ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಬಲ ಗಳಿಸಲು ನಕ್ಸಲರ ಯತ್ನ: ಸಹಕಾರ ನೀಡುವಂತೆ ಕೊಡಗಿನ ಕಾಡಂಚಿನ ಜನರಲ್ಲಿ ಮನವಿ

Published 20 ಮಾರ್ಚ್ 2024, 5:31 IST
Last Updated 20 ಮಾರ್ಚ್ 2024, 5:31 IST
ಅಕ್ಷರ ಗಾತ್ರ

ಮಡಿಕೇರಿ: ‘ಬಡವರ ಪರವಾಗಿ ಹೋರಾಟ ಮಾಡುತ್ತಿದ್ದೇವೆ. ನಮಗೆ ಬೆಂಬಲ ನೀಡಿ’ ಎಂದು ನಕ್ಸಲರು ತಾಲ್ಲೂಕಿನ ಕಾಡಂಚಿನ ಜನರಿಗೆ ಮನವಿ ಮಾಡಿರುವ ಸಂಗತಿ ತನಿಖೆಯಿಂದ ಗೊತ್ತಾಗಿದೆ. ಈ ಮೂಲಕ ನಕ್ಸಲರು ರಾಜ್ಯದಲ್ಲಿ ಮತ್ತೆ ತಮ್ಮ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ ಎಂಬುದು ದೃಢಪಟ್ಟಿದೆ.

ಈ ಕುರಿತು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ತಾಲ್ಲೂಕಿನ ಕಡಮಕಲ್ ಸಮೀಪದ ಕೂಜಿಮಲೆಯಲ್ಲಿ ಕಾಣಿಸಿಕೊಂಡಿದ್ದ ನಾಲ್ವರಲ್ಲಿ ಒಬ್ಬಾತ ನಕ್ಸಲರ ಪ್ರಮುಖ ನಾಯಕ ವಿಕ್ರಮ್‌ಗೌಡ ಎಂಬುದು ಬಹುತೇಕ ದೃಢಪಟ್ಟಿದೆ. ನಕ್ಸಲರ ಗುಂಪು ಅಂಗಡಿಯಲ್ಲಿ ದಿನಸಿ ಖರೀದಿಸಿ ತಮಗೆ ಬೆಂಬಲ ನೀಡುವಂತೆ ಮನವಿ ಮಾಡಿದೆ. ಸದ್ಯ, 40ಕ್ಕೂ ಅಧಿಕ ಮಂದಿ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ’ ಎಂದು ತಿಳಿಸಿದರು.

‘ನಾಲ್ವರ ತಂಡದಲ್ಲಿ ಇಬ್ಬರು ಮಹಿಳೆಯರು, ಇಬ್ಬರು ಪುರುಷರಿದ್ದರು. ಎಲ್ಲರ ಕೈಯಲ್ಲೂ ಕೇವಲ ಬಂದೂಕು ಮಾತ್ರವಲ್ಲ ನಿಯತಕಾಲಿಕೆಗಳೂ ಇದ್ದವು. ತಮ್ಮ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದಂತೆಯೂ ಎಚ್ಚರಿಕೆ ನೀಡಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಸದ್ಯ, ನಮಗೆ ಅವರ ಚಲನವಲನ ಕುರಿತು ಮಾಹಿತಿಗಳು ಸಿಕ್ಕಿದ್ದು, ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದರು.

ಸ್ಥಳದಲ್ಲೇ ಎಸ್‌.ಪಿ ಮೊಕ್ಕಾಂ

ನಕ್ಸಲ್ ನಿಗ್ರಹ ಪಡೆಯ ಎಸ್‌.ಪಿ ಜಿತೇಂದ್ರ ಕುಮಾರ್ ದಯಂ ಅವರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಶೋಧ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದಾರೆ.

‘ಇತ್ತ ಕೇರಳಕ್ಕೆ ಹೊಂದಿಕೊಂಡಂತಿರುವ ಕರಿಕೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಇಲ್ಲಿನ ಅಂತರರಾಜ್ಯ ಚೆಕ್‌ಪೋಸ್ಟ್‌ನಲ್ಲಿದ್ದ ಸಿಬ್ಬಂದಿ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಲಾಗಿದೆ. ಇಲ್ಲಿ ಸಂಚರಿಸುವ ವಾಹನಗಳ ಮೇಲೆ ಚುನಾವಣಾ ದೃಷ್ಟಿಯಿಂದ ಮಾತ್ರವಲ್ಲದೆ, ನಕ್ಸಲರ ಕುರಿತೂ ಹೆಚ್ಚಿನ ನಿಗಾ ವಹಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ದುರ್ಗಮ ಅರಣ್ಯದೊಳಗೆ ನುಸುಳಿದ ತಂಡ?

ಕಳೆದ ತಿಂಗಳು ಕೇರಳದಿಂದ ಕರ್ನಾಟಕಕ್ಕೆ ನಕ್ಸಲರ ತಂಡವು ದುರ್ಗಮ ಅರಣ್ಯದೊಳಗೆ ನುಸುಳಿರಬಹುದು ಎಂಬ ಶಂಕೆ ಬಲವಾಗಿದೆ.

‘ಕುಟ್ಟ ಭಾಗದಲ್ಲಿ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿ ನಿರಂತರವಾಗಿ ಶೋಧ ನಡೆಸುತ್ತಿರುವುದರಿಂದ ಭಾಗಮಂಡಲದ ಅರಣ್ಯದೊಳಗಿಂದ ನಕ್ಸಲರು ನುಸುಳಿರಬಹುದು. ಅದಕ್ಕೆ ಪೂರಕ ಎಂಬಂತೆ ಫೆಬ್ರುವರಿ 16ರಂದು ಕರ್ನಾಟಕದ ಗಡಿಗೆ ಸಮೀಪದ ಕೇರಳದ ಕಾಂಜಿರಕೊಲ್ಲಿ ಎಂಬಲ್ಲಿ 6 ಮಂದಿ ಇದ್ದ ನಕ್ಸಲರ ಗುಂಪು ಕಾಡಾನೆಯೊಂದರ ದಾಳಿಗೆ ಸಿಲುಕಿತು. ಆ ವೇಳೆ ಕಳೆದ 21 ವರ್ಷಗಳಿಂದ ಭೂಗತನಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಶಂಕಿತ ನಕ್ಸಲ್ ಸುರೇಶ್ ಎಂಬಾತ ತೀವ್ರವಾಗಿ ಗಾಯಗೊಂಡಿದ್ದರಿಂದ ನಕ್ಸಲರ ಗುಂಪು ಆತನನ್ನು ಅಲ್ಲಿಯೇ ಬಿಟ್ಟು ತೆರಳಿತು. ಬಳಿಕ ಸುರೇಶ್‌ನನ್ನು ಕೇರಳದ ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಬಂಧಿಸಿದರು. ಅಲ್ಲಿಂದ ತೆರಳಿದ ಗುಂಪು ದುರ್ಗಮ ಅರಣ್ಯ ಎನಿಸಿದ ಭಾಗಮಂಡಲ– ತಲಕಾವೇರಿ ವನ್ಯಜೀವಿ ವಲಯದ ಮೂಲಕ ರಾಜ್ಯಕ್ಕೆ ಬಂದಿದೆ ಎಂಬ ಅನುಮಾನ ಪೊಲೀಸರದ್ದು’ ಎಂದು ಮೂಲಗಳು ತಿಳಿಸಿವೆ.

ಹಾಸನದಲ್ಲೂ ಕಟ್ಟೆಚ್ಚರ

ಹಾಸನ: ನೆರೆಯ ಕೊಡಗು ಜಿಲ್ಲೆಯಲ್ಲಿ ನಕ್ಸಲ್‌ ಚಟುವಟಿಕೆ ಕಂಡು ಬಂದಿರುವುದರಿಂದ ಜಿಲ್ಲೆಯಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದ್ದು ಕೂಬಿಂಗ್ ಕಾರ್ಯಾಚರಣೆ ಬಗ್ಗೆ ಚರ್ಚಿಸಲಾಗಿದೆ. ಪರಿಸ್ಥಿತಿ ನೋಡಿಕೊಂಡು ಪಕ್ಕದ ಜಿಲ್ಲೆಯ ಪೊಲೀಸರಿಂದ ಮಾಹಿತಿ ಪಡೆದು ಶೋಧ ಕಾರ್ಯಾಚರಣೆ ನಡೆಸುವ ಬಗ್ಗೆ ಯೋಚಿಸಲಾಗುತ್ತಿದೆ.‌

‘ಸಕಲೇಶಪುರ ಭಾಗದಲ್ಲಿ ಈ ಹಿಂದೆ ನಕ್ಸಲರು ಕಾಣಿಸಿಕೊಂಡಿರುವ ಘಟನೆಗಳು ನಡೆದಿವೆ. ಇದೀಗ ಕೊಡಗು ಗಡಿಭಾಗದಲ್ಲಿ ನಕ್ಸಲರು ಕಾಣಿಸಿಕೊಂಡಿರುವುದರಿಂದ ಜಿಲ್ಲೆಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ’ ಎಂದು ಎಸ್ಪಿ ಮೊಹಮ್ಮದ್‌ ಸುಜೀತಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT