ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟ್ಟ ಆಸ್ಪತ್ರೆಗೆ ಹೆಚ್ಚುವರಿ ವೈದ್ಯರು

ಆರೋಗ್ಯಾಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಸೂಚನೆ
Last Updated 21 ಮಾರ್ಚ್ 2019, 11:49 IST
ಅಕ್ಷರ ಗಾತ್ರ

ಮಡಿಕೇರಿ: ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ತೊಂದರೆ ಆಗದಂತೆ ಆರೋಗ್ಯ ಸೇವೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ವೈದ್ಯಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವೈದ್ಯರಿಲ್ಲದ ಆಸ್ಪತ್ರೆಗಳಿಗೆ ಆಯುಷ್ ವೈದ್ಯರನ್ನು ನಿಯೋಜಿಸಬೇಕು. ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ದೊರೆಯಬೇಕು. ದೂರುಗಳು ಕೇಳಿ ಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ಜಿಲ್ಲೆಯ ಕುಟ್ಟ ಸಮುದಾಯ ಆಸ್ಪತ್ರೆ ಸೇರಿದಂತೆ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಇಲ್ಲದೇ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಅಲ್ಲಿಗೆ ಹೆಚ್ಚುವರಿ ವೈದ್ಯರನ್ನು ನಿಯೋಜಿಸಬೇಕು ಎಂದು ತಾಕೀತು ಮಾಡಿದರು.

ವೈದ್ಯರ ಕೊರತೆ ಇರುವ ಸಮುದಾಯ ಆಸ್ಪತ್ರೆಗಳಿಗೆ ವೈದ್ಯರನ್ನು ನಿಯೋಜಿಬೇಕು. ಜೊತೆಗೆ ಎಲ್ಲ ವೈದ್ಯರನ್ನು ರಾತ್ರಿ ಪಾಳಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಬೇಕು. ತಾರತಮ್ಯ ಅನುಸರಿಸಬಾರದು ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು.

ಚುನಾವಣೆ ಮುಗಿದ ನಂತರ ಮಳೆಗಾಲ ಆರಂಭವಾಗುತ್ತದೆ. ಆದ್ದರಿಂದ ವಿಪತ್ತು ಎದುರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಜ್ಜಾಗಬೇಕಿದೆ. ಆ ನಿಟ್ಟಿನಲ್ಲಿ ಈಗಿನಿಂದಲೇ ಯೋಜನೆ ರೂಪಿಸಬೇಕು ಎಂದು ಅನೀಸ್ ಕಣ್ಮಣಿ ಸಲಹೆ ಮಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಪ್ರತಿಕ್ರಿಯಿಸಿ ಜಿಲ್ಲೆಯಲ್ಲಿ ತಜ್ಞ ವೈದ್ಯರ 20 ಹುದ್ದೆಗಳು , 9 ಸಾಮಾನ್ಯ ವೈದ್ಯ ಹುದ್ದೆಗಳು, ಒಬ್ಬರು ದಂತ ವೈದ್ಯರು ಹುದ್ದೆಗಳು ಖಾಲಿಯಿದೆ ಎಂದು ಮಾಹಿತಿ ನೀಡಿದರು.

ಸಮುದಾಯ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆಯಿದ್ದು, ಈ ಆಸ್ಪತ್ರೆಗಳಿಗೆ ಹೆಚ್ಚುವರಿ ವೈದ್ಯರನ್ನು ನಿಯೋಜಿಸಲು ಪ್ರಯತ್ನಿಸಲಾಗಿದೆ ಎಂದು ತಿಳಿಸಿದರು.

ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು, ಮತ್ತೊಬ್ಬ ವೈದ್ಯರು ಆಸ್ಪತ್ರೆಗೆ ಬಂದ ನಂತರ ತೆರಳಬೇಕು. ಆ ನಿಟ್ಟಿನಲ್ಲಿ ತಾಲ್ಲೂಕು ವೈದ್ಯಾಧಿಕಾರಿಗಳು ಗಮನಹರಿಸಬೇಕು ಎಂದು ತಿಳಿಸಿದರು.

ವಿಪತ್ತು ನಿರ್ವಹಣೆ ಸಂಬಂಧ ಈಗಾಗಲೇ ಯೋಜನೆ ರೂಪಿಸಲಾಗುತ್ತಿದ್ದು, ಮಡಿಕೇರಿ ತಾಲ್ಲೂಕಿಗೆ 3, ಸೋಮವಾರಪೇಟೆ 2 ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲಿ 1 ತಂಡ ನಿಯೋಜಿಸಲಾಗುತ್ತದೆ. ಹಾಗೆಯೇ ಮೈಸೂರು, ಹಾಸನ, ದಕ್ಷಿಣ ಕನ್ನಡ ಜಿಲ್ಲೆಗಳಿಂದ ಹೆಚ್ಚುವರಿ ವೈದ್ಯರನ್ನು ಕರೆಸಿಕೊಳ್ಳಲಾಗುವುದು ಅವರು ವಿವರಣೆ ನೀಡಿದರು.

ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ.ಎ.ಸಿ. ಶಿವಕುಮಾರ್, ಡಾ.ಯತಿರಾಜು, ಡಾ.ಶ್ರೀನಿವಾಸ್, ಕಾರ್ಯಕ್ರಮ ಅಧಿಕಾರಿಗಳಾದ ಡಾ.ಆನಂದ್, ಡಾ.ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT