ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲಕ್ಕೂ ಮುನ್ನ ಮನೆ ಸಿಗಲ್ಲ ಸಂತ್ರಸ್ತರ ಸೂರು: ಒಂದೇ ಏಜೆನ್ಸಿ ‘ಪಾಲು’

ಪ್ರಕೃತಿ ವಿಕೋಪ: ಮನವಿಗೆ ಬೆಲೆ ಇಲ್ಲ, 5 ತಿಂಗಳಾದರೂ ಆಶ್ರಯ ಸಿಕ್ಕಿಲ್ಲ
Last Updated 17 ಜನವರಿ 2019, 4:49 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗಿನಲ್ಲಿ ಪ್ರವಾಹ, ಭೂಕುಸಿತದ ದುರಂತ ಸಂಭವಿಸಿ ಐದು ತಿಂಗಳು ಕಳೆದರೂ ಸಂತ್ರಸ್ತರಿಗೆ ಶಾಶ್ವತ ಸೂರು ಸಿಕ್ಕಿಲ್ಲ. ಪುನರ್ವಸತಿ ಕಾಮಗಾರಿ ಪ್ರಗತಿ ನೋಡಿದರೆ ಮಳೆಗಾಲಕ್ಕೂ ಮುನ್ನ ಮನೆ ಸಿಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ರಾಜ್ಯ ಸರ್ಕಾರ ಒಂದೇ ಏಜೆನ್ಸಿಗೆ ಮನೆ ನಿರ್ಮಾಣದ ಹೊಣೆ ನೀಡಿದ್ದು ವಿಳಂಬಕ್ಕೆ ಕಾರಣವಾಗಿದೆ.

ಆರಂಭದಲ್ಲಿ ತಾಲ್ಲೂಕಿನ ಗಾಳಿಬೀಡು ಗ್ರಾಮದಲ್ಲಿ ವಿವಿಧ ಏಜೆನ್ಸಿಗಳು ‘ಮಾದರಿ ಮನೆ’ ನಿರ್ಮಿಸಿದ್ದವು. ಮುಳಿಯ ಏಜೆನ್ಸಿ, ಕಾವೇರಿ ಹೌಸಿಂಗ್‌, ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮ, ಮೊಡಲಾರ್‌ ಬಿಲ್ಡ್‌– ಹೀಗೆ ಆರು ಏಜೆನ್ಸಿಗಳು 30 ದಿನದಲ್ಲೇ ಮಾದರಿ ಮನೆಗಳನ್ನು ಕಟ್ಟಿದ್ದವು.

ಸಂತ್ರಸ್ತರು ಆಯ್ಕೆ ಮಾಡುವ ಮನೆಯನ್ನೇ ನಿರ್ಮಿಸಿಕೊಡುವ ಆಸೆ ತೋರಿಸಲಾಗಿತ್ತು. ಕೊನೆಗೆ ರಾಜ್ಯ ಸರ್ಕಾರ ಉಲ್ಟಾ ಹೊಡೆಯಿತು. ಗೋಪ್ಯವಾಗಿ ‘ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮ’ಕ್ಕೇ 840 ಮನೆ ನಿರ್ಮಿಸುವ ಜವಾಬ್ದಾರಿ ವಹಿಸಿ ಕೈತೊಳೆದುಕೊಂಡಿತು. ಈ ನಿರ್ಧಾರದಿಂದ ಸಂತ್ರಸ್ತರ ಸೂರಿನ ಆಸೆ ನಿಧಾನಕ್ಕೆ ಕಮರುತ್ತಿದೆ.

ಸಂಕಷ್ಟಕ್ಕೆ ಒಳಗಾದ ಜನರಿಗೆ ಹತ್ತಿರದ ಸ್ಥಳಗಳಾದ ಮದೆ, ಸಂಪಾಜೆ, ಜಂಬೂರು, ಕರ್ಣಂಗೇರಿ, ಕೆ.ನಿಡುಗಣಿ, ಗಾಳಿಬೀಡು, ಬಿಳಿಗೇರಿ ಗ್ರಾಮದಲ್ಲಿ 96 ಎಕರೆಯನ್ನು ಪುನರ್ವಸತಿಗೆ ಗುರುತಿಸಲಾಗಿದೆ.

‘7 ಸ್ಥಳಗಳಲ್ಲೂ ಪ್ರತ್ಯೇಕ ಏಜೆನ್ಸಿಗೆ ಮನೆ ನಿರ್ಮಾಣಕ್ಕೆ ಟೆಂಡರ್‌ ನೀಡಬೇಕು. ಆಗ ಬಹುಬೇಗ ಮನೆ ನಿರ್ಮಿಸಲು ಸಾಧ್ಯವಾಗಲಿದೆ’ ಎಂದು ಪ್ರಕೃತಿ ವಿಕೋಪ ಸಂತ್ರಸ್ತರ ಹೋರಾಟ ಸಮಿತಿ ಪದಾಧಿಕಾರಿಗಳು, ಕೆಲವು ಅಧಿಕಾರಿಗಳು ಒತ್ತಡ ತಂದಿದ್ದರು. ಆದರೆ, ಸರ್ಕಾರ ಈ ಮನವಿಗೆ ಸ್ಪಂದಿಸಲಿಲ್ಲ. ‘ಯಾವ ಕಾರಣಕ್ಕೆ ರಾಜೀವ್‌ ಗಾಂಧಿ ವಸತಿ ನಿಗಮವನ್ನು ಮಾತ್ರ ಆಯ್ಕೆ ಮಾಡಲಾಗಿದೆ ಎಂಬುದಕ್ಕೆ ಉತ್ತರಿಸಬೇಕು’ ಎಂದು ಹೋರಾಟ ಸಮಿತಿ ಪದಾಧಿಕಾರಿಗಳು ಆಗ್ರಹಿಸುತ್ತಿದ್ದಾರೆ.

ಪ್ರತಿಮನೆಗೆ ₹ 9.85 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಪ್ರತಿ ಕುಟುಂಬಕ್ಕೆ 2 ಮಲಗುವ ಕೋಣೆಯುಳ್ಳ ಮನೆ ನಿರ್ಮಿಸುವ ಆಸೆ ತೋರಿಸಲಾಗಿತ್ತು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಡಿಸೆಂಬರ್‌ 7ರಂದು ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಜಂಬೂರು ಗ್ರಾಮದಲ್ಲಿ ಅಡಿಪಾಯ ಕೆಲಸ ಪ್ರಗತಿಯಲ್ಲಿದೆ. ಕರ್ಣಂಗೇರಿ ಗ್ರಾಮದಲ್ಲಿ 5 ಮನೆ ಗೋಡೆ ನಿರ್ಮಾಣ ಕೆಲಸ ನಡೆಯುತ್ತಿದೆ. ಉಳಿದ 5 ಪುನರ್ವಸತಿ ಸ್ಥಳಗಳಲ್ಲಿ ಪ್ರಗತಿ ಕಂಡಿಲ್ಲ. ಮನೆಗಳು ಮೇಲೆದ್ದಿಲ್ಲ.

ಗುರಿ ಕಡಿಮೆ: ನಿಗಮವು ಪ್ರತಿ ತಿಂಗಳು 60 ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದೆ. ಅದರಂತೆ ಮೇ 15ರ ವೇಳೆಗೆ ಬರೀ 240 ಮನೆ ನಿರ್ಮಿಸಲು ಸಾಧ್ಯ. ಉಳಿದ 600 ಸಂತ್ರಸ್ತರಿಗೆ ಮಳೆಗಾಲಕ್ಕೂ ಮುನ್ನವೇ ಸೂರು ಸಿಗುವುದು ಅನುಮಾನವಾಗಿದೆ. ಕೊಡಗಿನಲ್ಲಿ ಕಳೆದ ವರ್ಷ ಮೇ ಅಂತ್ಯಕ್ಕೆ ಮಳೆ ಆರಂಭಗೊಂಡಿತ್ತು. ಜೂನ್‌– ಆಗಸ್ಟ್‌ ನಡುವೆ ಬಿಡದೆ ಸುರಿದ ಮಳೆಯಿಂದ ಅನಾಹುತ ಸಂಭವಿಸಿತ್ತು. ಆ ದುಃಸ್ವಪ್ನ ಇನ್ನೂ ಕಾಡುತ್ತಿದ್ದು, ಮನೆ ನಿರ್ಮಾಣ ಕಾಮಗಾರಿ ವಿಳಂಬ ಸಂತ್ರಸ್ತರಲ್ಲಿ ಕಣ್ಣೀರು ತರಿಸಿದೆ.

ಹಣದ ನಿರೀಕ್ಷೆ: ಮನೆ ನಿರ್ಮಾಣವಾಗುವ ತನಕ ಸಂತ್ರಸ್ತರಿಗೆ ಪ್ರತಿ ತಿಂಗಳು ₹ 10 ಸಾವಿರ ಬಾಡಿಗೆ ಹಣ ನೀಡಲು ನಿರ್ಧರಿಸಿತ್ತು. ಅದು ಕೇವಲ 350 ಕುಟುಂಬಗಳಿಗೆ ಮಾತ್ರ ಸಿಕ್ಕಿದೆ. ಉಳಿದವರು ಬಾಡಿಗೆ ಹಣದ ನಿರೀಕ್ಷೆಯಲ್ಲಿ ಇದ್ದಾರೆ.

‘ಪ್ರಕೃತಿ ವಿಕೋಪದಿಂದ 2 ಸಾವಿರ ಮನೆಗಳು ಕುಸಿದಿದ್ದವು. ಆದರೆ, 840 ಮನೆಗಳ ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ. ಸುತ್ತಲೂ ಭೂಕುಸಿತವಾಗಿ ಹಲವು ಪ್ರದೇಶಗಳು ವಾಸಕ್ಕೆ ಯೋಗ್ಯವಾಗಿಲ್ಲ. ಅವರನ್ನು ಪಟ್ಟಿಗೆ ಸೇರಿಸಿಲ್ಲ. ಈ ಬಾರಿಯೂ ಮಹಾಮಳೆ ಸುರಿದರೆ ಅವರೂ ಆಶ್ರಯ ಕಳೆದುಕೊಳ್ಳಲಿದ್ದಾರೆ’ ಎಂದು ಹೋರಾಟ ಸಮಿತಿಯ ಎಂ.ಬಿ.ದೇವಯ್ಯ ಆತಂಕದಿಂದ ನುಡಿಯುತ್ತಾರೆ.

ದಾನಿಗಳ ದೂರವಿಟ್ಟ ಸರ್ಕಾರ

ಭೂಕುಸಿತದ ವೇಳೆ ಇನ್ಫೊಸಿಸ್‌ ಫೌಂಡೇಷನ್‌, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿವಿಧ ಮಠಗಳು ಹಾಗೂ ಸಂಘ– ಸಂಸ್ಥೆಗಳ ದಾನಿಗಳು ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಮುಖ್ಯಮಂತ್ರಿ ಜತೆಗೂ ಚರ್ಚಿಸಿದ್ದರು.

‘ಯಾರಿಗೂ ಮನೆ ನಿರ್ಮಾಣಕ್ಕೆ ಅವಕಾಶವಿಲ್ಲ. ಸರ್ಕಾರವೇ ಮನೆ ನಿರ್ಮಿಸಲಿದೆ. ಸಂತ್ರಸ್ತರ ಬಡಾವಣೆಗಳಿಗೆ ಮೂಲಸೌಕರ್ಯ ಕಲ್ಪಿಸಬಹುದು’ ಎಂದು ದಾನಿಗಳನ್ನೂ ದೂರವಿಡಲಾಗಿತ್ತು. ಹೀಗಾಗಿ, ಇನ್ಫೊಸಿಸ್‌ ಫೌಂಡೇಷನ್‌ ಸಂತ್ರಸ್ತ ಮಹಿಳೆಯರಿಗೆ ಸ್ವಾವಲಂಬಿ ಬದುಕಿಗಾಗಿ ಹೊಲಿಗೆ ಯಂತ್ರ ವಿತರಿಸಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 2,106 ಸಂತ್ರಸ್ತ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಮಠಾಧೀಶರೂ ನೇರವಾಗಿ ನೆರವು ವಿತರಿಸಿದ್ದಾರೆ.

‘ಜಿಲ್ಲಾಡಳಿತ ಜಾಗ ನೀಡಿದ್ದರೆ ಸಾಕಿತ್ತು. ಈ ವೇಳೆಗೆ ದಾನಿಗಳು ಮನೆ ಕಟ್ಟಿಕೊಡುತ್ತಿದ್ದರು. ದಾನಿಗಳಿಗೂ ಅವಕಾಶ ನೀಡದೇ ಸರ್ಕಾರವೂ ಕಾಳಜಿ ವಹಿಸದೆ ಸಂತ್ರಸ್ತರನ್ನು ಅತಂತ್ರ ಸ್ಥಿತಿಗೆ ತಳ್ಳಿದೆ’ ಎಂಬ ನೋವಿನ ನುಡಿಗಳು ಕೇಳಿಬರುತ್ತಿವೆ.

ಇತ್ತ ಜಿಲ್ಲಾಧಿಕಾರಿಯೂ ಇಲ್ಲ. ಅತ್ತ ಜಿಲ್ಲಾ ಉಸ್ತುವಾರಿಯೂ ಗಮನ ಹರಿಸುತ್ತಿಲ್ಲ. ಕೊಡಗಿನ ಬಿಜೆಪಿ ಶಾಸಕರೂ ಸರ್ಕಾರ ರಚಿಸಲು ರೆಸಾರ್ಟ್‌ ಸೇರಿದ್ದಾರೆ.
–ಇಂದ್ರೇಶ್, ಸಂತ್ರಸ್ತ, ದೇವಸ್ತೂರು ಗ್ರಾಮ

**

‘ಮೈತ್ರಿ’ ಸರ್ಕಾರಕ್ಕೆ ಆರಂಭದಲ್ಲಿದ್ದ ಉತ್ಸಾಹ ಈಗಿಲ್ಲ. ಮನೆ ನಿರ್ಮಾಣ ಕಾಮಗಾರಿ ಚುರುಕುಗೊಳಿಸಲು ಒತ್ತಾಯಿಸಿ ಮತ್ತೆ ಹೋರಾಟಕ್ಕೆ ಇಳಿಯುತ್ತೇವೆ.
–ಎಂ.ಬಿ.ದೇವಯ್ಯ ಅಧ್ಯಕ್ಷ, ಪ್ರಕೃತಿ ವಿಕೋಪ ಸಂತ್ರಸ್ತರ ಹೋರಾಟ ಸಮಿತಿ

**

ಅಂಕಿಅಂಶಗಳು
840 – ಜಿಲ್ಲಾಡಳಿತ ತಯಾರಿಸಿರುವ ಸಂತ್ರಸ್ತರ ಪಟ್ಟಿ

96 – ಎಕರೆ ಪುನರ್ವಸತಿಗೆ ಗುರುತಿಸಿರುವ ಜಾಗ

₹9.85 ಲಕ್ಷ – ಪ್ರತಿ ಮನೆ ನಿರ್ಮಾಣದ ವೆಚ್ಚ

₹110.36 ಕೋಟಿ – ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಂದಾಯವಾಗಿರುವ ಹಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT