ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಕಾಡು ಸಂರಕ್ಷಕ ಅನಿಲ್ ಮಲ್ಹೋತ್ರ ನಿಧನ

Last Updated 22 ನವೆಂಬರ್ 2021, 16:02 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗಿನ ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರಾಲು ಗ್ರಾಮದಲ್ಲಿ 700 ಎಕರೆಯಷ್ಟು ಖಾಸಗಿ ಕಾಡು ಸಂರಕ್ಷಿಸಿದ್ದ ಡಾ.ಅನಿಲ್ ಮಲ್ಹೋತ್ರ (85) ಅವರು ಸೋಮವಾರ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.

ರಾಷ್ಟ್ರದಲ್ಲಿಯೇ ವಿಶಾಲ ಹಾಗೂ ದಟ್ಟವಾದ ಖಾಸಗಿ ಕಾಡು ಸಂರಕ್ಷಣೆಯ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು. ಅದಕ್ಕೆ ‘ಸಾಯಿ ಸೆಂಚ್ಯುರಿ’ ಎಂದು ಹೆಸರಿಟ್ಟಿದ್ದರು. ವಿದೇಶಿ ಮೂಲದ ಪತ್ನಿ ಪಮೇಲಾ ಅವರೊಂದಿಗೆ ಈ ಗ್ರಾಮಕ್ಕೆ ಬಂದು ನೆಲೆಸಿದ ಮೇಲೆ ಜಾಗ ಖರೀದಿಸಿ, ಹಸಿರು ಬೆಳೆಸಲು ಆರಂಭಿಸಿದ್ದರು. ಪ್ರಕೃತಿ ರಕ್ಷಣೆಗಾಗಿ ರಾಷ್ಟ್ರಮಟ್ಟದಲ್ಲೂ ಗುರುತಿಸಿಕೊಂಡಿದ್ದರು. ಏಷ್ಯಾದಲ್ಲಿಯೇ ಉತ್ತಮ ಪರಿಸರ ಸಂರಕ್ಷಕ ಎಂಬ ಬಿರುದಿಗೂ ಅನಿಲ್ ಮಲ್ಹೋತ್ರ ದಂಪತಿ ಪಾತ್ರರಾಗಿದ್ದರು.

ಬಿರುನಾಣಿ ಸಮೀಪದ ನಿಸರ್ಗ ಸ್ನೇಹಿ ಕಾಟೇಜ್‌ ನಿರ್ಮಿಸಿದ್ದರು. ಆ ಕಾಟೇಜ್‌ಗಳಿಗೆ ವಿದ್ಯುತ್‌ ಪೂರೈಸದೇ ನೈಸರ್ಗಿಕ ಬೆಳಕು ಪೂರೈಕೆ ಮಾಡುತ್ತಿದ್ದರು. ಈ ಕಾಡು ಜೀವವೈವಿಧ್ಯತೆಯ ತಾಣವಾಗಿತ್ತು. ಇಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಲಾಗಿತ್ತು. ಖಾಸಗಿ ಕಾಡಿನಲ್ಲಿ ಆನೆ, ಚಿರತೆ, ಜಿಂಕೆ, ಕಾಡೆಮ್ಮೆ, ಕರಡಿ, ಪಕ್ಷಿಗಳೂ ಕಾಣಿಸುತ್ತಿದ್ದವು ಎಂದು ಪರಿಸರ ಪ್ರೇಮಿಗಳು ಹೇಳಿದರು.

ಈ ಅರಣ್ಯದಲ್ಲಿ ನೂರಾರು ಜಲಧಾರೆಗಳಿದ್ದವು. ಸಾವಯವ ಗೊಬ್ಬರವನ್ನು ಅನಿಲ್ ಮಲ್ಹೋತ್ರ ಅವರು ಉತ್ಪಾದಿಸಿ ಸುತ್ತಮುತ್ತಲ ರೈತರಿಗೆ ವಿತರಣೆ ಮಾಡುತ್ತಿದ್ದರು. ಪರಿಸರ ಜಾಗೃತಿ ಮೂಡಿಸುತ್ತಿದ್ದರು.

ಮಂಗಳವಾರ ಮಧ್ಯಾಹ್ನ ತೆರಾಲು ಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT