ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಜಮೀನಿನಲ್ಲಿ ಮರಗಳ ಸರ್ವೇಗೆ ವಿರೋಧ: ಪ್ರತಿಭಟನೆ ಎಚ್ಚರಿಕೆ

Published 5 ಮೇ 2024, 7:21 IST
Last Updated 5 ಮೇ 2024, 7:21 IST
ಅಕ್ಷರ ಗಾತ್ರ

ಮಡಿಕೇರಿ: ಖಾಸಗಿ ಜಮೀನಿನಲ್ಲಿರುವ ಸರ್ಕಾರಿ ಮರಗಳ ಸರ್ವೇ ಕಾರ್ಯವನ್ನು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ನಿಲ್ಲಿಸಬೇಕು. ಇಲ್ಲದಿದ್ದರೆ, ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾ ಘಟಕ ಎಚ್ಚರಿಕೆ ನೀಡಿದೆ.

‘ಸರ್ಕಾರ ಹೊರಡಿಸಿರುವ ಈ ಆದೇಶ ನಮ್ಮ ಹಕ್ಕನ್ನು ಕಿತ್ತು ಕೊಂಡಂತೆ. ಇಲ್ಲಿರುವ ರೈತರು, ಬೆಳೆಗಾರರು ಯಾರು ಸಹ ಮರಗಳನ್ನು ತೆಗೆದು ತೋಟ ಮಾಡುವುದಿಲ್ಲ ಎಂಬ ಕನಿಷ್ಠ ತಿಳಿವಳಿಕೆಯು ಸರ್ಕಾರಕ್ಕಿಲ್ಲವೇ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಕೊಡಗಿನ ಬೆಳೆಗಾರರು ಅರಣ್ಯ ನಾಶ ಮಾಡಿದ ಉದಾಹರಣೆಗಳೇ ಇಲ್ಲ. ಶತಮಾನಗಳಿಂದ ಇಲ್ಲಿರುವ ಮರಗಳನ್ನು ಜತನದಿಂದ ಕಾಪಾಡಿಕೊಂಡಿದ್ದಾರೆ. ಈಗ ಸರ್ವೇ ಕಾರ್ಯ ನಡೆಸಿ ಮರಗಳ ಲೆಕ್ಕವನ್ನು ತೆಗೆದಿಟ್ಟುಕೊಂಡಲ್ಲಿ ಮುಂದೆ ಮರಗಳು ಕಳ್ಳತನವಾದರೆ ಹಾಗೂ ಪ್ರಕೃತಿ ವಿಕೋಪದಿಂದ ಮರಗಳು ಬಿದ್ದು ಹೋದರೆ ಯಾರು ಹೊಣೆ ಎಂದು ಅವರು ಪ್ರಶ್ನಿಸಿದರು.

ಈ ಹೊಣೆಗಾರಿಕೆಗೆ ಹೆದರಿ ಸರ್ವೇ ಕಾರ್ಯಕ್ಕೂ ಮುನ್ನವೇ ಬೆಳೆಗಾರರು ತಮ್ಮಲ್ಲಿರುವ ಮರಗಳನ್ನು ಕಡಿಯುವ ಸಾಧ್ಯತೆಯೂ ಹೆಚ್ಚಿದೆ. ಈ ಅಪಕ್ವ ಆದೇಶದಿಂದ ಅರಣ್ಯ ಇಲಾಖೆಯೇ ಕಾಡುಗಳ ನಾಶಕ್ಕೆ ಕಾರಣವಾಗಲಿದೆ ಎಂದು ಅವರು ಕಿಡಿಕಾರಿದರು.’

ಈಗಾಗಲೇ ಅಧಿಕಾರಿಗಳು ಒಂದಿಷ್ಟು ಗ್ರಾಮಗಳ ಪಟ್ಟಿ ಮಾಡಿದ್ದಾರೆ. ನಿಜವಾಗಿಯೂ ಅಧಿಕಾರಿಗಳು ಹಾಗೂ ಸಿಬ್ಬಂದಿ ತೋಟಗಳಿಗೆ ತೆರಳಿ ಸರ್ವೇ ಕಾರ್ಯ ನಡೆಸಿರುವ ಕುರಿತೂ ಅನುಮಾನಗಳಿವೆ. ಕಚೇರಿಯಲ್ಲಿ ಕುಳಿತು ತಾವೇ ಒಂದಿಷ್ಟು ಸಂಖ್ಯೆಯ ಮರಗಳಿವೆ ಎಂದು ಪಟ್ಟಿ ತಯಾರಿಸಿರುವ ಸಾಧ್ಯತೆಯೂ ಇದೆ. ಕೂಡಲೇ ಈ ಬಗೆಯ ಪ್ರಯತ್ನಗಳನ್ನು ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.

ಮುಖ್ಯಮಂತ್ರಿ ಕಾನೂನು ಸಲಹೆಗಾರರು ಮೊದಲು ಅರಣ್ಯದಲ್ಲಿರುವ ಮರಗಳ ಸರ್ವೇ ಕಾರ್ಯ ನಡೆಸಿ ಅದರ ಪಟ್ಟಿ ತಯಾರಿಸಿ ಅವುಗಳ ಉಳಿವಿಗೆ ಮುಂದಾಗುವಂತಹ ಸಲಹೆಗಳನ್ನು ಮುಖ್ಯಮಂತ್ರಿಗೆ ನೀಡಲಿ. ಅದು ಬಿಟ್ಟು ರೈತರಿಗೆ, ಬೆಳೆಗಾರರಿಗೆ ತೊಂದರೆಯಾಗುವಂತಹ ಇಂತಹ ಆದೇಶಗಳನ್ನು ಹೊರಡಿಸಲು ಅವರು ಬಿಡಬಾರದು ಎಂದು ಸಲಹೆ ನೀಡಿದರು.

ಬಿಜೆಪಿ ಮುಖಂಡ ಎಂ.ಪಿ.ಸುನಿಲ್ ಸುಬ್ರಮಣಿ ಮಾತನಾಡಿ, ‘ತಲೆತಲಾಂತರಗಳಿಂದ ಅನುಭವಿಸಿಕೊಂಡು ಬಂದ ರೈತರು, ಬೆಳೆಗಾರರ ಖಾಸಗಿ ಆಸ್ತಿಗಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ನುಗ್ಗುವುದು ಬೇಡ. ಇದು ಅನಗತ್ಯ ಕಾಟ. ಕೊಡಗಿಗೆ ಮಾರಕವಾದ ಆದೇಶ. ಮುಖ್ಯಮಂತ್ರಿಯ ಕಾನೂನು ಸಲಹೆಗಾರರಿಗೂ ಇಲ್ಲಿ ತೋಟ ಇದೆ ಎಂಬುದನ್ನು ಅವರು ಮರೆಯಬಾರದು’ ಎಂದು ಹೇಳಿದರು.

ಮುಂದಿನ 24 ಗಂಟೆಗಳಲ್ಲಿ ಮಾರಕವಾಗಿರುವ ಈ ಆದೇಶವನ್ನು ವಾಪಸ್ ಪಡೆಯದೇ ಹೋದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್‌ ಜೈನಿ, ಚಲನ್‌ಕುಮಾರ್, ವಿ.ಕೆ.ಲೋಕೇಶ್, ಜಿಲ್ಲಾ ವಕ್ತಾರ ಬಿ.ಕೆ.ಅರುಣ್‌ಕುಮಾರ್ ಭಾಗವಹಿಸಿದ್ದರು.

ಎ.ಎಸ್. ಪೊನ್ನಣ್ಣ
ಎ.ಎಸ್. ಪೊನ್ನಣ್ಣ
24 ಗಂಟೆಗಳಲ್ಲಿ  ಆದೇಶ ವಾಪಸ್ ಪಡೆಯಲು ಆಗ್ರಹ ಉಗ್ರ ಪ್ರತಿಭಟನೆಯ ಎಚ್ಚರಿಕೆ
ಆತಂಕಕ್ಕೆ ಒಳಗಾಗುವುದು ಬೇಡ; ಪೊನ್ನಣ್ಣ
ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ ‘ರೈತರು ಹಾಗೂ ಬೆಳೆಗಾರರು ಆತಂಕಕ್ಕೆ ಒಳಗಾಗುವುದು ಬೇಡ’ ಎಂದು ತಿಳಿಸಿದರು. ಬೆಳೆಗಾರರ ಹಕ್ಕುಗಳನ್ನು ರಕ್ಷಿಸುವ ಕೆಲಸ ಮಾಡಲಾಗುವುದು. ಸರ್ಕಾರ ರೈತರ ಪರ ಇದೆ ಎಂದು ಹೇಳಿದರು. ಈ ಪ್ರಕರಣವನ್ನು ರಾಜಕಾರಣಕ್ಕಾಗಿ ತಿರುಚುವ ಪ್ರಯತ್ನಗಳೂ ಸರಿಯಲ್ಲ. ರೈತರು ಆತಂಕಕ್ಕೆ ಒಳಗಾಗಬಾರದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT