ಕಾವೇರಿ ನದಿಯಲ್ಲಿ ನೀರಿನ ಹರಿವು ಕ್ಷೀಣ: ಅಕ್ರಮ ಕಟ್ಟೆ ತೆರವು ಕಾರ್ಯಾಚರಣೆ

ಶುಕ್ರವಾರ, ಏಪ್ರಿಲ್ 26, 2019
31 °C

ಕಾವೇರಿ ನದಿಯಲ್ಲಿ ನೀರಿನ ಹರಿವು ಕ್ಷೀಣ: ಅಕ್ರಮ ಕಟ್ಟೆ ತೆರವು ಕಾರ್ಯಾಚರಣೆ

Published:
Updated:
Prajavani

ಕುಶಾಲನಗರ: ಕಾವೇರಿ ನದಿಯಲ್ಲಿ ನೀರಿನ ಹರಿವು ಕ್ಷೀಣಿಸುತ್ತಿದ್ದು ನದಿಗೆ ಅಕ್ರಮವಾಗಿ ಕಟ್ಟಲಾಗಿರುವ ಕಟ್ಟೆಗಳನ್ನು ಜಲಮಂಡಳಿ ಅಧಿಕಾರಿಗಳು ತೆರವುಗೊಳಿಸಿದರು.

ಕಳೆದ ವರ್ಷ ಆಗಸ್ಟ್‌ನಲ್ಲಿ ಜಲಪ್ರಳಯ ಸೃಷ್ಟಿಸಿದ್ದ ಕಾವೇರಿ ನದಿಯಲ್ಲಿ ಈಗಾಗಲೇ ನೀರಿನ ಹರಿವು ಕ್ಷೀಣಗೊಂಡಿದೆ. ಕುಶಾಲನಗರ ಪಟ್ಟಣ ಸೇರಿದಂತೆ ನದಿ ದಂಡೆಯ ಮೇಲಿನ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ.

ಕುಶಾಲನಗರದ ವಿವಿಧ ಬಡಾವಣೆಗಳಲ್ಲಿ ಜನಪ್ರತಿನಿಧಿಗಳು, ಸಂಘ–ಸಂಸ್ಥೆಗಳ ಮುಖಂಡರು ಹಾಗೂ ಪ.ಪಂ ವತಿಯಿಂದ ಟ್ಯಾಂಕರ್ ಮೂಲಕ ಜನರಿಗೆ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿದೆ.

ಜಲಮಂಡಳಿ ವತಿಯಿಂದ ಬೈಚನಹಳ್ಳಿ ಪಂಪ್‌ಹೌಸ್ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಮರಳಿನ ಚೀಲಗಳಿಂದ ಕಟ್ಟೆಕಟ್ಟಿ ನೀರು ಪೂರೈಸಲು ಕ್ರಮ ಕೈಗೊಂಡಿದ್ದರಾದರೂ ಎಲ್ಲ ಬಡಾವಣೆಗಳಿಗೂ ಅಗತ್ಯವಾಗಿರುವ 28 ಲಕ್ಷ ಲೀಟರ್ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ.

ನದಿಯಲ್ಲಿ ನೀರಿನ ಕೊರತೆಯಿಂದಾಗಿ ಜಲಚರಗಳಿಗೂ ತೀವ್ರ ತೊಂದರೆಯಾಗಿದೆ. ಜತೆಗೆ, ಕಾವೇರಿ ನದಿ ಪಾತ್ರದಲ್ಲಿರುವ ಕೃಷಿಕರು ಹಾಗೂ ಕೈಗಾರಿಕೆ ನಡೆಸುವವರು ಮೋಟರ್ ಬಳಸಿ ನೀರು ಎತ್ತದಂತೆ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದು, ಈ ಕಾರಣ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ದಿಢೀರ್ ಕಾರ್ಯಾಚರಣೆ ಕೈಗೊಂಡರು. ಹತ್ತಾರೂ ಕಡೆಗಳಲ್ಲಿ ಮರಳಿನ ಚೀಲಗಳನ್ನು ಬಳಸಿ ನಿರ್ಮಿಸಲಾಗಿದ್ದ ಕಟ್ಟೆಯನ್ನು ತೆರವುಗೊಳಿಸಿ ನೀರು ಸರಗವಾಗಿ ಹರಿಯಲು ಅವಕಾಶ ಮಾಡಿಕೊಟ್ಟರು.

ಜತೆಗೆ, ನದಿಗೆ ಕಾನೂನುಬಾಹಿರವಾಗಿ ಖಾಸಗಿಯಾಗಿ ಕಟ್ಟೆಕಟ್ಟಿದ ನದಿ ಪಾತ್ರದ ರೈತರು ಹಾಗೂ ಕೈಗಾರಿಕೋದ್ಯಮಿಗಳಿಗೆ ಕಟ್ಟೆ ಕಟ್ಟದಂತೆ ಎಚ್ಚರಿಕೆ ನೀಡಿದರು.

ಕಾವೇರಿ ನಿಸರ್ಗಧಾಮ ತೂಗುಸೇತುವೆ ಬಳಿ ನಿರ್ಮಿಸಿದ್ದ ಕಟ್ಟೆಯನ್ನು ತೆರವುಗೊಳಿಸಿ ನೀರು ಹರಿಸಲಾಯಿತು. ನಿಸರ್ಗಧಾಮದ ಖಾಸಗಿ ಪ್ರವಾಸಿ ಕೇಂದ್ರಗಳಿಗೆ ಸರಬರಾಜು ಮಾಡುತ್ತಿದ್ದ ನೀರನ್ನು ಸ್ಥಗಿತಗೊಳಿಸುವಂತೆ ಹಾಗೂ ಪ್ರವಾಸಿಗರಿಗೆ ನಡೆಸುತ್ತಿದ್ದ ಬೋಟಿಂಗ್ ವ್ಯವಸ್ಥೆಯನ್ನು ನಿಲ್ಲಿಸುವಂತೆ ಅಧಿಕಾರಿಗಳು ಸೂಚನೆ ನೀಡಿದರು.

ನಂತರ, ನದಿ ದಡದಲ್ಲೇ ಗುಡ್ಡೆಹೊಸೂರಿನ ತೆಪ್ಪದಕಂಡಿ ತನಕ ಸಾಗಿದ ಸಿಬ್ಬಂದಿ ಸುಮಾರು 10 ಕಿ.ಮೀ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಕಂಡು ಬಂದ ಅನಧಿಕೃತ ಕಟ್ಟೆಗಳನ್ನು ತೆರವುಗೊಳಿಸಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಜಯ್ ಕುಮಾರ್, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಎಂಜಿನಿಯರ್‌ ಎಂ.ಆನಂದ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. 

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !