ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಢನಂಬಿಕೆ ಜೀವಂತವಾಗಿರುವುದು ದುರಂತ: ಟಿ.ಜಿ. ಪ್ರೇಮಕುಮಾರ್

ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ 
Last Updated 8 ಏಪ್ರಿಲ್ 2019, 13:36 IST
ಅಕ್ಷರ ಗಾತ್ರ

ಮಡಿಕೇರಿ: ‘ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಸಮಾಜದಲ್ಲಿ ಬೇರೂರಿರುವ ಕಂದಾಚಾರ, ಮೌಢ್ಯಗಳ ವಿರುದ್ಧ ಹೋರಾಟನಡೆಸಬೇಕು’ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಜಿಲ್ಲಾ ಸಮಿತಿ ಸಂಚಾಲಕ ಟಿ.ಜಿ. ಪ್ರೇಮಕುಮಾರ್ ಕರೆ ನೀಡಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ನಡೆದ 2018–19ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದಲ್ಲಿ ಮಹತ್ತರ ಸಾಧನೆ ಮಾಡಿದ್ದರೂ ಸಮಾಜದಲ್ಲಿ ಇಂದು ಮೂಢನಂಬಿಕೆಗಳು ಜೀವಂತವಾಗಿರುವುದು ದುರಂತ ಎಂದು ಹೇಳಿದರು.

ವೈಜ್ಞಾನಿಕ ಮನೋವೃತ್ತಿಯನ್ನು ಉತ್ತೇಜಿಸುವುದು ಕೇವಲ ವಿಜ್ಞಾನಿಗಳ ಕೆಲಸವಲ್ಲ; ಇದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದರು.

ಆಗಸ್ಟ್‌ನಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ್ದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ನಾಡಿನ ಜನರು, ಸಂತ್ರಸ್ತರಿಗೆ ನೆರವಾದ ಸನ್ನಿವೇಶ ನಿಜಕ್ಕೂ ಮಾನವೀಯತೆಗೆ ಹಿಡಿದ ಕನ್ನಡಿ. ಪ್ರಕೃತಿ ವಿಕೋಪದ ಸವಾಲುಗಳನ್ನು ಎದುರಿಸುವುದರ ಜತೆಗೆ ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ವೈ. ಚಿತ್ರಾ ಮಾತನಾಡಿ, ಶಿಕ್ಷಣದಿಂದ ಮಾತ್ರ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಸಾಧ್ಯ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಉದಾತ್ತ ವ್ಯಕ್ತಿತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಮೂಲಕ ರಾಷ್ಟ್ರದ ಅಭ್ಯುದಯಕ್ಕೆ ಶ್ರಮಿಸಬೇಕು ಎಂದರು.

ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಿ.ಆರ್.ಶಶಿಧರ್, ಕಾಲೇಜಿನ ವಾರ್ಷಿಕ ವರದಿ ಓದಿದರು. ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಕೆ.ಸಿ.ದಯಾನಂದ ಬಹುಮಾನ ವಿತರಿಸಿದರು.

ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಂ.ಎನ್.ಪ್ರಕಾಶ್, ರಾಘವೇಂದ್ರ, ಮುತ್ತಮ್ಮ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಡಿ.ಎಂ.ಪೃಥ್ವಿ, ಕಾರ್ಯದರ್ಶಿ ಎ.ಸುಭಾಷ್, ಜಂಟಿ ಕಾರ್ಯದರ್ಶಿ ಆರ್.ಸಿ.ರೂಪಿಣಿ ಇದ್ದರು.

ಉತ್ತಮ ವಿದ್ಯಾರ್ಥಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ನಂತರ, ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT