ವೈದ್ಯರ ಕೊರತೆ: ಸಾರ್ವಜನಿಕರ ಪ್ರತಿಭಟನೆ

ಸೋಮವಾರ, ಏಪ್ರಿಲ್ 22, 2019
29 °C
ಜಿಲ್ಲೆಯ ಗಡಿಗ್ರಾಮ ಕುಟ್ಟದಲ್ಲಿ ಘಟನೆ: ಚಿಕಿತ್ಸೆ ಸಿಗದೇ ರೋಗಿಯ ಸಾವು

ವೈದ್ಯರ ಕೊರತೆ: ಸಾರ್ವಜನಿಕರ ಪ್ರತಿಭಟನೆ

Published:
Updated:
Prajavani

ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನ ಕುಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೇ ರೋಗಿಗಳಿಗೆ ತೊಂದರೆ ಆಗುತ್ತಿದ್ದು ಚಿಕಿತ್ಸೆ ಸಿಗದೇ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಕುಟ್ಟ ಗ್ರಾಮದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಮಂಗಳವಾರ ತಡರಾತ್ರಿ ಮಣಿ (43) ಅವರಿಗೆ ಎದೆನೋವು ಕಾಣಿಸಿಕೊಂಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದರು. ಆದರೆ, ಆಸ್ಪತ್ರೆಯಲ್ಲಿ ವೈದ್ಯರಾಗಲಿ, ನರ್ಸ್ ಆಗಲಿ ಇರಲಿಲ್ಲ. ಚಿಕಿತ್ಸೆ ಸಿಗದೇ ಮಣಿ ಅವರು ಮೃತಪಟ್ಟಿದ್ದಾರೆ ಎಂದು ಆಪಾದಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಗೋಣಿಕೊಪ್ಪಲು ಆಸ್ಪತ್ರೆಯ ವೈದ್ಯರನ್ನು ತಾತ್ಕಾಲಿಕವಾಗಿ ನೇಮಿಸಲಾಗಿದ್ದು, ಅವರೂ ವಾರದಲ್ಲಿ ಎರಡು ದಿನ ಮಾತ್ರ ಕರ್ತವ್ಯಕ್ಕೆ ಬರುತ್ತಾರೆ. ಕುಟ್ಟ ಹೋಬಳಿ ಕೇಂದ್ರವಾಗಿದ್ದು ಸುತ್ತಮುತ್ತಲ ಜನರು ಇದೇ ಆಸ್ಪತ್ರೆಯನ್ನು ಚಿಕಿತ್ಸೆಗೆ ಅವಲಂಬಿಸಿದ್ದಾರೆ. ಆದರೆ, ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.

ಕಳೆದ ವಾರವೂ ನಾಲ್ಕು ವರ್ಷದ ಮಗುವೊಂದು ಚಿಕಿತ್ಸೆ ಸಿಗದೇ ಸಾವನ್ನಪ್ಪಿತ್ತು. ಈ ಸಂಬಂಧ ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕ್ರಮ ಕೈಗೊಂಡಿಲ್ಲ. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್‌ ಅವರು ಸ್ಥಳಕ್ಕೆ ಬರಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಕೊಡಗಿನ ಗಡಿ ಗ್ರಾಮವಾಗಿರುವ ಕುಟ್ಟದಲ್ಲಿ ಹಲವು ವರ್ಷಗಳಿಂದಲೂ ಈ ಸಮಸ್ಯೆಯಿದೆ. ಜಿಲ್ಲೆಯಲ್ಲಿ ಚಿಕಿತ್ಸೆ ಸಿಗದೇ ಕೇರಳಕ್ಕೆ ಹೋಗುವ ಪರಿಸ್ಥಿತಿಯಿದೆ. ಶಾಸಕರು ಹಾಗೂ ಸಂಸದರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.

‘ಚಿಕಿತ್ಸೆ ಸಿಗದೇ ಯಾರೂ ಸಾವನ್ನಪ್ಪಿಲ್ಲ. ರಾತ್ರಿ ವೇಳೆ ಆಸ್ಪತ್ರೆಯಲ್ಲಿ ವೈದ್ಯರು ಇರುವುದಿಲ್ಲ ಎಂಬ ದೂರು ಬಂದಿದೆ. ದೂರಿನ ಹಿನ್ನೆಲೆಯಲ್ಲಿ ಕುಟ್ಟಕ್ಕೆ ನೋಡಲ್‌ ಅಧಿಕಾರಿಯನ್ನು ಕಳುಹಿಸಿ ವರದಿ ತರಿಸಿಕೊಳ್ಳುತ್ತೇನೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೆ. ಮೋಹನ್‌ ತಿಳಿಸಿದ್ದಾರೆ.  

ವಾರದಲ್ಲಿ ಮೂರು ರಾತ್ರಿ ಆಸ್ಪತ್ರೆಗೆ ನೇಮಿಸಿರುವ ವೈದ್ಯರೇ ಆಸ್ಪತ್ರೆಯಲ್ಲಿ ಇರಬೇಕು. ಉಳಿದ ಮೂರು ರಾತ್ರಿ ಅಕ್ಕಪಕ್ಕದ  ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಕರ್ತವ್ಯ ಮಾಡಬೇಕು ಎಂದು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !