ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಲೆಮರೆ ಕಾಯಂತಿರುವ ಯುವಸಾಧಕಿ ನಮಿತಾ ಶೆಣೈ

6 ನೃತ್ಯ ಪ್ರಕಾರಗಳಲ್ಲಿ ಪ್ರಾವೀಣ್ಯತೆ ಗಳಿಸಿರುವ ಜಿಲ್ಲೆಯ ಅಪರೂಪದ ಕಲಾವಿದೆ
Published 26 ಜೂನ್ 2024, 5:51 IST
Last Updated 26 ಜೂನ್ 2024, 5:51 IST
ಅಕ್ಷರ ಗಾತ್ರ

ಮಡಿಕೇರಿ: ಭರತನಾಟ್ಯ, ಕುಚುಪುಡಿ, ಒಡಿಸ್ಸಿ, ಮಣಿಪುರಿ, ಕಥಕ್, ಮೋಹಿನಿಅಟ್ಟಂ ನೃತ್ಯ ಪ್ರಕಾರಗಳಲ್ಲಿ ಪ್ರಾವೀಣ್ಯತೆ ಸಾಧಿಸಿರುವ ಜಿಲ್ಲೆಯ ವಿರಳ ಕಲಾವಿದರ ಪೈಕಿ ಮುಂಚೂಣಿಯಲ್ಲಿ ನಿಲ್ಲುವಂತಹ ಅಪರೂಪದ ಸಾಧಕಿ ವಿರಾಜಪೇಟೆ ಪಟ್ಟಣದ ನಿವಾಸಿ ಬಿ.ಎಂ. ನಮಿತಾ ಶೆಣೈ.

ಬಿ.ಕಾಂ. ಪದವೀಧರೆಯಾಗಿರುವ ಅವರು ಸದ್ಯ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ. ಆದರೆ, ಜಿಲ್ಲೆಯ ನಾಟ್ಯರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

ಇವರು ಜಿಲ್ಲೆ ಮಾತ್ರವಲ್ಲ, ಮೈಸೂರು, ಬೆಂಗಳೂರು, ಮಂಡ್ಯ ಹಾಗೂ ಉತ್ತರ ಕರ್ನಾಟಕ ಅನೇಕ ಕಡೆ ತಮ್ಮ ಕಲೆಯ ಪ್ರದರ್ಶನ ನೀಡಿ ಜನರ ಮೆಚ್ಚುಗೆ ಗಳಿಸಿದ್ದಾರೆ.

ಎಸ್‌ಎಸ್‌ಎಲ್‌ಸಿಯಿಂದಲೂ ಇವರು ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಗುರುದೇವ ಅಕಾಡೆಮಿ ಆಯೋಜಿಸಿದ್ದ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಇವರು ಭಾಗವಹಿಸಿ, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದರು.

ಇವರು ಮೂರೂವರೆ ವರ್ಷದಲ್ಲಿದ್ದಾಗಲೇ ಭರತನಾಟ್ಯ ಕಲಿಕೆಯನ್ನು ಆರಂಭಿಸಿ, ಅದನ್ನೇ ತಮ್ಮ ಉಸಿರಾಗಿಸಿಕೊಂಡಿದ್ದಾರೆ. ವಿರಾಜಪೇಟೆಯ ಜಗನ್ಮೋಹನ ನಾಟ್ಯಾಲಯದ ಕೆ.ಟಿ. ರಾಜೇಶ್ ಆಚಾರ್ಯ ಅವರ ಬಳಿ ಶಿಷ್ಯವೃತ್ತಿಯನ್ನು ಆರಂಭಿಸಿ, ಕಲಾವಿದೆಯಾಗಿ ಹೊರಹೊಮ್ಮಿದ್ದಾರೆ.

ಮಡಿಕೇರಿ ಮತ್ತು ಗೋಣಿಕೊಪ್ಪಲು ದಸರೆಯಲ್ಲಿ ಪ್ರತಿ ವರ್ಷವೂ ಇವರ ನಾಟ್ಯ ಪ್ರದರ್ಶನ ಇರುತ್ತದೆ. ಸತತ 15 ವರ್ಷಗಳಿಂದಲೂ ಅವರು ಈ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಇವರ ಹೆಗ್ಗಳಿಕೆ.

ಮಡಿಕೇರಿಯಲ್ಲಿ ಇವರನ್ನು 2015ರಲ್ಲಿ ‘ಅಸಾಧಾರಣ ಪ್ರತಿಭೆ’ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಎಲೆಮರೆಯ ಕಾಯಂತೆ ತಮ್ಮ ಪಾಡಿಗೆ ತಾವು ನೃತ್ಯಾಭ್ಯಾಸ ಮಾಡುತ್ತಾ, ಅವಕಾಶ ಸಿಕ್ಕಿದಾಗಲೆಲ್ಲ ಯಾವುದೇ ಪ್ರಚಾರ ಬಯಸದೆ ಪ್ರತಿಭಾ ಪ್ರದರ್ಶನ ತೋರುತ್ತಿದ್ದಾರೆ. ಅಸಾಧಾರಣ ಪ್ರತಿಭೆಯಾಗಿದ್ದರೂ ಜಿಲ್ಲೆಯಲ್ಲಿ ಇವರ ಪರಿಚಯ ತೀರಾ ಕಡಿಮೆ ಎಂದೇ ಹೇಳಬೇಕು.

ದಿವಂಗತ ಬಿ.ಎನ್.ಮನುಶೆಣೈ, ಹಾಗೂ ಬಿ.ಎಂ. ಸುಮಾ ಶೆಣೈ ಅವರ ಪುತ್ರಿಯಾಗಿರುವ ನಮಿತಾ ಶೆಣೈ ಅವರ ಸೋದರ  ಕಾರ್ತೀಕ್ ಶೆಣೈ ಸಹ ಉತ್ತಮ ಕಲಾವಿದರು.

ನಮಿತಾ ಶೆಣೈ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು, ‘ಪರಿಶ್ರಮ, ಕಲಿಕೆ, ಸತತ ಅಭ್ಯಾಸದ ದೃಷ್ಟಿಯಿಂದಲೂ ಕಲೆಗೆ ಬೆಲೆ ಕಟ್ಟಲಾಗದು. ಕಲಾವಿದರನ್ನು ಪ್ರೋತ್ಸಾಹಿಸುವ ಮನೋಭಾವ ಎಲ್ಲರಲ್ಲೂ ಬರಬೇಕು’ ಎಂದು ಹೇಳಿದರು.

ಕೊಡಗಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಾಗಿರಲಿ ಅದರಲ್ಲಿ ಮೊದಲ ಆದ್ಯತೆ ಸ್ಥಳೀಯ ಕಲಾವಿದರಿಗೆ ಇರಬೇಕು. ಆಗ ಮಾತ್ರ ಸ್ಥಳೀಯವಾಗಿರುವ ಬೆಳೆಯುವ ಹಂತದಲ್ಲಿರುವ ಕಲಾವಿದರಿಗೆ ಅನುಕೂಲವಾಗುತ್ತದೆ.

ನಮಿತಾ ಶೆಣೈ
ನಮಿತಾ ಶೆಣೈ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT