ಚರಂಡಿ ಕಾಮಗಾರಿಯಿಂದ ಮನೆಗಳಿಗೆ ಅಪಾಯ

ಮಂಗಳವಾರ, ಜೂಲೈ 16, 2019
23 °C
ಗುಡ್ಡದ ಮೇಲಿರುವ ಮನೆಗಳಿಗೆ ಆತಂಕ, ಕಾಮಗಾರಿ ಸ್ಥಗಿತ

ಚರಂಡಿ ಕಾಮಗಾರಿಯಿಂದ ಮನೆಗಳಿಗೆ ಅಪಾಯ

Published:
Updated:
Prajavani

ಮಡಿಕೇರಿ: ಬೇಸಿಗೆಯಲ್ಲಿ ಸ್ತಬ್ಧವಾಗಿದ್ದ ಜೆಸಿಬಿ ಯಂತ್ರಗಳು ಮತ್ತೆ ಕೊರೆಯಲು ಬಂದಿವೆ. ಚರಂಡಿ ಕಾಮಗಾರಿಯಿಂದ ಗುಡ್ಡದ ಮೇಲಿರುವ ಮನೆಗಳಿಗೆ ಅಪಾಯವಿದೆ. ಕೂಡಲೇ ಕಾಮಗಾರಿ ಸ್ಥಗಿತಗೊಳಿಸಬೇಕು ಎಂಬುದು ಕತ್ತಲೆಕಾಡು ಗ್ರಾಮಸ್ಥರ ಆಗ್ರಹವಾಗಿದೆ. 

ಹೌದು, ಮಡಿಕೇರಿ ತಾಲ್ಲೂಕಿನ ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕತ್ತಲೆಕಾಡು ಮುಖ್ಯರಸ್ತೆ ಬದಿಯಲ್ಲಿ ಎರಡು ದಿನದಿಂದ ಚರಂಡಿ ತೋಡುವ ಕೆಲಸಕ್ಕೆ ಲೋಕೋಪಯೋಗಿ ಇಲಾಖೆ ಮುಂದಾಗಿತ್ತು. ಗುರುವಾರ ಬೆಳಿಗ್ಗೆ ಜೆಸಿಬಿ ಯಂತ್ರದ ಮೂಲಕ ಕಾಮಗಾರಿ ನಡೆಸಲು ಬಂದಂತೆಯೇ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು. ಮಳೆಗಾಲದಲ್ಲಿ ಕಾಮಗಾರಿ ನಡೆಸಬಾರದು ಎಂದು ಆಗ್ರಹಿಸಿದರು.

ಮಳೆಗಾಲಕ್ಕೆ ಬೇಕಾದ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಕಳೆದ ಕೆಲವು ತಿಂಗಳಿಂದ ಹೇಳುತ್ತಲೇ ಇದೆ. ಆದರೆ, ಅಧಿಕಾರಿಗಳು ಮಾತ್ರ ಮಳೆ ಬರುವ ಸಂದರ್ಭಗಳಲ್ಲಿಯೇ ಕಾಮಗಾರಿ ನಡೆಸಿದ್ದಾರೆ. ಇದರಿಂದ ಗುಡ್ಡದ ಮೇಲೆ ನಿರ್ಮಿಸಿರುವ ಮನೆಗಳಿಗೆ ತೊಂದರೆ ಆಗಿದೆ ಎಂದು ಆರೋಪಿಸಿದರು.

ರಸ್ತೆಬದಿ ಗುಡ್ಡದ ಮೇಲೆ ಮನೆಗಳಿರುವುದರಿಂದ ಚರಂಡಿ ಕೊರೆದರೆ ಜೋರು ಮಳೆಯಾದಾಗ ರಸ್ತೆ ಹಾಗೂ ಮನೆಗಳಿಗೆ ತೊಂದರೆಯಾಗಲಿದೆ. ಕಳೆದ ವರ್ಷದ ಮಳೆಗೆ ಮನೆ ಪಕ್ಕದಲ್ಲಿ ಭೂಕುಸಿತವಾಗಿದ್ದು, ಜೆಸಿಬಿ ಯಂತ್ರದ ಒತ್ತಡದಿಂದ ಮಣ್ಣು ಸಡಿಲಗೊಂಡು ಮತ್ತೆ ಕುಸಿತವಾಗುವ ಸಂಭವ ಹೆಚ್ಚು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಇಲಾಖೆಯ ಲೋಕೋಪಯೋಗಿ ಎಂಜಿನಿಯರ್‌ ಚನ್ನಕೇಶವ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಗ್ರಾಮಸ್ಥರು ತರಾಟೆಗೂ ತೆಗೆದುಕೊಂಡರು.

ಬೇಸಿಗೆಯಲ್ಲಿ ಈ ಕೆಲಸ ಮಾಡದೇ ಮಳೆ ಶುರುವಾದ ಬಳಿಕ ರಸ್ತೆಬದಿ ಅಗೆದು ವಾಹನ ಸವಾರರಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ತೊಂದರೆ ಕೊಡಲಾಗುತ್ತಿದೆ. ಈ ಹಿಂದೆ ಕೂಡಾ ಇದೇ ಜಾಗದಲ್ಲಿ ಮಣ್ಣು ಅಗೆದು ಚರಂಡಿ ನಿರ್ಮಿಸಲಾಗಿತ್ತು ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಾದೇಟಿರ ತಿಮ್ಮಯ್ಯ ಆರೋಪಿಸಿದರು.

ವಸ್ತುಸ್ಥಿತಿಯ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಲೋಕೋಪಯೋಗಿ ಇಲಾಖೆಗೆ ಪತ್ರ ಮೂಲಕ ತಿಳಿಸಿ, ಕಾಮಗಾರಿ ಮುಂದುವರೆಸದಂತೆ ಮನವಿ ಮಾಡುತ್ತೇನೆ ಎಂದು ತಿಮ್ಮಯ್ಯ ಭರವಸೆ ನೀಡಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !