ಸೋಮವಾರ, ಮಾರ್ಚ್ 8, 2021
27 °C
ಪ್ರಕೃತಿ ವಿಕೋಪಕ್ಕೆ ತುತ್ತಾದ ಕೊಡಗು, ಮಳೆಯ ಪ್ರತಾಪಕ್ಕೆ ನಡುಗಿದ ಕಾವೇರಿ ನಾಡು, ನೆಲೆ ಕಳೆದುಕೊಂಡ ಸಾವಿರಾರು ಮಂದಿ

ಬೆಟ್ಟದಲ್ಲಿ ಸಿಲುಕಿದ 200 ಮಂದಿ; ಭೂಮಿಯೊಳಗೆ ಸದ್ದು– ಜಿಲ್ಲೆ ತೊರೆಯುತ್ತಿರುವ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಎಲ್ಲೆಂದರಲ್ಲಿ ಬೆಟ್ಟಗುಡ್ಡಗಳು ಕುಸಿಯುತ್ತಿವೆ. ಹಾರಂಗಿ ಜಲಾಶಯಕ್ಕೆ ಹರಿಯುವ ಹಟ್ಟಿಹೊಳೆಯ ನೀರು ಮಕ್ಕಂದೂರು, ತಂತಿಪಾಲ, ಹೆಮ್ಮತ್ತಾಳು, ಮೇಘತ್ತಾಳ್‌ ಸುತ್ತಲೂ ಪ್ರವಾಹದಂತೆ ಆವರಿಸಿದ್ದು ಇಡೀ ಬೆಟ್ಟವೇ ಕುಸಿಯುತ್ತಿದೆ. ತಂತಿಪಾಲ ಎಂಬಲ್ಲಿ ಬೆಟ್ಟದಲ್ಲಿ ವಾಸವಾಗಿದ್ದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು, ಉಕ್ಕಿ ಹರಿಯುತ್ತಿರುವ ಹೊಳೆಯಿಂದ ರಕ್ಷಣಾ ಕಾರ್ಯವೂ ಸಾಧ್ಯವಾಗುತ್ತಿಲ್ಲ. 

ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸಿ ಇದುವರೆಗೂ 20 ಮಂದಿಯನ್ನು ರಕ್ಷಣೆ ಮಾಡಿದ್ದಾರೆ. ಗುಡ್ಡ ಕುಸಿದ ಸ್ಥಳದಲ್ಲಿ ಚಂದು,  ಹೊನ್ನಮ್ಮ ಅವರು ಮಣ್ಣಿನ ಅಡಿ ಸಿಲುಕಿ ರಕ್ಷಣೆ ಮಾಡುವಂತೆ ಅಂಗಲಾಚುತ್ತಿದ್ದರೂ ರಕ್ಷಣಾ ಸಿಬ್ಬಂದಿಗೆ ಸ್ಥಳಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. 

ಮಕ್ಕಂದೂರು ಬಳಿ 150ರಿಂದ 200 ಬೆಟ್ಟದಲ್ಲಿ ಸಿಲುಕಿಕೊಂಡಿರುವ ಮಾಹಿತಿ ಸಿಕ್ಕಿದೆ ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಭೂಮಿಯೇ ಬಾಯ್ತೆರೆದ ಅನುಭವ ಉಂಟಾಗುತ್ತಿದೆ. ಕೆದಕಲ್‌ ಸಮೀಪದ ಕಾಂಡನಕೊಲ್ಲಿ ಹಾಲೇರಿಯಲ್ಲಿ 200 ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.  

ಬೆಟ್ಟದಲ್ಲಿ ಸಿಲುಕಿಕೊಂಡವರ ರಕ್ಷಣೆಗೆ ಸೇನೆಯ ಎರಡು ಹೆಲಿಕಾಪ್ಟರ್‌ ಬಳಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಿತ್ತು. ಆದರೆ, ಹವಾಮಾನ ವೈಪರೀತ್ಯದಿಂದ ಹೆಲಿಕಾಪ್ಟರ್‌ಗಳು ಸಂಜೆಯಾದರೂ ಸ್ಥಳಕ್ಕೆ ಬಂದಿಲ್ಲ. 50 ವರ್ಷಗಳ ಬಳಿಕ ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದ ಇಡೀ ಜಿಲ್ಲೆಯೇ ನಲುಗಿ ಹೋಗಿದ್ದು ತೇವಾಂಶ ಹೆಚ್ಚಾಗಿ ಬೆಟ್ಟಗಳು ಕುಸಿಯುತ್ತಿವೆ. ಗುರುವಾರ ರಕ್ಷಣಾ ಕಾರ್ಯಾಚರಣೆ ಸಾಧ್ಯವಾಗದಿದ್ದರೆ ಶುಕ್ರವಾರ ಬೆಳಿಗ್ಗೆಯಿಂದ ಅಪಾಯದಲ್ಲಿ ಸಿಲುಕಿರುವ ರಕ್ಷಣೆ ಮಾಡುವ ಸಾಧ್ಯತೆಯಿದೆ. ಬೆಟ್ಟದ ಮಣ್ಣಿನಲ್ಲಿ ಹಲವರು ಸಿಲುಕಿಕೊಂಡಿರುವ ಸಂಶಯ ಸಹ ವ್ಯಕ್ತವಾಗಿದ್ದು ಜಿಲ್ಲಾಡಳಿತಕ್ಕೂ ನಿಖರವಾದ ಮಾಹಿತಿ ಲಭ್ಯವಾಗುತ್ತಿಲ್ಲ. ಪ್ರತಿಕೂಲ ಪರಿಸ್ಥಿತಿ ಮುಂದುವರಿದಿದ್ದು 30 ಮಂದಿ ಎನ್‌ಡಿಆರ್‌ಎಫ್ ಸಿಬ್ಬಂದಿಯಿಂದ ರಕ್ಷಣಾ ಕಾರ್ಯವೂ ಸಾಧ್ಯವಾಗುತ್ತಿಲ್ಲ.   

ಮಡಿಕೇರಿ ಹಾಗೂ ಮಾದಾಪುರದಲ್ಲಿ ಸುರಿಯುತ್ತಿರುವ ಮಳೆಯಿಂದ ಸೋಮವಾರಪೇಟೆ ರಸ್ತೆಯಲ್ಲಿರುವ ಹಟ್ಟಿಹೊಳೆಯ ನೀರು ಪ್ರವಾಹದ ರೀತಿಯಲ್ಲಿ ಉಕ್ಕಿ ಹರಿಯುತ್ತಿದೆ. 

ಇಬ್ಬರ ಸಾವು: ಮಡಿಕೇರಿ ಸಮೀಪದ ಕಾಟಕೇರಿ ಬಳಿ ಗುಡ್ಡ ಕುಸಿದು, ಇಬ್ಬರು ಮಣ್ಣಿನ ಅಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಯಶವಂತ್‌ (35), ವೆಂಕಟರಮಣ್‌ (45) ಮೃತಪಟ್ಟವರು. ಮಣ್ಣಿನಲ್ಲಿ ಸಿಲುಕಿದ್ದ ಯತೀಶ್‌ ಎಂಬುವರ ಸ್ಥಿತಿ ಚಿಂತಾಜನಕವಾಗಿದೆ. ಇನ್ನು ಮಣ್ಣಿನ ಅಡಿ ಹಲವು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. 

ಮಡಿಕೇರಿಯ ಮುತ್ತಪ್ಪ ದೇವಾಲಯದ ಬಳಿ ಮನೆ ಕುಸಿದು ರಸ್ತೆಗೆ ಬಂದು ನಿಂತಿದೆ. ಅಪಾಯ ತಿಳಿದು ಮನೆಯವರನ್ನು ಗಂಜಿಕೇಂದ್ರಕ್ಕೆ ಸ್ಥಳಾಂತರಿಸಿದ ಕಾರಣ ಅಪಾಯ ಸಂಭವಿಸಿಲ್ಲ.  ತೇವಾಂಶ ಹೆಚ್ಚಾಗಿ ಗುಡ್ಡ ಕುಸಿತ ಪ್ರಕರಣಗಳು ಹೆಚ್ಚಾಗುತ್ತಿದ್ದು ಬೆಟ್ಟಗುಡ್ಡಗಳಲ್ಲಿ ವಾಸವಿದ್ದ ಸಾವಿರಾರು ಜನರನ್ನು ಗಂಜಿಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಭಾಗಮಂಡಲ, ನಾಪೋಕ್ಲು, ಕೊಟ್ಟಮುಡಿ, ಅಯ್ಯಂಗೇರಿ, ಬೆಟ್ಟಗೇರಿ, ಆವಂದೂರು, ಯರವನಾಡು, ಗಾಳಿಬೀಡು ಸಂಪರ್ಕ ಕಡಿತಗೊಂಡಿವೆ.

ಹಾರಂಗಿ ಜಲಾಶಯಕ್ಕೆ 75,000 ಸಾವಿರ ಕ್ಯುಸೆಕ್‌ ನೀರು ನದಿಗೆ ಬರುತ್ತಿದ್ದು, 90,000 ಸಾವಿರ ಕ್ಯುಸೆಕ್‌ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಹಲವು ವರ್ಷಗಳ ಬಳಿಕ ಇದು ದಾಖಲೆಯ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದ ಕುಶಾಲನಗರ ಅರ್ಧಭಾಗ ಜಲಾವೃತಗೊಂಡಿದೆ. ಕಣಿವೆ ಸೇತುವೆಯೇ ಕುಸಿಯುವ ಅಪಾಯದಲ್ಲಿದೆ.


ಮಡಿಕೇರಿ– ಸೋಮವಾರಪೇಟೆ ನಡುವೆಯ ರಾಜ್ಯ ಹೆದ್ದಾರಿಯು ಮಳೆ ಅಬ್ಬರಕ್ಕೆ ಕೊಚ್ಚಿ ಹೋಗಿದ್ದು ವಾಹನ ಸಂಚಾರ ಬಂದ್‌ ಆಗಿದೆ

ಜಿಲ್ಲೆ ತೊರೆಯುತ್ತಿರುವ ಸಂತ್ರಸ್ತರು 
ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ ಭೂಮಿಯೊಳಗೆ ಉಂಟಾದ ಭಾರಿ ಶಬ್ದದಿಂದ ಜನರು ಬೆಚ್ಚಿಬಿದ್ದಿದ್ದಾರೆ. ಆ ಬಳಿಕ ಗುಡ್ಡ ಕುಸಿತ ಹಾಗೂ ಮಳೆಯ ಪ್ರತಾಪ ಹೆಚ್ಚಾಗಿದ್ದು, ಹಲವು ಕಡೆ ಊರನ್ನೇ ತೊರೆಯುತ್ತಿದ್ದಾರೆ. ಸೋಮವಾರಪೇಟೆ ಮಕ್ಕಂದೂರು, ಹಟ್ಟಿಹೊಳೆ, ಹಾಲೇರಿ ಆಸುಪಾಸಿನ ಜನರು ಗುರುವಾರ ಮಧ್ಯಾಹ್ನದ ಬಳಿಕ ಊರನ್ನೇ ತೊರೆದರು. ತಂತಿಪಾಲದ ನಂದಿಯಂಚಿನ ಹಲವು ಮನೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಗ್ರಾಮದ ಬಿಕೊ ಎನ್ನುತ್ತಿದೆ. ಜಿಲ್ಲೆಯ ಪ್ರವಾಸಿ ಕೇಂದ್ರಗಳಿಗೆ ಪ್ರವಾಸಿಗರು ಬಾರದಂತೆ ಸೂಚನೆ ನೀಡಿದ್ದು ಜಿಲ್ಲೆಯಲ್ಲಿ ಬಂದ್‌ ವಾತಾವರಣವಿದೆ. ಸಮಸ್ಯೆಗೆ ತುತ್ತಾದವರು ದೂರವಾಣಿ: 08272 221077ಗೆ ಕರೆ ಮಾಡಿ ಮಾಹಿತಿ ತಿಳಿಸಬಹುದು ಎಂದು ಜಿಲ್ಲಾಡಳಿತ ಕೋರಿದೆ.

ಮತ್ತೆ ಕುಸಿತ
ಅರಣ್ಯ ಭವನದಿಂದ 1 ಕಿ.ಮೀ. ದೂರದಲ್ಲಿ ಗುಡ್ಡ ಕುಸಿದ ಪರಿಣಾಮ ಮಡಿಕೇರಿ – ಕುಶಾಲನಗರ ನಡುವೆ ರಾಷ್ಟ್ರೀಯ ಹೆದ್ದಾರಿಯು ಗುರುವಾರ ಮಧ್ಯಾಹ್ನ ಬಳಿಕ ಬಂದ್‌ ಆಗಿದೆ. ಹಲವು ಕಡೆ ಗುಡ್ಡ ಕುಸಿದು ಪರಿಣಾಮ ಸಂಪರ್ಕ ಕಳೆದುಕೊಂಡಿರುವ ಮಡಿಕೇರಿಗೆ ಬರಲು ಉಳಿದಿರುವುದು ಗೋಣಿಕೊಪ್ಪಲು, ಅಮ್ಮತಿ, ಸಿದ್ದಾಪುರ ಮಾತ್ರ. ಮಡಿಕೇರಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳೂ ಬಂದ್‌ ಆಗಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಮಣ್ಣು ತೆರವು ಮಾಡಿದರೆ ಶುಕ್ರವಾರ ಬೆಳಿಗ್ಗೆ ಸಂಚಾರ ಆರಂಭಗೊಳ್ಳುವ ಸಾಧ್ಯತೆಯಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.