ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ ಬಿಜೆಪಿಗೆ ವಿರೋಧವೇ ಇಲ್ಲ: ಡಿ.ವಿ.ಸದಾನಂದಗೌಡ

ವಿಜಯ ಸಂಕಲ್ಪ ಯಾತ್ರೆಯಲ್ಲಿ ಡಿ.ವಿ.ಸದಾನಂದಗೌಡ, ಕೆ.ಎಸ್.ಈಶ್ವರಪ್ಪ ಪ್ರತಿಪಾದನೆ
Last Updated 11 ಮಾರ್ಚ್ 2023, 16:36 IST
ಅಕ್ಷರ ಗಾತ್ರ

ಮಡಿಕೇರಿ: ಬಿಜೆಪಿಗೆ ವಿರೋಧವೇ ಇಲ್ಲದ ಸ್ಥಿತಿ ಕೊಡಗಿನಲ್ಲಿದೆ ಎಂಬುದನ್ನು ಗೋಣಿಕೊಪ್ಪಲಿನಲ್ಲಿ ನಡೆದ ಸಮಾವೇಶ ಸಾಬೀತುಪಡಿಸಿದೆ ಎಂದು ಸಂಸದ ಡಿ.ವಿ.ಸದಾನಂದಗೌಡ ತಿಳಿಸಿದರು.

ನಗರದಲ್ಲಿ ಶನಿವಾರ ನಡೆದ ಬಿಜೆಪಿಯ ವಿಜಯಸಂಕಲ್ಪ ಯಾತ್ರೆಯಲ್ಲಿಅವರು ಮಾತನಾಡಿದರು.

‘ಬಿಜೆಪಿಯ ಎಲ್ಲ ಮುಖ್ಯಮಂತ್ರಿಗಳು ಕೊಡಗಿಗೆ ವಿಶೇಷ ಅನುದಾನಗಳನ್ನು ನೀಡಿ ಇಲ್ಲಿನ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಹೊಸ ಕೊಡಗನ್ನಾಗಿ ಪರಿವರ್ತನೆ ಮಾಡುವ ಕೆಲಸ ಮಾಡಿದ್ದೇವೆ. ಕೊಟ್ಟ ಮಾತನ್ನು ಈಡೇರಿಸುವ ರಾಜಕಾರಣ ನಮ್ಮದೇ ಹೊರತು ಸುಮ್ಮನೇ ಭರವಸೆಗಳನ್ನು ಕೊಡುವ ಕಾಂಗ್ರೆಸ್‌ನ ರಾಜಕಾರಣ ನಮ್ಮದ್ದಲ್ಲ’ ಎಂದರು.

‘ಕೊಡಗಿನಲ್ಲಿ ಮಾತ್ರವಲ್ಲ ಪಕ್ಕದ ಹಾಸನ ಜಿಲ್ಲೆಯಲ್ಲೂ ಬಿಜೆಪಿಗೆ ಹೆಚ್ಚಿನ ಬೆಂಬಲ ಸಿಗುತ್ತಿರುವುದು ವಿಶೇಷ’ ಎಂದರು.

ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ‘ಕಾಂಗ್ರೆಸ್ ಸುಮ್ಮನೆ ಅಭ್ಯರ್ಥಿಯನ್ನು ಏಕೆ ಹಾಕಬೇಕು. ಸೋಲುವುದು ಖಚಿತ ಎಂದು ಗೊತ್ತಿದ್ದರೂ ನಾಮಕಾವಸ್ಥೆಗೆ ಅಭ್ಯರ್ಥಿಯನ್ನು ಹಾಕುತ್ತಾರೆ. ಕೊಡಗಿನ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಎಂದು ಈಗಾಗಲೇ ತೀರ್ಮಾನವಾಗಿದೆ’ ಎಂದು ಹೇಳಿದರು.

‘ಬಿಜೆಪಿಯು ಪ್ರಬಲ ನಾಯಕತ್ವ, ಕಾರ್ಯಕರ್ತರ ಸಂಘಟನಾ ಶಕ್ತಿ, ಅಭಿವೃದ್ಧಿ ಹಾಗೂ ಭಾರತೀಯ ಸಂಸ್ಕೃತಿಯ ರಕ್ಷಣೆ ಎಂಬ ನಾಲ್ಕು ಅಂಶಗಳನ್ನಿಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ. ಈ ಬಾರಿ ಸಂಪೂರ್ಣ ಬಹುಮತ ಸಿಗುವ ವಿಶ್ವಾಸವಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಮುಖಂಡರಾದ ಸುನೀಲ್ ಸುಬ್ರಹ್ಮಣಿ, ಬಿ.ಬಿ.ಭಾರತೀಶ್, ರವಿಕುಶಾಲಪ್ಪ ಇದ್ದರು.

‌ವಾರವಿಡೀ ಕಾರ್ಯಕ್ರಮ: ಮಾರ್ಚ್ 13ರಂದು ಸೋಮವಾರಪೇಟೆಯ ಒಕ್ಕಲಿಗರ ಸಮುದಾಯದ ಭವನದಲ್ಲಿ ನಡೆಯಲಿರುವ ಯುವಮೋರ್ಚಾ ಸಮಾವೇಶದಲ್ಲಿ ಇಂಧನ ಸಚಿವ ಸುನಿಲ್‌ಕುಮಾರ್, 14ರಂದು ಮೂರ್ನಾಡುವಿನಲ್ಲಿ ನಡೆಯಲಿರುವ ರೈತ ಮೋರ್ಚಾ ಸಭೆಯಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ, 15ರಂದು ವಿರಾಜಪೇಟೆಯಲ್ಲಿ ನಡೆಯಲಿರುವ ಮಹಿಳಾ ಮೋರ್ಚಾದ ಸಭೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, 16ರಂದು ಕುಶಾಲನಗರದಲ್ಲಿ ನಡೆಯಲಿರುವ ಎಸ್.ಸಿ. ಮೋರ್ಚಾ ಸಭೆಯಲ್ಲಿ ಗೋವಿಂದ ಕಾರಜೋಳ, 20ರಂದು ಪೊನ್ನಂಪೇಟೆಯಲ್ಲಿ ಎಸ್.ಟಿ.ಮೋರ್ಚಾ ಸಭೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT