ರದಕ್ಷಿಣಿ ಹಾಕಿದರು.

ರಸ್ತೆ ಸೇರಿದಂತೆ ಮೂಲಸೌಕರ್ಯ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಅಪ್ಪಚ್ಚುರಂಜನ್ ಎಚ್ಚರಿಸಿದರು.

ರಸ್ತೆ, ಒಳಚರಂಡಿ ಹಾಗೂ ಸ್ಥಗಿತಗೊಂಡಿರುವ ‘ಮಡಿಕೇರಿ ಸ್ಕ್ವೇರ್’ ಯೋಜನೆ ವೀಕ್ಷಿಸಿದರು. ಗುಂಡಿಬಿದ್ದ ಮಹದೇವಪೇಟೆ ರಸ್ತೆಗಳು ಮತ್ತು ಕೆಲವು ಬಡಾವಣೆಗಳಲ್ಲಿ ಒಳಚರಂಡಿ ವೀಕ್ಷಿಸಿ, ಶೀಘ್ರವೇ ಸರಿಪಡಿಸುವಂತೆ ನಗರಸಭೆ ಪೌರಾಯುಕ್ತ ರಮೇಶ್‌ ಅವರಿಗೆ ಸೂಚಿಸಿದರು.

‘ಖುದ್ದು ಭೇಟಿ ಮಾಡಿ ನೈಜ ಸಮಸ್ಯೆ ಅರಿಯುವ ಪ್ರಯತ್ನ ಮಾಡಲಾಗುತ್ತಿದೆ. 2ನೇ ಬಾರಿ ನಗರ ಪ್ರದಕ್ಷಿಣೆ ಹಮ್ಮಿಕೊಳ್ಳಲಾಗಿದೆ. ನಗರದ ಸ್ಥಿತಿಗತಿಯ ಬಗ್ಗೆ ಚಿತ್ರಣ ಪಡೆದುಕೊಂಡಿದ್ದೇನೆ. ಸಮಸ್ಯೆಯನ್ನು ಸಂಬಂಧಪಟ್ಟ ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ರಂಜನ್‌ ಹೇಳಿದರು.

ಯುಜಿಡಿ ಕಾಮಗಾರಿಯಿಂದ ನಗರದ ರಸ್ತೆಗಳು ಹಾಳಾಗಿವೆ. ₹ 29 ಕೋಟಿಯ ಕಾಮಗಾರಿ ಪೂರ್ಣಗೊಳ್ಳಬೇಕಾಗಿದೆ. ಪೂರ್ಣಗೊಂಡಿರುವ ಕಾಮಗಾರಿ ನಿರ್ವಹಣೆ ಕೊರತೆ ಎದುರಿಸುತ್ತಿದ್ದು, ಇಲಾಖೆ ಈ ಬಗ್ಗೆ ಮುತುವರ್ಜಿ ವಹಿಸಬೇಕು ಎಂದು ಹೇಳಿದರು.

ನಗರಸಭೆ ಆಡಳಿತ ಇಲ್ಲದೇ ಒಂದೂವರೆ ವರ್ಷ ಕಳೆದಿದೆ. ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾವೇರಿ ಕಲಾಕ್ಷೇತ್ರಕ್ಕೆ ಬಿಡುಗಡೆಯಾಗಿರುವ ₹1 ಕೋಟಿ ಹಣದಲ್ಲಿ ಅಭಿವೃದ್ಧಿ ಕಾರ್ಯ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ರಂಜನ್‌ ತಿಳಿಸಿದರು.

ತರಾಟೆ: ಚೌಡೇಶ್ವರಿ ರಸ್ತೆ ಹದಗೆಟ್ಟಿದ್ದು ರಂಜನ್ ಅವರು ಸ್ಥಳದಲ್ಲೇ ಫೋನ್ ಮೂಲಕ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.

‘ಮಡಿಕೇರಿ ಸ್ಕ್ವೇರ್’ ಯೋಜನೆಗೆ 4‘ಜಿ’ ವಿನಾಯಿತಿ ದೊರೆತಿಲ್ಲ. ಟೆಂಡರ್ ಪ್ರಕ್ರಿಯೆಗೆ ಸೂಚಿಸಲಾಗಿದ್ದು ಸರ್ಕಾರದಿಂದ ಅನುಮೋದನೆ ದೊರೆತಿಲ್ಲ ಎಂದು ಇದೇ ವೇಳೆ ಅಧಿಕಾರಿಗಳು ಮಾಹಿತಿ ನೀಡಿದರು.

ಅಬ್ದುಲ್ ಕಲಾಂ ಬಡಾವಣೆಯಲ್ಲಿ ಮೊಹಮ್ಮದ್ ಅಲಿ ಅವರಿಗೆ ಸೇರಿದ ತಿಂಡಿ ತಯಾರಿಕಾ ಘಟಕದಲ್ಲಿ ಶುಚಿತ್ವ ಕೊರತೆ ಕಂಡುಬಂದಿತ್ತು. ಘಟಕ ಸ್ಥಗಿತ ಮಾಡುವಂತೆ ಶಾಸಕರು ಸೂಚಿಸಿದರು.

ಸಾರ್ವಜನಿಕರ ಸಹಕಾರ ಅಗತ್ಯ: ಆಡಳಿತ, ಜನಪ್ರತಿನಿಧಿಗಳೊಂದಿಗೆ ಸಾರ್ವಜನಿಕರು ಕೂಡ ಅಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಮನವಿ ಮಾಡಿದರು.

ಚರಂಡಿ ಸಮಸ್ಯೆಗೆ ಪರೋಕ್ಷವಾಗಿ ಸಾರ್ವಜನಿಕರೂ ಕಾರಣ. ಅಧಿಕಾರಿಗಳ ಲೋಪ ಕೂಡ ಇದೆ. ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಮಸ್ಯೆ ಪರಿಹಾರಕ್ಕೆ ಮುಂದಾಗಲಾಗುವುದು ಎಂದು ಭರವಸೆ ನೀಡಿದರು.

ನಗರಸಭೆ ಪೌರಾಯುಕ್ತ ರಮೇಶ್‌, ಎಂಜಿನಿಯರ್‌ ವನಿತಾ, ಬಿಜೆಪಿ ಮುಖಂಡರಾದ ಜಗದೀಶ್‌, ಅನಿತಾ ಪೂವಯ್ಯ ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT