ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

29ರಿಂದ ‌ವಿಶ್ವ ಕೊಡವ ಸಮ್ಮೇಳನ

ಎರಡು ದಿನಗಳ ನಡೆಯಲಿರುವ ಸಮ್ಮೇಳನದಲ್ಲಿ 15 ಸಾವಿರ ಮಂದಿ ಭಾಗಿಯಾಗುವ ನಿರೀಕ್ಷೆ
Published 27 ಡಿಸೆಂಬರ್ 2023, 8:35 IST
Last Updated 27 ಡಿಸೆಂಬರ್ 2023, 8:35 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್ ಡಿ. 29 ಮತ್ತು 30ರಂದು ಆಯೋಜಿಸಿರುವ ವಿಶ್ವ ಕೊಡವ ಸಮ್ಮೇಳನಕ್ಕೆ ಭರದ ಸಿದ್ಧತೆಗಳು ನಡೆದಿವೆ.

‘ಸಮ್ಮೇಳನಕ್ಕೆ ಈಗಾಗಲೇ ಸಾವಿರಕ್ಕೂ ಅಧಿಕ ಕೊಡವ ಕುಟುಂಬಗಳನ್ನು ಆಹ್ವಾನಿಸಲಾಗಿದ್ದು, ಸುಮಾರು 15ರಿಂದ 20 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಟ್ರಸ್ಟ್‌ನ ಅಧ್ಯಕ್ಷ ಶಾಂತೆಯಂಡ ನಿರನ್ ನಾಚಪ್ಪ ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಶ್ವದ ಬೇರೆ ಬೇರೆ ರಾಷ್ಟ್ರಗಳಲ್ಲಿರುವ ಕೊಡವ ಕುಟುಂಬಗಳ ಸದಸ್ಯರೂ ಇದರಲ್ಲಿ ಭಾಗಿಯಾಗಲಿದ್ದಾರೆ. ಮಾತ್ರವಲ್ಲ, ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವವರೂ ಆಗಮಿಸಲಿದ್ದಾರೆ. ವಿಶ್ವದ ಎಲ್ಲೆಡೆ ನೆಲೆಸಿರುವ ಕೊಡವರನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ ಇದಾಗಿದೆ ಎಂದರು.

ವಿಧಾನಪರಿಷತ್ ಸದಸ್ಯರಾದ ಶಾಂತಾರಾಮ ಬುದ್ದ ಸಿದ್ಧಿ, ಮಂಡೇಪಂಡ ಸುಜಾ ಕುಶಾಲಪ್ಪ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ, ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಪಠ್ಯಕ್ರಮ ಮುಖ್ಯ ಸಲಹೆಗಾರರಾದ ಡಾ.ಚೇತನ್ ಸಿಂಘೈ, ಎಂ.ಎಸ್.ರಶ್ಮಿ ಸಮಂತ್, ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ಶಾಸಕ ಡಾ.ಮಂತರ್‌ಗೌಡ, ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ್‌ ಸಂಗಪ್ಪ ಆಲೂರ್, ಆತ್ಮನಿರ್ಭರ ಯೋಜನೆಯ ಅಧ್ಯಕ್ಷೆ ಕುಪ್ಪಂಡ ಛಾಯಾ ನಂಜಪ್ಪ, ಮಡಿಕೇರಿ ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಟ್ರಸ್ಟ್‌ನ ನಿರ್ದೇಶಕ ಪಾಲೇಂಗಡ ಅಮಿತ್ ಭೀಮಯ್ಯ ಮಾತನಾಡಿ, ‘ಡಿ. 29ರಂದು ಬೆಳಿಗ್ಗೆ 9 ಗಂಟೆಗೆ ಎಲ್ಲಾ ಕೊಡವ ಮನೆತನಗಳು ತಮ್ಮ ಕುಟುಂಬದ ಬಾವುಟಗಳನ್ನು ಹಿಡಿದು ಮಡಿಕೇರಿಯ ಖಾಸಗಿ ಬಸ್‌ನಿಲ್ದಾಣದಿಂದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನವರೆಗೂ ಮೆರವಣಿಗೆ ನಡೆಸಲಿದ್ದಾರೆ. ನಂತರ, 11.45ಕ್ಕೆ ಸಮ್ಮೇಳನ ಉದ್ಘಾಟನೆಗೊಳ್ಳಲಿದೆ’ ಎಂದು ಹೇಳಿದರು.

ಆಧ್ಯಾತ್ಮಿಕ ವಿಜ್ಞಾನಿ ಬೊಪ್ಪಂಡ ರಶ್ಮಿ ಅಯ್ಯಪ್ಪ ಅವರು ಮಧ್ಯಾಹ್ನ 1.40ಕ್ಕೆ ಆರೋಗ್ಯ ರಕ್ಷಣೆ ಕುರಿತು ಮಾಹಿತಿ ನೀಡಲಿದ್ದಾರೆ. 3.10ಕ್ಕೆ ಡಾ.ಚೆಪ್ಪುಡಿರ ಜಿ ಕುಶಾಲಪ್ಪ ಅವರ ನೇತೃತ್ವದಲ್ಲಿ ಕೊಡವರು ಕೊಡಗಿನಲ್ಲಿ ಆಸ್ತಿ ಮಾರಾಟ ತಡೆ ಮತ್ತು ನಮ್ಮ ಆಚರಣೆಗಳು, ಸಂಸ್ಕೃತಿಗೆ ತಕ್ಕಂತೆ ಕೃಷಿಯನ್ನು ಮುಂದುವರಿಸಲು ಪರ್ಯಾಯ ಮಾರ್ಗಗಳ ಅನ್ವೇಷನೆ ಕುರಿತ ಚಿಂತನಾಗೋಷ್ಠಿ ನಡೆಯಲಿದೆ ಎಂದು ತಿಳಿಸಿದರು.

ಇದರೊಂದಿಗೆ ತಕ್ಕಾಮೆ ಪದ್ಧತಿಯ ಮಹತ್ವ ಕುರಿತು, ವ್ಯಾಪಾರ ವ್ಯವಹಾರಗಳಲ್ಲಿ ಕೊಡವ ಜನಾಂಗದವರಿಗೆ ಮಾರ್ಗದರ್ಶನ ನೀಡುವ ಕುರಿತು ಗೋಷ್ಠಿಗಳು ಇರಲಿವೆ ಎಂದರು.

ಸುಮಾರು 40 ತಂಡಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ಆಹಾರ ಹಾಗೂ ಮತ್ತಿತ್ತರೆ ಮಳಿಗೆಗಳು, ಕೊಡವ ಭಾಷಾ ಪುಸ್ತಕ ಮಾರಾಟ ಮಳಿಗೆಗಳು, ಕೊಡವ ಐನ್‌ಮನೆಯ ಮಾದರಿಗಳು  ಸಮ್ಮೇಳನದ ಪ್ರಧಾನ ಆಕರ್ಷಣೆ ಎನಿಸಲಿವೆ ಎಂದು ಹೇಳಿದರು.

ಡಿ. 30ರಂದು ಬೆಳಿಗ್ಗೆ 9 ಗಂಟೆಯಿಂದಲೇ ಸಾಂಪ್ರದಾಯಿಕ ನೃತ್ಯಗಳು ನಡೆಯಲಿದ್ದು, 10.20ಕ್ಕೆ ಸಾಂಸ್ಕೃತಿಕ ಸಮಾವೇಶ, 11.30ಕ್ಕೆ 40 ಕೊಡವ ಸಾಧಕರಿಗೆ ಸನ್ಮಾನ, 1.50ಕ್ಕೆ ಕ್ರೀಡಾ ಸಮಾವೇಶ, 3.20ಕ್ಕೆ ಔದ್ಯೋಗಿಕ ಸಮಾವೇಶ, 4.50ಕ್ಕೆ ನಾಗರಿಕ ಮತ್ತು ರಕ್ಷಣಾ ಸೇವೆಯ ಸಮಾವೇಶ, ಸಂಜೆ 6 ಗಂಟೆಗೆ ಎಲ್ಲ ಕೊಡವ ಸಮಾಜಗಳ ಅಧ್ಯಕ್ಷರ ಸಮಾವೇಶ ಹಾಗೂ 7.10ಕ್ಕೆ ಗನ್ ಸಮಾವೇಶ, 10.10ಕ್ಕೆ ಸಮಾರೋಪ ಸಮಾವೇಶಗಳು ನಡೆಯಲಿವೆ ಎಂದರು.

ಟ್ರಸ್ಟ್‌ನ ಚೇಂದಂಡ ಶಮ್ಮಿ ಮಾದಯ್ಯ, ಬೊಳ್ಳೆರ ಪೃಥ್ವಿ ಪೂಣಚ್ಚ, ಮಲ್ಲೇಂಗಡ ನಿರನ್ ಸೋಮಣ್ಣ, ಚೊಟ್ಟೆಯಂಡ ಸಂಜು ಕಾವೇರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT