ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿ ಮಾಂಸ ದುಬಾರಿ ಮಾರಾಟ: ದಂಡ

ಕೋವಿಡ್ ಷರತ್ತು ಉಲ್ಲಂಘನೆ: ಒಟ್ಟು ₹ 33,500 ದಂಡ ಸಂಗ್ರಹ
Last Updated 15 ಮೇ 2021, 3:47 IST
ಅಕ್ಷರ ಗಾತ್ರ

ವಿರಾಜಪೇಟೆ: ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಸಂಸ್ಥೆಯೊಂದಕ್ಕೆ ಸೇರಿದ ಕೋಳಿ ಮಾಂಸ ಮಾರಾಟ ಮಳಿಗೆಯಲ್ಲಿ ದುಬಾರಿ ದರದಲ್ಲಿ ಕೋಳಿ ಮಾಂಸ ಮಾರಾಟ ಮಾಡುತ್ತಿದ್ದ ದೂರಿನ ಮೇರೆಗೆ ವಿಚಕ್ಷಣಾ ದಳ ಮಳಿಗೆಯನ್ನು ಮುಚ್ಚಿಸಿ ಮಾಂಸ ಮಾರಾಟ ಮಾಡದಂತೆ ಷರತ್ತು ವಿಧಿಸಿದೆ.

ಕೆಲ ದಿನಗಳ ಹಿಂದೆ ಇದೇ ಮಳಿಗೆಯಲ್ಲಿ ಕೋಳಿ ಮಾಂಸವನ್ನು ಕೆ.ಜಿ. ಯೊಂದಕ್ಕೆ ₹ 220 ರಂತೆ ಮಾರಾಟ ಮಾಡುತ್ತಿದ್ದುದರ ಕುರಿತು ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಶುಕ್ರವಾರವೂ ದುಬಾರಿ ದರದಲ್ಲಿ ಕೋಳಿ ಮಾಂಸ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ವಿಚಕ್ಷಣಾದಳ ಮಳಿಗೆ ಬಂದ್ ಮಾಡಿಸಿದೆ.

ಅದೇ ರಸ್ತೆಯಲ್ಲಿನ ಮತ್ತೊಂದು ಸಂಸ್ಥೆಗೆ ಸೇರಿದ ಕೋಳಿ ಮಾಂಸ ಮಾರಾಟ ಮಳಿಗೆಗೂ ದುಬಾರಿ ದರದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಇದಲ್ಲದೆ ಪಟ್ಟಣದಲ್ಲಿ ದುಬಾರಿ ದರದಲ್ಲಿ ಕೋಳಿ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರು ವರ್ತಕರಿಗೆ ತಲಾ ₹ 1 ಸಾವಿರ ದಂಡ ವಿಧಿಸಲಾಗಿದೆ.

ಕೋಳಿ ಮಾಂಸದ ದರ ಏರಿಕೆಯ ಕುರಿತು ಮೇ 12ರಂದು ಪ್ರಜಾವಾಣಿ ‘ಗಗನಕ್ಕೇರಿದ ಕೋಳಿ ಮಾಂಸದ ದರ’ ಎಂಬ ಶೀರ್ಷಿಕೆಯಡಿಯಲ್ಲಿ ಪಟ್ಟಣದಲ್ಲಿ ವಿಶೇಷ ಲೇಖನ ಪ್ರಕಟಿಸಿತ್ತು.

ನಿಯಮ ಉಲ್ಲಂಘಿಸಿದವರಿಗೆ ದಂಡ: ಪಟ್ಟಣದ ಖಾಸಗಿ ಸಭಾಂಗಣದಲ್ಲಿ ರಾತ್ರಿ ಮದುವೆ ಆಯೋಜಿಸಿ ಕೋವಿಡ್ ಷರತ್ತು ಉಲ್ಲಂಘಿಸಿದ ಆಯೋಜಕರಿಗೆ ₹ 10 ಸಾವಿರ, ಪಟ್ಟಣದ ರಿಕ್ರಿಯೇಷನ್ ಕ್ಲಬ್‌ನಲ್ಲಿ ಮದುವೆ ಆಯೋಜಿಸಿದ ಆಯೋಜಕರಿಗೆ ₹ 2 ಸಾವಿರ, ಕೆದಮುಳ್ಳೂರು ಬಳಿಯ ತೋರ ಗ್ರಾಮದಲ್ಲಿ ಮದುವೆಗೆ ನಿಗದಿತ ಸಂಖ್ಯೆಗಿಂತ ಹೆಚ್ಚು ಮಂದಿಯನ್ನು ಸೇರಿಸಿದ್ದ ಆಯೋಜಕರಿಗೆ ₹ 3 ಸಾವಿರ, ಷರತ್ತು ಉಲ್ಲಂಘಿಸಿದ ಕೊಡಗು ದಂತ ವೈದ್ಯ ಕಾಲೇಜಿನ ಕ್ಯಾಂಟೀನ್‌ಗೆ ₹ 5 ಸಾವಿರ, ಪಟ್ಟಣದ ಮೊಗರಗಲ್ಲಿನ ಶಾಮಿಯಾನ ಮಳಿಗೆಯನ್ನು ತೆರೆದಿದ್ದ ಮಳಿಗೆಯೆ ಮಾಲೀಕನಿಗೆ ₹ 1 ಸಾವಿರ ದಂಡ ವಿಧಿಸಲಾಗಿದೆ.

ಪಟ್ಟಣದ ಮತ್ಸ್ಯಭವನದಲ್ಲಿ ಹಾಗೂ ಪ್ರಾವಿಷನ್ ಸ್ಟೋರ್ಸ್‌ವೊಂದರಲ್ಲಿ ಅಂತರ ಕಾಯ್ದುಕೊಳ್ಳದ ಇಬ್ಬರಿಗೆ ದಂಡ ವಿಧಿಸಲಾಗಿದೆ. ನಿರ್ಬಂಧವನ್ನು ಉಲ್ಲಂಘಿಸಿ ಪಟ್ಟಣದ ನೆಹರೂ ನಗರದಲ್ಲಿ ಅಂಗಡಿ ತೆರೆದಿದ್ದ ಅಂಗಡಿಯ ಮಾಲೀಕರಿಬ್ಬರಿಗೆ ತಲಾ ₹ 2,500 ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.

ಷರತ್ತು ಉಲ್ಲಂಘಿಸಿ ಆರ್ಜಿ ಗ್ರಾಮದ ಹಾಗೂ ಪಟ್ಟಣದಲ್ಲಿನ ತಲಾ ಒಂದೊಂದು ಪ್ರಾರ್ಥನಾ ಮಂದಿರದ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಪಟ್ಟಣ ಸೇರಿದಂತೆ ಸುತ್ತ ಮುತ್ತಲ ಪ್ರದೇಶದಲ್ಲಿ ಕೋವಿಡ್-19 ಷರತ್ತು ಉಲ್ಲಂಘಿಸಿ ಮಾಸ್ಕ್ ಧರಿಸದೆ ಸುತ್ತುತ್ತಿದ್ದ 51 ಮಂದಿಗೆ ತಲಾ ₹ 100 ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ. ವಿಚಕ್ಷಣಾ ದಳವು ಇಲ್ಲಿಯವರೆಗೆ ವಿವಿಧ ರೀತಿಯಿಂದ ಕೋವಿಡ್-19 ಷರತ್ತು ಉಲ್ಲಂಘಿಸಿದವರಿಂದ ಒಟ್ಟು ₹ 33,500 ದಂಡ ವಸೂಲಿ ಮಾಡಿದೆ ಎಂದು ವಿಚಕ್ಷಣಾ ದಳದ ಅಧಿಕಾರಿ ಪ್ರದೀಪ್ ಕುಮಾರ್ ಮಾಹಿತಿ ನೀಡಿದ್ದಾರೆ.

ವಿಚಕ್ಷಣಾ ದಳದ ತಂಡದಲ್ಲಿ ಬಿ.ಎಂ.ನಾಣಯ್ಯ ಹಾಗೂ ಸಮುಚ್ಚಯ ಪೊಲೀಸ್ ಠಾಣೆಯ ಎ.ಎಸ್.ಐ ಮಾದಯ್ಯ ಕರ್ತವ್ಯ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT