ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಇಲಾಖೆ ಅಧಿಕಾರಿಗಳಿಂದ ಕಿರುಕುಳ

ಕುಟ್ಟಂದಿ ಗ್ರಾಮದ ಗುಡ್ಡಮಾಡು ಕಾಲೊನಿ ನಿವಾಸಿಗಳ ಅಳಲು
Last Updated 15 ಜುಲೈ 2019, 16:01 IST
ಅಕ್ಷರ ಗಾತ್ರ

ಮಡಿಕೇರಿ: ‘ಅರಣ್ಯ ಇಲಾಖೆಯ ಸಿಬ್ಬಂದಿ, ವಿರಾಜಪೇಟೆ ತಾಲ್ಲೂಕಿನ ಕುಟ್ಟಂದಿ ಗ್ರಾಮದ ಗುಡ್ಡಮಾಡು ಕಾಲೊನಿ ನಿವಾಸಿಗಳಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ’ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ದೂರಿದೆ.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಜಿಲ್ಲಾ ಕಾರ್ಯದರ್ಶಿ ವೈ.ಕೆ. ಗಣೇಶ್ ಮಾತನಾಡಿ, ‘ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಅವರು ಸ್ಥಳ ಪರಿಶೀಲನೆ ನಡೆಸಿ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದರು.

‘ಗುಡ್ಡಮಾಡು ಕಾಲೊನಿಯಲ್ಲಿ ಸುಮಾರು 22 ಆದಿವಾಸಿ ಕುಟುಂಬಗಳು ಕಳೆದ 20 ವರ್ಷಗಳಿಂದ ವಾಸಿಸುತ್ತಿವೆ. ಸರ್ಕಾರ ನಿರ್ಮಿಸಿಕೊಟ್ಟ ಮನೆಗಳಲ್ಲಿ ಆಶ್ರಯ ಪಡೆದಿವೆ. ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಮತ್ತು ರಸ್ತೆ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದೆ. ಸುಮಾರು 83 ಎಕರೆ ಪ್ರದೇಶವನ್ನು ಆದಿವಾಸಿಗಳಿಗಾಗಿ ಮೀಸಲಿಡಲಾಗಿದೆ. ಆದರೆ, ಕೆಲವು ತಿಂಗಳಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ’ ಎಂದು ಆಪಾದಿಸಿದರು.

‘ಇಲಾಖೆಗೆ ಸೇರಿದ ಜಾಗವೆಂದು ಹೇಳಿ ಅಲ್ಲಿಂದ ಸ್ಥಳಾಂತರ ಮಾಡುವಂತೆ ಸಿಬ್ಬಂದಿ ಬೆದರಿಕೆ ಹಾಕುತ್ತಿದ್ದಾರೆ. ಆದಿವಾಸಿಗಳಿಗೆ ಜಿಲ್ಲಾಡಳಿತ ಸೂಕ್ತ ರಕ್ಷಣೆ ನೀಡಿ, ಸಿಬ್ಬಂದಿಗಳ ವಿರುದ್ಧ ದೌರ್ಜನ್ಯ ಕಾಯ್ದೆ ಅಡಿ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದರು.

ನಿವಾಸಿ ವೈ.ಎಂ.ಸುಬ್ರಮಣಿ ಮಾತನಾಡಿ, ‘ಮೂಲಸೌಲಭ್ಯಗಳು ದೊರೆತ ಪರಿಣಾಮ ಹೆಚ್ಚುವರಿ 28 ಆದಿವಾಸಿ ಕುಟುಂಬಗಳು ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿವೆ. 52 ಕುಟುಂಬಗಳು ಈ ಭಾಗದಲ್ಲಿ ನೆಲೆ ನಿಂತಿವೆ. ಆದರೆ, ಅರಣ್ಯ ಸಿಬ್ಬಂದಿಗಳು ಇದು ಅರಣ್ಯಕ್ಕೆ ಸೇರಿದ ಜಾಗವಾಗಿದ್ದು, ತಕ್ಷಣ ಸ್ಥಳಾಂತರಗೊಳ್ಳಿ ಎಂದು ಎಚ್ಚರಿಕೆ ನೀಡಿ ಹೋಗುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡರು.

‘ನಮ್ಮ ವಿರುದ್ಧ ದೂರು ನೀಡಿದರೆ, ನಿಮ್ಮ ಮೇಲೆಯೇ ಬಲವಾದ ಮತ್ತೊಂದು ದೂರು ದಾಖಲಿಸುವುದಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು ಬೆದರಿಕೆಯೊಡ್ಡಿದ್ದಾರೆ. ವಿರಾಜಪೇಟೆ ತಹಶೀಲ್ದಾರ್ ಬಳಿ ಈ ಬಗ್ಗೆ ಮನವಿ ಮಾಡಲಾಗಿತ್ತು. ಆಗ ಇದು ಪೈಸಾರಿ ಜಾಗವೆಂದು ಗೊತ್ತಾಗಿದೆ. ತಹಶೀಲ್ದಾರ್‌ ಸಹ ಅರಣ್ಯ ಇಲಾಖೆಗೆ ಪತ್ರ ಬರೆದು ಪೈಸಾರಿ ಜಾಗವೆಂದು ಸ್ಪಷ್ಟಪಡಿಸಿದ್ದಾರೆ. ಆದರೂ, ಅರಣ್ಯ ಇಲಾಖೆ ಸಿಬ್ಬಂದಿ ಕಿರುಕುಳ ನಿಂತಿಲ್ಲ’ ಎಂದು ಅಳಲು ತೋಡಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ನಿವಾಸಿಗಳಾದ ವೈ.ಟಿ.ಮಣಿ, ಪಿ.ಸಿ.ಚಿಣ್ಣ, ಜೆ.ಆರ್.ಸುರೇಶ್, ಜೆ.ಆರ್.ರವಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT