ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಶಾಲನಗರಕ್ಕೆ ಸುಸಜ್ಜಿತ ಆಸ್ಪತ್ರೆ

ಖಾಸಗಿ ವೈದ್ಯ ಸಂಸ್ಥೆಗಳ ಜತೆಗೆ ಚರ್ಚೆ: ಸಂವಾದದಲ್ಲಿ ಸಂಸದ ಪ್ರತಾಪ ಸಿಂಹ ಭರವಸೆ
Last Updated 14 ಜೂನ್ 2019, 14:47 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗಿಗೆ ‘ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ’ ಬೇಕೆಂಬ ಅಭಿಯಾನ ನಡೆಯುತ್ತಿದ್ದು ಅದಕ್ಕೆ ಪೂರಕವಾಗಿ ಸ್ಪಂದಿಸಿರುವ ಕೊಡಗು–ಮೈಸೂರು ಕ್ಷೇತ್ರದ ಸಂಸದ ಪ್ರತಾಪ್‌ ಸಿಂಹ ಅವರು, ‘ಕುಶಾಲನಗರಕ್ಕಾದರೂ ಸುಸಜ್ಜಿತ ಆಸ್ಪತ್ರೆ ತರಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ನಡೆದ ಸಂವಾದದಲ್ಲಿ ಮಾತನಾಡಿ, ‘ಅಪಘಾತದ ವೇಳೆ ರಕ್ತಸ್ರಾವವಾಗಿ ಹೆಚ್ಚಿನವರು ಸಾವನ್ನಪ್ಪುತ್ತಾರೆ. ಅದಕ್ಕೆ ತುರ್ತು ಸ್ಪಂದನೆ ಹಾಗೂ ಸುಸಜ್ಜಿತ ಆಸ್ಪತ್ರೆಯ ಅಗತ್ಯವಿದೆ. ಮೈಸೂರಿನ ವೈದ್ಯರೊಬ್ಬರ ಬಳಿ ಈ ಹಿಂದೆಯೂ ಚರ್ಚಿಸಿದ್ದೆ. ಮತ್ತೊಮ್ಮೆ ಚರ್ಚಿಸಿ ಕುಶಾಲನಗರಕ್ಕೆ ಖಾಸಗಿ ಸಹಭಾಗಿತ್ವದಲ್ಲಿ ಸುಸಜ್ಜಿತ ಆಸ್ಪತ್ರೆ ತರುವ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

‘ಕಸ್ತೂರಿ ರಂಗನ್‌ ವರದಿ ಜಾರಿ ವಿಚಾರದಲ್ಲಿ ಜಿಲ್ಲೆಯ ಜನರು ಆತಂಕಪಡುವ ಅಗತ್ಯವಿಲ್ಲ. ಒಕ್ಕಲೆಬ್ಬಿಸಿದ ಒಂದೇ ಪ್ರಕರಣವೂ ಇಲ್ಲ. ರಾಜ್ಯದ ಸಚಿವರನ್ನು ಒಳಗೊಂಡ ಉಪ ಸಮಿತಿಯು ಕೇಂದ್ರಕ್ಕೆ ತಪ್ಪು ವರದಿ ನೀಡಿದ್ದರ ಪರಿಣಾಮ ಜಿಲ್ಲೆಯ ಜನರೂ ಆತಂಕ ಪಟ್ಟಿದ್ದರು. ಹಳೇ ವರದಿಯನ್ನು ಅಮಾನತಿನಲ್ಲಿ ಇಡಲಾಗಿದೆ. ಹಸಿರು ಪೀಠವೂ ಒಪ್ಪಿಲ್ಲ. ಕೊಡಗಿನ ನಿವಾಸಿಗಳಿಗೆ ಕಸ್ತೂರಿ ರಂಗನ್‌ ವರದಿಯಿಂದ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುತ್ತೇನೆ. ಮರು ಸರ್ವೆಗೂ ಪ್ರಯತ್ನಿಸುತ್ತೇನೆ’ ಎಂದು ಹೇಳಿದರು.

‘ಆನೆ–ಮಾನವ ಸಂಘರ್ಷ ತಡೆಗೆ ರೈಲ್ವೆ ಕಂಬಿ ಅಳವಡಿಕೆಯೊಂದೇ ಪರಿಹಾರ. ಕೇಂದ್ರದಿಂದ ಎಲ್ಲ ರೀತಿಯಲ್ಲೂ ನೆರವು ನೀಡಲು ಪ್ರಯತ್ನಿಸುತ್ತೇನೆ’ ಎಂದು ಸಂಸದರು ಭರವಸೆ ನೀಡಿದರು.

ಭೂಸ್ವಾಧೀನ:

ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ರೈಲು ಸಂಪರ್ಕದ ಬೇಡಿಕೆಯೊಂದು ಹಾಗೆ ಉಳಿದಿದೆ. ಕುಶಾಲನಗರದ ತನಕ ರೈಲು ತರುವ ಪ್ರಯತ್ನಕ್ಕೆ ಹಿಂದಿನ ಅವಧಿಯಲ್ಲಿ ಅನುಮೋದನೆ ಸಿಕ್ಕಿದ್ದು, ಸದ್ಯದಲ್ಲೇ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಹೇಳಿದರು.

‘ಬರೀ ಹೇಳಿಕೆ ನೀಡುತ್ತಾ ಕಾಲಹರಣ ಮಾಡುವ ಬದಲಿಗೆ ಅಭಿವೃದ್ಧಿ ಮೂಲಕವೇ ಉತ್ತರಿಸಲು ನಿರ್ಧರಿಸಿರುವೆ. ಸಾಕಷ್ಟು ಯೋಜನೆಗಳು ಕಳೆದ ಅವಧಿಯಲ್ಲಿ ಮಂಜೂರಾಗಿವೆ. ಅವುಗಳನ್ನು ಕಾರ್ಯರೂಪಕ್ಕೆ ತರುವುದಷ್ಟೇ ಈ ಅವಧಿ ಕೆಲಸ. ಮೈಸೂರಿನ ಚಾಮುಂಡಿಬೆಟ್ಟಕ್ಕೆ ’ಪ್ರಸಾದ’ ಯೋಜನೆ ರೂಪದಲ್ಲಿ ಕೊಡಗಿನ ಪ್ರವಾಸೋದ್ಯಮ ಉತ್ತೇಜನಕ್ಕೆ ಕೇಂದ್ರದಿಂದ ವಿಶೇಷ ಪ್ಯಾಕೇಜ್‌ ಕೊಡಿಸಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಕೂಡಿಗೆ ಗ್ರಾಮವನ್ನು ಆದರ್ಶ ಗ್ರಾಮವಾಗಿ ಅಭಿವೃದ್ಧಿ ಪಡಿಸಲು ಆಯ್ಕೆ ಮಾಡಿಕೊಂಡಿದೆ. ಆದರೆ, ಕಾಲಾವಕಾಶ ಕಡಿಮೆಯಿದ್ದ ಕಾರಣಕ್ಕೆ ಅಭಿವೃದ್ಧಿ ಸಾಧ್ಯವಾಗಿರಲಿಲ್ಲ. ಈ ಅವಧಿಯಲ್ಲೂ ಆದರ್ಶ ಗ್ರಾಮ ಯೋಜನೆ ಮುಂದುವರಿದರೆ ಕೊಡಿಗೆ ಗ್ರಾಮವನ್ನು ಅಭಿವೃದ್ಧಿ ಪಡಿಸಲಾಗುವುದು’ ಎಂದು ಹೇಳಿದರು.

ಜಿಯೋ ನೆಟ್‌ವರ್ಕ್‌:

ಕೊಡಗಿನ ಜನರು ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಹಾಗೂ ರಸ್ತೆ ಸಮಸ್ಯೆ ಬಗೆ ಹರಿಸುವಂತೆ ಹೆಚ್ಚಾಗಿ ಬೇಡಿಕೆ ಸಲ್ಲಿಸುತ್ತಾರೆ. ಬಿಎಸ್‌ಎನ್‌ಎಲ್‌ ಅಧಿಕಾರಿಗಳ ಜತೆಗೆ ಗುದ್ದಾಡಿ ನನಗೂ ಸಾಕಾಗಿದೆ. ಜಿಯೋ ನೆಟ್‌ವರ್ಕ್‌ ಸಿಬ್ಬಂದಿ ಜತೆಗೆ ಚರ್ಚಿಸಿದ್ದೇನೆ. ಭಾಗಮಂಡಲ ಮತ್ತಿತರ ಕಡೆಗೆ ಜಿಯೋ ಸಂಪರ್ಕ ಕಲ್ಪಿಸಲಾಗುವುದು ಎಂದು ಹೇಳಿದರು.

2021ಕ್ಕೆ ಯೋಜನೆ ಪೂರ್ಣ:

ಮೈಸೂರು–ಬೆಂಗಳೂರು ನಡುವೆ 10 ಪಥದ ರಸ್ತೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ. ಮೈಸೂರಿನಿಂದ ಮಡಿಕೇರಿಗೆ ನಾಲ್ಕುಪಥದ ರಸ್ತೆ ನಿರ್ಮಿಸಲಾಗುವುದು. ಶ್ರೀರಂಗಪಟ್ಟಣದಿಂದ ಮಡಿಕೇರಿಗೆ ಮತ್ತೊಂದು ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಮೈಸೂರಿಗೆ ಆರು ಹೊಸ ರೈಲು ಸಂಪರ್ಕ ಸಹ ಕಲ್ಪಿಸಲಾಗಿದೆ. ₹ 13 ಸಾವಿರ ಕೋಟಿ ಮೊತ್ತದ ಯೋಜನೆಗಳನ್ನು ಕ್ಷೇತ್ರಕ್ಕೆ ತಂದಿದ್ದೇನೆ. ಆದರೆ, ಪ್ರಚಾರ ತೆಗೆದುಕೊಳ್ಳಲಿಲ್ಲ ಎಂದು ಹೇಳಿದರು.

ಸಂವಾದದಲ್ಲಿ ಪ್ರೆಸ್‌ಕ್ಲಬ್‌ ಅಧ್ಯಕ್ಷ ಅಜ್ಜಮಾಡ ರಮೇಶ್‌ ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಆರ್‌.ಸುಬ್ರಮಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT